ಪ್ರಿಯಾಂಕ್‌ ಖರ್ಗೆ ಅವರೇ ನೀವು ಚಿನ್ನದ ಸ್ಪೂನ್‌ ಇರಿಸಿಕೊಂಡು ಹುಟ್ಟಿದವರು. ನೀವು ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದು ಬೇಕಿಲ್ಲ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಬೆಂಗಳೂರು (ಅ.18): ಪ್ರಿಯಾಂಕ್‌ ಖರ್ಗೆ ಅವರೇ ನೀವು ಚಿನ್ನದ ಸ್ಪೂನ್‌ ಇರಿಸಿಕೊಂಡು ಹುಟ್ಟಿದವರು. ನೀವು ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದು ಬೇಕಿಲ್ಲ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಿಯಾಂಕ್‌ ಖರ್ಗೆಗೆ ಸಾಮಾನ್ಯ ಜ್ಞಾನದ ಕೊರತೆಯಿದೆ. ಅವರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್‌ನಲ್ಲಿ ಇಲ್ಲ ಎಂದು ಯಾರು ಹೇಳಿದರು? ಹೋಗಲಿ ನಿಮ್ಮ ಮಕ್ಕಳಲ್ಲಿ ಎಷ್ಟು ಮಂದಿ ಡಿಎಸ್‌ಎಸ್‌ನಲ್ಲಿದ್ದಾರೆ? ನಾವೆಲ್ಲರೂ ಅಲ್ಲಿಂದ ಹೋರಾಟ ಮಾಡಿ ಬಂದಿದ್ದೇವೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು.

ನಿಮ್ಮ ಮನೆ ಮಕ್ಕಳು ಯಾವ ಸಂಘಟನೆಯಲ್ಲಿ ಹೋರಾಟ ಮಾಡಿದ್ದೀರಿ ಹೇಳಿ? ನೀವು ಚಿನ್ನದ ಸ್ಪೂನ್‌ ಇರಿಸಿಕೊಂಡು ಹುಟ್ಟಿದವರು. ನೀವು ದಲಿತರ ಬಗ್ಗೆ ಮೊಸಳೆ ಕಣ್ಣೀರು ಹಾಕುವುದು ಬೇಕಿಲ್ಲ. ನಿಜವಾದ ಕಾಳಜಿ ಇದ್ದರೆ ದಲಿತರ ಜೊತೆ ಹೋರಾಟ ಮಾಡಿ. ಇನ್ನು ನೀವು ಆರ್‌ಎಸ್‌ಎಸ್‌ ಬಗ್ಗೆ ಏನು ಬೇಕಾದರೂ ಮಾತನಾಡಿ. ಆರ್‌ಎಸ್‌ಎಸ್‌ ಏನೆಂದು ಜನರಿಗೆ ಗೊತ್ತಿದೆ. ಪದೇ ಪದೆ ಆರ್‌ಎಸ್‌ಎಸ್‌ ಬಗ್ಗೆ ನೀವು ಕೇಳಿದರೆ ನಾನು ಮಾತನಾಡಲ್ಲ. ಯಾಕೆಂದರೆ, ಹುಚ್ಚರಿಗೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ ಎಂದರು.

ಆರ್‌ಎಸ್‌ಎಸ್‌ಗೆ ಏನೋ ಮಾಡಲು ಹೋಗಿ ಕ್ಯಾಬಿನೆಟ್‌ನಲ್ಲಿ ಏನಾಯಿತು? ಹಳೇ ಆದೇಶ ಮುಂದಿಟ್ಟು ಆರ್‌ಎಸ್‌ಎಸ್‌ ಬ್ಯಾನ್‌ ಮಾಡಲು ಹೋದಿರಿ? ಯಾರೇ ಆಗಿರಲಿ, ಇನ್ನು ಮುಂದೆ ಸರ್ಕಾರದ ಅನುಮತಿ ಪಡೆಯಬೇಕು ಎಂದಿರಿ. ಆರ್‌ಎಸ್‌ಎಸ್‌ ಭುಜದ ಮೇಲೆ ಗನ್ ಇಟ್ಟು ಗುಂಡು ಹೊಡೆದಿದ್ದು ಮುಸಲ್ಮಾನರ ಮೇಲೆ. ಅವರು ವೋಟ್‌ ಬ್ಯಾಂಕ್‌ ಇರಬಹುದು. ಅವರನ್ನು ನೇರವಾಗಿ ಹದ್ದುಬಸ್ತಿನಲ್ಲಿ ಇರಿಸಲು ಆಗಲಿಲ್ಲ. ಈಗ ತಲ್ವಾರ್‌, ಲಾಂಗ್‌, ಮುಚ್ಚು ಹಿಡಿದು ಓಡಾಡುವುದರಿಂದ ಸಹಿಸಲಾಗದ ಪರಿಸ್ಥಿತಿ ಬಂದಿದೆ. ಹೀಗಾಗಿ ಆರ್‌ಎಸ್‌ಎಸ್‌ನವರ ಹೆಸರು ಹೇಳಿ ಅವರನ್ನು ಅಡಕೆ ಕತ್ತರಿಯಲ್ಲಿ ಇರಿಸಿದ್ದೀರಿ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬೆದರಿಕೆ ಖಂಡಿಸಿ ತಮಟೆ ಚಳವಳಿ

ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಂಡ್ಯ ನಗರದಲ್ಲಿ ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ ತಮಟೆ ಚಳವಳಿ ನಡೆಸಿದರು. ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಘೋಷಣೆ ಕೂಗಿ ಆರ್‌ಎಸ್‌ಎಸ್ ಬ್ಯಾನ್ ಮಾಡುವಂತೆ ಆಗ್ರಹಿಸಿದರು. ಸಚಿವ ಪ್ರಿಯಾಂಕ್ ಖರ್ಗೆ ಮೇಲೆ ಮನುವಾದಿಗಳಿಂದ ದೌರ್ಜನ್ಯ ನಡೆಯುತ್ತಿದೆ. ವೈಯಕ್ತಿಕವಾಗಿ ನಿಂದಿಸುತ್ತಿದ್ದಾರೆ. ತಕ್ಷಣವೇ ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.