ಎನ್‌ಎಸ್‌ಯುಐ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವುದಲ್ಲದೇ, ಸಮಾಜದಲ್ಲಿ ವ್ಯಕ್ತಿಗತವಾಗಿ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಶಿವಮೊಗ್ಗ (ಫೆ.10) : ಎನ್‌ಎಸ್‌ಯುಐ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವುದಲ್ಲದೇ, ಸಮಾಜದಲ್ಲಿ ವ್ಯಕ್ತಿಗತವಾಗಿ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇಲ್ಲಿನ ಇಂದಿರಾ ಗಾಂಧಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌(Congress) ಕಚೇರಿ ಆವರಣದಲ್ಲಿ ಗುರುವಾರ ಜಿಲ್ಲಾ ಎನ್‌ಎಸ್‌ಯುಐ(NSUI) ಕಚೇರಿ ಉದ್ಘಾಟಿಸಿ ಮಾತನಾಡಿ, ನಾನೂ ಕೂಡ ಎನ್‌ಎಸ್‌ಯುಐನಿಂದ ರಾಜಕೀಯ ಜೀವನ ಆರಂಭಿಸಿದೆ. ಇಂದು ರಾಜಕೀಯವಾಗಿ ಎತ್ತರಕ್ಕೆ ಬೆಳೆದಿದ್ದೇನೆ. ಇದಕ್ಕೆ ಕಾರಣ ವಿದ್ಯಾರ್ಥಿ ದೆಸೆಯಲ್ಲಿಯೇ ನನ್ನಲ್ಲಿ ರಾಜಕೀಯ ಪ್ರಜ್ಞೆ ಮೂಡಿದ್ದು ಎಂದ ಅವರು, ಎನ್‌ಎಸ್‌ಯುಐ ದೇಶದ ಮುಂದಿನ ನಾಯಕರನ್ನು ಬೆಳೆಸುತ್ತಿದೆ ಎಂದು ತಿಳಿಸಿದರು.

ಚಿತ್ರದುರ್ಗದ ಮೂರು ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಅಬ್ಬರ: ಬಿಜೆಪಿ ಸರ್ಕಾರದ ವಿರುದ್ದ ಡಿಕೆಶಿ ವಾಗ್ದಾಳಿ

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಬೇರೆಲ್ಲೂ ಎನ್‌ಎಸ್‌ಯುಐ ಇಷ್ಟುಸುಸಜ್ಜಿತ ಕಚೇರಿ ಹೊಂದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ವಿದ್ಯಾರ್ಥಿ ಕಾಂಗ್ರೆಸ್‌ ಮುಖಂಡರು ಸಕ್ರಿಯವಾಗಿದ್ದು ಮಾದರಿ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತು ಮಾಜಿ ಸದಸ್ಯ ಆರ್‌.ಪ್ರಸನ್ನಕುಮಾರ್‌(R Prasannakumar) ಮಾತನಾಡಿ, ನಾನೂ ಕಳೆದ 43 ವರ್ಷಗಳ ಹಿಂದೆ ಎನ್‌ಎ​ಸ್‌​ಯುಐ ಮೂಲಕವೇ ರಾಜಕೀಯ ಜೀವನ ಆರಂಭಿಸಿದ್ದೆ. ಯಾರು ಎನ್‌ಎಸ್‌ಯುಐನಿಂದ ಬಂದಿದ್ದಾರೋ ಅವರು ಎಂದೂ ಕಾಂಗ್ರೆಸ್‌ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಹಾಗೆಯೇ ಪಕ್ಷದ ಬೇರುಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದರು.

ಸೂಡಾ ಮಾಜಿ ಅಧ್ಯಕ್ಷ ಎನ್‌.ರಮೇಶ್‌ ಮಾತನಾಡಿ, ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆ ಯಾಕೆ ಮಾಡಿದರೆಂಬ ಬಗ್ಗೆ ಬಹುತೇಕ ಯುವಕರಿಗೆ ಗೊತ್ತಿಲ್ಲ. ಇಂದು ಮೋದಿ ಸರ್ಕಾರ (Modi government) ಎಲ್ಲ ರಂಗಗಳನ್ನೂ ಖಾಸಗೀಕರಣ ಮಾಡಿ, ನಿರುದ್ಯೋಗ ಸೃಷ್ಟಿಸುತ್ತಿದೆ. ಇದು ಇನ್ನಷ್ಟುಹೆಚ್ಚಾಗುತ್ತ ದೇಶವನ್ನು ಅಧೋಗತಿಗೆ ತಳ್ಳುತ್ತದೆ. ಬಿಜೆಪಿ ನಾಯಕರು(BJP Leaders) ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುವಾದದ ಮೂಲಕ ಬಡವರ ಮಕ್ಕಳನ್ನು ಬಲಿ ಪಡೆಯುತ್ತಿದ್ದಾರೆ. ಇದನ್ನು ಜನರಿಗೆ ತಿಳಿಸುವುದೇ ರಾಹುಲ್‌ ಅವರ ಯಾತ್ರೆ ಉದ್ದೇಶವಾಗಿತ್ತು. ಇಂದಿನ ದಿನಗಳಲ್ಲಿ ರಾಹುಲ್‌ ಅವರಿಗೆ ರಾಜಕೀಯ ಶಕ್ತಿ ತುಂಬುವ ಮೂಲಕ ನಿಮ್ಮ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕಬೇಕು ಎಂದು ತಿಳಿಸಿದರು.

ಫೆ.10ರಂದು ಯಾದಗಿರಿಗೆ ಪ್ರಜಾಧ್ವನಿ ಯಾತ್ರೆ ಆಗಮನ: ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ 'ಸಿದ್ಧು' ಅಸ್ತ್ರ!

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌ಎಸ್‌ ಸುಂದರೇಶ್‌ ಮಾತನಾಡಿ, ಶುಭ ಕೋರಿದರು. ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಚ್‌.ಎಂ. ರೇವಣ್ಣ, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌, ಮಾಜಿ ಸಂಸದ ಉಗ್ರಪ್ಪ, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್‌, ಮಾಜಿ ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್‌, ಮುಖಂಡರಾದ ವಿಜಯಕುಮಾರ್‌, ಕೆ.ದೇವೇಂದ್ರಪ್ಪ, ಸಿ.ಜಿ. ಮಧುಸೂದನ್‌, ಕೆ. ಚೇತನ್‌, ಮಹಮ್ಮದ್‌ ನಿಹಾಲ್‌ ಮುಂತಾದವರಿದ್ದರು.

ಕಾರ್ಯಾಲಯ ಉದ್ಘಾಟನೆಗೆ ಪ್ರಜಾಧ್ವನಿ ಯಾತ್ರೆ ವಾಹನದಲ್ಲಿ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಡೊಳ್ಳು ಬಾರಿಸಿ, ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಿ, ಎನ್‌ಎಸ್‌ಯುಐ ಕಾರ್ಯಕರ್ತರು ಘೋಷಣೆ ಕೂಗಿದರು.