ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಶ್ರಮಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವುದು ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಶಾಸಕರು ಗ್ಯಾರಂಟಿ ಯೋಜನೆಗಳನ್ನು ಮನೆ-ಮನೆಗೆ ತಲುಪಿಸಬೇಕು.
 

CM Siddaramaiah Talks Over Lok Sabha Election gvd

ಬೆಂಗಳೂರು (ಆ.18): ‘ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವುದು ಸೇರಿದಂತೆ ಎಲ್ಲಾ ರೀತಿಯ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಶಾಸಕರು ಗ್ಯಾರಂಟಿ ಯೋಜನೆಗಳನ್ನು ಮನೆ-ಮನೆಗೆ ತಲುಪಿಸಬೇಕು. ತನ್ಮೂಲಕ ಲೋಕಸಭೆ ಚುನಾವಣೆ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪಕ್ಷಕ್ಕೆ ಭರ್ಜರಿಗೆ ಗೆಲುವು ದೊರಕಿಸಿಕೊಡಬೇಕು. ಈ ನಿಟ್ಟಿನಲ್ಲಿ ತಕ್ಷಣದಿಂದ ಕಾರ್ಯಪ್ರವೃತ್ತರಾಗಬೇಕು’ ಎಂದು ಮೈಸೂರು ಸೇರಿದಂತೆ ಆರು ಜಿಲ್ಲೆಗಳ ಕೈ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸ್ಪಷ್ಟಸೂಚನೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಮೈಸೂರು, ಶಿವಮೊಗ್ಗ, ಗದಗ, ಚಿಕ್ಕಮಗಳೂರು, ಚಾಮರಾಜನಗರ ಹಾಗೂ ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಚಿವರು, ಶಾಸಕರು, ಪರಿಷತ್‌ ಸದಸ್ಯರೊಂದಿಗೆ ಸಮನ್ವಯ ಸಭೆ ನಡೆಸಲಾಯಿತು.

ಕಾವೇರಿ ರೈತರಿಗೆ ಕಾಂಗ್ರೆಸ್‌ ವಿಶ್ವಾಸದ್ರೋಹ: ಎಚ್‌.ಡಿ.ಕುಮಾರಸ್ವಾಮಿ

ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯ ಸಾಧಿಸಿ ಶಾಸಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರವು 50 ಸಾವಿರ ಕೋಟಿಗೂ ಹೆಚ್ಚು ಅನುದಾನ ವೆಚ್ಚ ಮಾಡಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕು. ಮನೆ-ಮನೆಗೂ ಗ್ಯಾರಂಟಿ ಯೋಜನೆಗಳ ಮಾಹಿತಿ ತಲುಪಬೇಕು. ಈ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಗ್ಯಾರಂಟಿಗಳ ಯಶಸ್ಸಿನ ಲಾಭವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮೈಸೂರು ಹಾಗೂ ಚಾಮರಾಜನಗರ ಲೋಕಸಭೆ ಚುನಾವಣೆಯನ್ನು ಶತಾಯಗತಾಯ ಗೆಲ್ಲಬೇಕು. ಬಿಬಿಎಂಪಿ ಚುನಾವಣೆ ಸಮಯದಲ್ಲೇ ಮೈಸೂರು ಪಾಲಿಕೆ ಚುನಾವಣೆಯೂ ಬರುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೈಸೂರು ಪಾಲಿಕೆ ಚುನಾವಣೆಯನ್ನು ನಿರ್ಲಕ್ಷ್ಯ ಮಾಡಬಾರದು. ಬೇರೆ ಜಿಲ್ಲೆಗಳ ನಾಯಕರೂ ಸಹ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿಶೇಷ ಆದ್ಯತೆ ನೀಡಿ ಕೆಲಸ ಮಾಡಬೇಕು. ಯಾವ ಹಂತದಲ್ಲೂ ಪಕ್ಷಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿವಮೊಗ್ಗ ಜಿಲ್ಲೆಯ ಸಭೆ ವೇಳೆ ಅನುದಾನ ಕೊರತೆ ಜತೆಗೆ ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಮೈಸೂರು ಪೇಪರ್‌ ಮಿಲ್ಸ್‌ ಬಗ್ಗೆ ವಿಸ್ತೃತವಾಗಿ ಚರ್ಚೆಯಾಯಿತು. ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಜತೆಗೆ ಶಾಸಕರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಯಿತು. ಗೀತಾ ಶಿವರಾಜ್‌ಕುಮಾರ್‌, ಕಿಮ್ಮನೆ ರತ್ನಾಕರ್‌ ಸೇರಿದಂತೆ ಮೂರ್ನಾಲ್ಕು ಮಂದಿಯ ಹೆಸರು ಪ್ರಸ್ತಾಪವಾಯಿತು. ಅಂತಿಮವಾಗಿ ಒಮ್ಮತದ ಅಭ್ಯರ್ಥಿಯ ಹೆಸರು ತೆಗೆದುಕೊಂಡು ಬರುವಂತೆ ಶಾಸಕರಿಗೆ ಮುಖ್ಯಮಂತ್ರಿಯವರು ಸೂಚಿಸಿದರು ಎಂದು ತಿಳಿದುಬಂದಿದೆ.

