ಕುತೂಹಲ ಕೆರಳಿಸಿದ ಮಾಜಿ ಮೇಯರ್‌ ಗಂಗಾಂಬಿಕೆ ನಡೆ, 13ರಂದು ನಾಮಪತ್ರ ಸಲ್ಲಿಕೆಗೆ ಸಿದ್ಧತೆ, ಮಾಜಿ ಶಾಸಕ ಆರ್‌.ವಿ.ದೇವರಾಜ್‌ ಜೊತೆ ಟಿಕೆಟ್‌ಗಾಗಿ ಪೈಪೋಟಿ, ಗಂಗಾಂಬಿಕೆ ನಿವಾಸದಲ್ಲಿ ಬೆಂಬಲಿಗರೊಂದಿಗೆ ಸಭೆ, ದಿನಾಂಕ ನಿಗದಿ. 

ಬೆಂಗಳೂರು(ಏ.12): ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಬಾಕಿ ಇದ್ದು, ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಮತ್ತು ಮಾಜಿ ಶಾಸಕ ಆರ್‌.ವಿ.ದೇವರಾಜ್‌ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಇದರ ನಡುವೆಯೇ ಪ್ರಬಲ ಆಕಾಂಕ್ಷಿ ಗಂಗಾಂಬಿಕೆ ಅವರು ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿಪಡಿಸಿಕೊಂಡಿದ್ದಾರೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುವ ಮೊದಲ ದಿನವಾದ ಏಪ್ರಿಲ್‌ 13ರಂದು ತಮ್ಮ ನಾಮಪತ್ರ ಸಲ್ಲಿಸಲು ಗಂಗಾಂಬಿಕೆ ಅವರು ದಿನಾಂಕ ನಿಗದಿಪಡಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅಂದು ಬೆಳಗ್ಗೆ 11ಕ್ಕೆ ಜಯನಗರದ ಅಶೋಕ ಪಿಲ್ಲರ್‌ನಿಂದ ಸೌತ್‌ ಎಂಟ್‌ ವೃತ್ತದ ವರೆಗೂ ಸ್ನೇಹಿತರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜತೆ ಪಾದಯಾತ್ರೆ ಮೂಲಕ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ಮಧ್ಯೆ, ಮಂಗಳವಾರ ಗಂಗಾಂಬಿಕೆ ಅವರ ನಿವಾಸದಲ್ಲಿ ನಡೆದ ಬೆಂಬಲಿಗರ ಸಭೆಯ ವೇಳೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆಜಿಎಫ್‌ ಬಾಬು ಕೂಡ ಪ್ರತ್ಯಕ್ಷವಾಗಿ ಗಂಗಾಂಬಿಕೆ ಅವರಿಗೆ ಟಿಕೆಟ್‌ ನೀಡಿದರೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಕುಮಾರಸ್ವಾಮಿ ಸಮೀಕ್ಷೆ ಕುರಿತು ನನಗೆ ಗೊತ್ತಿಲ್ಲ: ರೇವಣ್ಣ

ಪಕ್ಷ ಅಭ್ಯರ್ಥಿ ಘೋಷಣೆ ಮಾಡುವ ಮೊದಲೇ ನಾಮಪತ್ರ ಸಲ್ಲಿಕೆಗೆ ದಿನಾಂಕ ಘೋಷಿಸಿಕೊಂಡಿದ್ದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಗಂಗಾಂಬಿಕೆ ಅವರು, ಪಕ್ಷ ಇನ್ನೂ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿ ಹೆಸರು ಘೋಷಿಸಿಲ್ಲ. ಯಾವುದೇ ಕ್ಷಣದಲ್ಲಿ ಪಕ್ಷದ ಟಿಕೆಟ್‌ ಪ್ರಕಟ ಆಗಬಹುದು. ಕೊನೆಯ ಕ್ಷಣದಲ್ಲಿ ದಿನಾಂಕ ನಿಗದಿ ಸೇರಿದಂತೆ ತಯಾರಿ ಕಷ್ಟ. ಅಲ್ಲದೆ, ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿರುವ ದಿನಗಳಲ್ಲಿ ಏ.13ರ ಗುರುವಾರ ಅತ್ಯಂತ ಪ್ರಾಶಸ್ತ್ಯವಾದ ದಿನವಾಗಿದೆ. ಬಿ. ಫಾರಂ ಸಲ್ಲಿಸಲು 20ನೇ ತಾರೀಕಿನ ವರೆಗೆ ಸಮಯ ಇರುತ್ತದೆ. ಹಾಗಾಗಿ ಮೊದಲ ದಿನವೇ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಪಡಿಸಿಕೊಂಡಿದ್ದೇನೆ ಎಂದು ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.