ಕಲಬುರಗಿ ವಿಭಾಗದ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಭರ್ಜರಿ ಜಯ ಸಾಧಿಸಿದ್ದಾರೆ. 3,296 ಮತಗಳ ಅಂತರದಿಂದ ಗೆಲ್ಲುವ ಮೂಲಕ ಅವರು 5ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಕಲಬುರಗಿ (ಅ.27): ರಾಜ್ಯ ರಾಜಕೀಯದಲ್ಲಿ ಖರ್ಗೆ ಕುಟುಂಬದ ಹಿಡಿತವಿರುವ ಕಲಬುರಗಿ ವಿಭಾಗದಲ್ಲಿ ಕುತೂಹಲ ಮೂಡಿಸಿದ್ದ ಈಶಾನ್ಯ ಶಿಕ್ಷಕರ ಮತಕ್ಷೇತ್ರದ (North-East Teachers' Constituency) ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ (Shashil G Namoshi) ಭರ್ಜರಿ ವಿಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ವಿರುದ್ಧ 3,296 ಮತಗಳ ಬೃಹತ್ ಅಂತರದಿಂದ ಜಯಗಳಿಸುವ ಮೂಲಕ ನಮೋಶಿ ಈ ಕ್ಷೇತ್ರದಿಂದ 5ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಈ ಫಲಿತಾಂಶದಿಂದ ತೀವ್ರ ಮುಖಭಂಗವಾಗಿದ್ದು, ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಕಾರ್ಯಕರ್ತರು ಕೇಸರಿ ಧ್ವಜ ಹಾರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಮೊದಲ ಪ್ರಾಶಸ್ತ್ಯದ ಮತದಲ್ಲೇ ನಮೋಶಿ ಜಯಭೇರಿ!
ಕಲಬುರಗಿ ವಿವಿಯ ಗಣಿತ ವಿಜ್ಞಾನ ವಿಭಾಗದಲ್ಲಿ ನಡೆದ ಮತ ಎಣಿಕೆಯಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಶಶೀಲ್ ನಮೋಶಿ ಅವರು ಅಗತ್ಯವಿದ್ದ ಕೋಟಾ ಮತಗಳನ್ನು ಗಳಿಸಿ ಗೆಲುವಿನ ಮೆಟ್ಟಿಲೇರಿದರು.
ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಪಡೆದ ಮತಗಳು: 15,596
ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಪಡೆದ ಮತಗಳು: 12,299
ಗೆಲುವಿನ ಅಂತರ: 3,296 ಮತಗಳು
ಜೀವ ಇರುವವರೆಗೆ ಶಿಕ್ಷಕರ ಸೇವೆ ಮಾಡುವೆ: ಶಶೀಲ್ ನಮೋಶಿ
ಗೆಲುವಿನ ಬಳಿಕ ಸುವರ್ಣ ನ್ಯೂಸ್ ಜೊತೆ ಪ್ರತ್ಯೇಕವಾಗಿ ಮಾತನಾಡಿದ ನೂತನ ಎಂಎಲ್ಸಿ ಶಶೀಲ್ ನಮೋಶಿ, 'ಈ ಗೆಲುವು ನನ್ನದಲ್ಲ, ಕ್ಷೇತ್ರದ ಸಮಸ್ತ ಶಿಕ್ಷಕರ ಗೆಲುವು. ಶಿಕ್ಷಕ ಸಮುದಾಯವು ನನ್ನ ಮೇಲಿಟ್ಟಿರುವ ಅಪಾರ ನಂಬಿಕೆಯಿಂದಾಗಿ ಐದನೇ ಬಾರಿಗೆ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ನನ್ನ ಉಸಿರಿರುವವರೆಗೂ ಶಿಕ್ಷಕರ ಧ್ವನಿಯಾಗಿ, ಅವರ ಹಕ್ಕುಗಳಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತೇನೆ' ಎಂದು ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು.
2028ರ ಸಾರ್ವತ್ರಿಕ ಚುನಾವಣೆಗೆ ಇದು ದಿಕ್ಸೂಚಿ:
ಮತ ಎಣಿಕೆ ಕೇಂದ್ರದಲ್ಲಿ ಉಪಸ್ಥಿತರಿದ್ದ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, 'ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ರಾಜ್ಯದ ಪ್ರಜ್ಞಾವಂತ ಶಿಕ್ಷಕ ಮತದಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ರೋಸಿಹೋಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಎಲ್ಲಾ ನಾಲ್ಕೂ ವಿಧಾನ ಪರಿಷತ್ ಚುನಾವಣೆಗಳಲ್ಲೂ ಬಿಜೆಪಿಯೇ ಜಯಭೇರಿ ಬಾರಿಸಲಿದೆ. ಶಿಕ್ಷಕರ ಮತ್ತು ಪದವೀಧರರ ಈ ಬೆಂಬಲವು ಮುಂಬರುವ 2028ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಲಿದೆ' ಎಂದು ಹರ್ಷ ವ್ಯಕ್ತಪಡಿಸಿದರು.
ಐದನೇ ಬಾರಿಗೆ ಗೆದ್ದು ಬೀಗಿದ ಶಶೀಲ್ ನಮೋಶಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.