ಇನ್ನು ವಿಜಯನಗರ ಜಿಲ್ಲೆ ಶಾಸಕರ ಸಭೆ ವೇಳೆ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ಖಾನ್‌ ಅವರು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದರು. ಇದಕ್ಕೂ ಮೊದಲು ಗದಗ ಹಾಗೂ ಚಾಮರಾಜನಗರ ಶಾಸಕರೂ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದರು.

ಮೈಸೂರಿನಲ್ಲಿ ‘ಯುವನಿಧಿಗೆ’ ಚಾಲನೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ನಿರುದ್ಯೋಗಿ ಪದವೀಧರರಿಗೆ ಮಾಸಿಕ ಸಹಾಯಧನ ನೀಡುವ ‘ಯುವನಿಧಿ’ ಯೋಜನೆಗೆ ನವೆಂಬರ್‌ ಕೊನೆಯ ವಾರದಲ್ಲಿ ಮೈಸೂರು ನಗರದಲ್ಲಿ ಚಾಲನೆ ನೀಡುವ ಬಗ್ಗೆ ಮೈಸೂರು ಜಿಲ್ಲೆ ಶಾಸಕರ ಸಭೆಯಲ್ಲಿ ಚರ್ಚಿಸಲಾಗಿದೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರಲ್ಲಿ ಚಾಲನೆ ನೀಡಿದ್ದ ಅನ್ನಭಾಗ್ಯ ಯೋಜನೆ 10 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ಅನ್ನಭಾಗ್ಯದ ಹತ್ತು ವರ್ಷಗಳ ಆಚರಣೆಯನ್ನೂ ಮಾಡಲು ತೀರ್ಮಾನಿಸಿರುವುದಾಗಿ ಮೂಲಗಳು ತಿಳಿಸಿವೆ.

ಹಿರಿಯ ರಾಜಕಾರಣಿ ಕಾಗೋಡು ತಿಮ್ಮ​ಪ್ಪರಿಗೆ ದೇವ​ರಾಜ ಅರಸು ಪ್ರಶ​ಸ್ತಿ ಗರಿ

ಭದ್ರಾವತಿ ಉಕ್ಕಿನ ಕಾರ್ಖಾನೆ ಕುರಿತು ಕೇಂದ್ರಕ್ಕೆ ಶಿಫಾರಸು: ಶಿವಮೊಗ್ಗ ಜಿಲ್ಲಾ ಶಾಸಕರ ಸಭೆಯ ವೇಳೆ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್‌ಎಲ್‌) ಪುನಶ್ಚೇತನದ ಬಗ್ಗೆ ಹಾಗೂ ಮೈಸೂರು ಪೇಪರ್‌ ಮಿಲ್ಸ್‌ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ವಿಐಎಸ್‌ಎಲ್‌ ಪುನರ್‌ ಆರಂಭಕ್ಕೆ ಕೇಂದ್ರದ ನೆರವು ಅಗತ್ಯ. ಈ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸು ಮಾಡಲು ಹಾಗೂ ಮೈಸೂರು ಪೇಪರ್‌ ಮಿಲ್ಸ್‌ ಕಾರ್ಯಾರಂಭಕ್ಕೆ ರಾಜ್ಯ ಸರ್ಕಾರದದಿಂದ ಅಗತ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. 

Latest Videos
Follow Us:
Download App:
  • android
  • ios