Asianet Suvarna News Asianet Suvarna News

Karnataka Assembly Elections 2023: ಇಂದಿನಿಂದ ನಾಮಪತ್ರ ಭರಾಟೆ..!

ಆಯೋಗವು ಅಧಿಕೃತವಾಗಿ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ಮತದಾನದ ಸಮಯ ಸೇರಿದಂತೆ ಇತರೆ ಪ್ರಮುಖ ವಿಷಯಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. 

Nomination Process will Start from April 13th of Karnataka Assembly Elections 2023 grg
Author
First Published Apr 13, 2023, 5:30 AM IST

ಬೆಂಗಳೂರು(ಏ.13):  ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಗುರುವಾರ ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಇಂದು(ಗುರುವಾರ)ದಿಂದ ಏ.20ರವರೆಗೆ ನಡೆಯಲಿದೆ. ಅಂದರೆ, ಈ ಗುರುವಾರದಿಂದ ಮುಂದಿನ ಗುರುವಾರದವರೆಗೆ. ಮರುದಿನ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ಏ.24ರಂದು ಕೊನೆಯ ದಿನವಾಗಿದೆ. ಅಂದು ಮಧ್ಯಾಹ್ನ 3 ಗಂಟೆಯೊಳಗಾಗಿ ನಾಮಪತ್ರ ಹಿಂಪಡೆಯಬಹುದು. ಮೇ 10ರಂದು ಮತದಾನ ಜರುಗಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಆಯೋಗವು ಅಧಿಕೃತವಾಗಿ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ಮತದಾನದ ಸಮಯ ಸೇರಿದಂತೆ ಇತರೆ ಪ್ರಮುಖ ವಿಷಯಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ರಾಜಕೀಯ ಪಕ್ಷಗಳು ಘೋಷಣೆ ಮಾಡಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕಾರ್ಯವನ್ನು ಆರಂಭಿಸಲಿದ್ದಾರೆ.

ಬೆಂಗಳೂರು: ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮೊದಲೇ ಗಂಗಾಂಬಿಕೆ ನಾಮಪತ್ರ ಸಲ್ಲಿಕೆಗೆ ಸಿದ್ಧತೆ..!

ನಾಮಪತ್ರ ಸಲ್ಲಿಸಲು ಸಮಯ ನಿಗದಿಪಡಿಸಲಾಗಿದೆ. ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದು. ತಮ್ಮ ಸಮಯವನ್ನು ಆನ್‌ಲೈನ್‌ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಮತ್ತು 16ರಂದು ಭಾನುವಾರ ಸಾರ್ವತ್ರಿಕ ರಜೆ ದಿನವಾಗಿರುವುದರಿಂದ ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ.

ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸೇರಿದಂತೆ ಒಟ್ಟು ಐವರಿಗೆ ಮಾತ್ರ ಚುನಾವಣಾಧಿಕಾರಿಗಳ ಕಚೇರಿ ಪ್ರವೇಶಿಸಲು ಅವಕಾಶ ಇದೆ. 100 ಮೀಟರ್‌ ವ್ಯಾಪ್ತಿಯಲ್ಲಿ ಮೂರು ವಾಹನಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಚುನಾವಣೆಗೆ ಅವಶ್ಯವಿರುವ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 146 ವೆಚ್ಚ ನಿರ್ವಹಣಾ ವೀಕ್ಷಕರು, 120 ಸಾಮಾನ್ಯ ವೀಕ್ಷಕರು ಸೇರಿದಂತೆ 37 ಪೊಲೀಸ್‌ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ 5.24 ಕೋಟಿ ಮತದಾರರಿದ್ದು, 2.63 ಕೋಟಿ ಪುರುಷರು ಮತ್ತು 2.60 ಕೋಟಿ ಮಹಿಳೆ ಮತದಾರರಿದ್ದಾರೆ. 18-19 ವರ್ಷದೊಳಗಿನ ಯುವ ಮತದಾರರು 9.58 ಲಕ್ಷ ನೋಂದಣಿಯಾಗಿದ್ದು, 80 ವರ್ಷಕ್ಕಿಂತ ಮೇಲ್ಪಟ್ಟಮತದಾರರು 12.15 ಲಕ್ಷ ಮಂದಿ ಇದ್ದಾರೆ. 100 ವರ್ಷ ದಾಟಿರುವ 16,976 ಮತದಾರರಿದ್ದಾರೆ. 5.60 ಲಕ್ಷ ಅಂಗವಿಕಲ ಮತದಾರರಿದ್ದು, ಒಂದು ಲಕ್ಷಕ್ಕೂ ಅಧಿಕ ಲೈಂಗಿಕ ಕಾರ್ಯಕರ್ತ ಮತದಾರರಿದ್ದಾರೆ. 41,312 ತೃತೀಯ ಲಿಂಗಿಗಳಿದ್ದು, ಈ ಪೈಕಿ ತಾವು ತೃತೀಯ ಲಿಂಗಿಗಳು ಎಂದು ಗುರುತಿಸಿಕೊಂಡವರು 4751 ಮಂದಿ ಇದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, 189 ಮಂದಿಗೆ ಟಿಕೆಟ್ ಘೋಷಣೆ, 52 ಹೊಸ ಮುಖ!

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆಯೋಗವು ವೆಚ್ಚದ ಮಿತಿಯನ್ನು ನಿಗದಿಗೊಳಿಸಿದ್ದು, ಪ್ರತಿ ಅಭ್ಯರ್ಥಿಗೆ 40 ಲಕ್ಷ ರು.ವರೆಗೆ ಚುನಾವಣಾ ವೆಚ್ಚವನ್ನು ನಿಗದಿಗೊಳಿಸಿದೆ. ಅಭ್ಯರ್ಥಿಗಳು ವೆಚ್ಚ ಮಾಡುವ ಮೊತ್ತದ ಮೇಲೆ ನಿಗಾವಹಿಸಲು 234 ಸಹಾಯಕ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಚುನಾವಣಾ ಕಾರ್ಯಕ್ಕಾಗಿ ರಾಜ್ಯದೆಲ್ಲೆಡೆ 3.51 ಲಕ್ಷ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ 17,276 ಮಂದಿಯನ್ನು ಸೂಕ್ಷ್ಮ ವೀಕ್ಷಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಯಾವುದೇ ಚುನಾವಣೆಯಲ್ಲಿ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲೇ ಕಡಿಮೆ ಮತದಾನವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದೆಯೋ ಅಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಲು ಆಯೋಗವು ಸೂಕ್ತ ಕ್ರಮ ಕೈಗೊಂಡಿದೆ.

Follow Us:
Download App:
  • android
  • ios