Asianet Suvarna News Asianet Suvarna News

ಮೈತ್ರಿ ಉದ್ದೇಶಕ್ಕೆ ತಮಿಳುನಾಡಿಗೆ ನೀರು ಬಿಟ್ಟಿಲ್ಲ: ಡಿ.ಕೆ.ಶಿವಕುಮಾರ್‌

ರಾಜ್ಯ ಸರ್ಕಾರವು ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ನ್ಯಾಯಾಲಯದ ಆದೇಶ ಗೌರವಿಸಿ, ಅದನ್ನು ಪಾಲಿಸಿದ್ದೇವೆ. ಕಾವೇರಿ ವಿಚಾರದಲ್ಲಿ ನಾವು ಕಾನೂನು, ಸಂವಿಧಾನ ಹಾಗೂ ಕೋರ್ಟ್‌ ಆದೇಶಕ್ಕೆ ಗೌರವ ನೀಡಬೇಕು.

No water left for Tamil Nadu for alliance purpose Says DK Shivakumar gvd
Author
First Published Aug 18, 2023, 11:39 PM IST

ಬೆಂಗಳೂರು (ಆ.18): ರಾಜ್ಯ ಸರ್ಕಾರವು ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ನ್ಯಾಯಾಲಯದ ಆದೇಶ ಗೌರವಿಸಿ, ಅದನ್ನು ಪಾಲಿಸಿದ್ದೇವೆ. ಕಾವೇರಿ ವಿಚಾರದಲ್ಲಿ ನಾವು ಕಾನೂನು, ಸಂವಿಧಾನ ಹಾಗೂ ಕೋರ್ಟ್‌ ಆದೇಶಕ್ಕೆ ಗೌರವ ನೀಡಬೇಕು. ಹಿಂದಿನ ಸರ್ಕಾರಗಳೂ ಇದನ್ನೇ ಮಾಡಿವೆ. ಅಗತ್ಯವಿದ್ದರೆ ಜೆಡಿಎಸ್‌, ಬಿಜೆಪಿ ನೀರು ಬಿಟ್ಟಿರುವ ದಾಖಲೆಗಳನ್ನು ಮುಂದಿಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇದ್ದ ಸರ್ಕಾರಗಳು ನ್ಯಾಯಾಲಯದ ಆದೇಶಗಳನ್ನು ಇದೇ ರೀತಿ ಪಾಲಿಸಿವೆ. ಆದರೆ, ನಮ್ಮ ರೈತರ ಹಿತ ಕಾಪಾಡುವ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ. ನೀರು ಬಿಟ್ಟಿರುವುದನ್ನು ಪ್ರಶ್ನಿಸಿ ವಿರೋಧ ಮಾಡುವುದು ಸಹಜ. ಮಳೆ ಕಡಿಮೆ ಆಗಿರುವುದರಿಂದ ಕೃಷಿಗೆ ಮಾತ್ರವಲ್ಲ, ಕುಡಿಯಲು ಸಹ ನೀರಿಲ್ಲದಂತಾಗಿದೆ. ಇದೇ ಕಾರಣಕ್ಕೆ ಪ್ರಾಧಿಕಾರಕ್ಕೆ ತನ್ನ ನಿರ್ಧಾರ ಪುನರ್‌ಪರಿಶೀಲಿಸಲು ಮನವಿ ಮಾಡಿದ್ದೇವೆ ಎಂದರು.

ಬಿಜೆಪಿಗರು ಕಾಂಗ್ರೆಸ್‌ಗೆ ಹೋಗಲ್ಲ, ನಾಳೆ ಏನಾಗುತ್ತೋ ಗೊತ್ತಿಲ್ಲ: ಪ್ರಲ್ಹಾದ್‌ ಜೋಶಿ

ದಾಖಲೆ ನೀಡುತ್ತೇನೆ: ಈ ಹಿಂದೆ ಇಂತಹ ಪರಿಸ್ಥಿತಿಯಲ್ಲಿ ಜೆಡಿಸ್‌ ದಳ ಹಾಗೂ ಬಿಜೆಪಿ ಸರ್ಕಾರಗಳು ಎಷ್ಟುನೀರು ಬಿಟ್ಟಿದ್ದವು ಎಂಬ ಅಂಕಿ ಅಂಶ ಸಹಿತ ದಾಖಲೆ ನೀಡಬಲ್ಲೆ. ಆದರೆ, ಈ ವಿಚಾರದಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ. ಕಾವೇರಿ, ಮಹಾದಾಯಿ, ಕೃಷ್ಣಾ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯಲು ಆಲೋಚಿಸಿದ್ದೇವೆ. ಕೇಂದ್ರದಲ್ಲಿ ಬಲಿಷ್ಠ ಸರ್ಕಾರ ಅಧಿಕಾರದಲ್ಲಿದ್ದರೂ ಮಹಾದಾಯಿ, ಕೃಷ್ಣ ವಿಚಾರ ಇತ್ಯರ್ಥವಾಗಿಲ್ಲ. ಈ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಎನ್‌ಇಪಿ ರದ್ದತಿ ಬಗ್ಗೆ ಮೊದಲೇ ಮಾತು ಕೊಟ್ಟಿದ್ದೆವು: ಎನ್‌ಇಪಿ ರದ್ದು ವಿಚಾರವಾಗಿ ಮಾತನಾಡಿದ ಅವರು, ನಾವು ಎನ್‌ಇಪಿ ಜಾರಿ ಆರಂಭದಲ್ಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರದ್ದು ಮಾಡುವುದಾಗಿ ಹೇಳಿದ್ದೆವು. ಈಗ ಆ ಬಗ್ಗೆ ಚಿಂತನೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಬಹಳ ತರಾತುರಿಯಲ್ಲಿ ಮೂಲಸೌಕರ್ಯ ಇಲ್ಲದೇ ಇದನ್ನು ಜಾರಿಗೆ ತಂದಿತ್ತು. ಈ ಎನ್‌ಇಪಿಯನ್ನು ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ಜಾರಿ ಮಾಡಿದರು? ಬಿಜೆಪಿ ಸರ್ಕಾರ ಇರುವ ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಹಾಗೂ ಗುಜರಾತ್‌ನಲ್ಲಿ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಶ್ರಮಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ನಮ್ಮಲ್ಲಿರುವ ಶಿಕ್ಷಣ ವ್ಯವಸ್ಥೆ ಸರಿ ಇರಲಿಲ್ಲವೇ? ಇಡೀ ಪ್ರಪಂಚದಲ್ಲಿನ ಜನ ಬೆಂಗಳೂರನ್ನು ಐಟಿ, ಶಿಕ್ಷಣ ರಾಜಧಾನಿ, ಸಿಲಿಕಾನ್‌ ವ್ಯಾಲಿ ಎಂದು ಕರೆಯುತ್ತಾರೆ. ನಮ್ಮಲ್ಲಿರುವ ಶಿಕ್ಷಣ ಗುಣಮಟ್ಟಇದಕ್ಕೆ ಕಾರಣ. ಎನ್‌ಇಪಿಯಲ್ಲಿ ಉತ್ತಮ ಅಂಶ ಇದ್ದರೆ ಅದನ್ನು ಪರಿಗಣಿಸುತ್ತೇವೆ. ಇದು ಬಿಜೆಪಿಯ ರಾಜಕೀಯ ಅಜೆಂಡಾ. ಎನ್‌ಇಪಿ ಎಂದರೆ ನಾಗಪುರ ಶಿಕ್ಷಣ ನೀತಿ ಎಂದು ಟೀಕಿಸಿದರು.

Follow Us:
Download App:
  • android
  • ios