ಸೋತಿದ್ದಕ್ಕೆ ಎದೆಗುಂದಬೇಕಿಲ್ಲ: ಶಾಸಕರಿಗೆ ಧೈರ್ಯ ತುಂಬಿದ ಎಚ್.ಡಿ.ದೇವೇಗೌಡ
ಸದನದಲ್ಲಿ ಸಂಖ್ಯಾಬಲ ಕಡಿಮೆ ಇದೆ ಎಂದು ಎದೆಗುಂದಬೇಕಾಗಿಲ್ಲ. ಹಿಂದಿನ ಲೋಕಸಭೆಯಲ್ಲಿಯೂ ಪಕ್ಷದ ಪರವಾಗಿ ಒಬ್ಬನೇ ಇದ್ದೆ. ಈಗಲೂ ನಮಗೆ ಒಬ್ಬರೇ ಸಂಸದರಿದ್ದಾರೆ. ಹಾಗಂತ ನಮ್ಮ ಹೋರಾಟದ ಕಿಚ್ಚು ಕಡಿಮೆಯಾಗಿದೆಯಾ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.
ಬೆಂಗಳೂರು (ಮೇ.25): ಸದನದಲ್ಲಿ ಸಂಖ್ಯಾಬಲ ಕಡಿಮೆ ಇದೆ ಎಂದು ಎದೆಗುಂದಬೇಕಾಗಿಲ್ಲ. ಹಿಂದಿನ ಲೋಕಸಭೆಯಲ್ಲಿಯೂ ಪಕ್ಷದ ಪರವಾಗಿ ಒಬ್ಬನೇ ಇದ್ದೆ. ಈಗಲೂ ನಮಗೆ ಒಬ್ಬರೇ ಸಂಸದರಿದ್ದಾರೆ. ಹಾಗಂತ ನಮ್ಮ ಹೋರಾಟದ ಕಿಚ್ಚು ಕಡಿಮೆಯಾಗಿದೆಯಾ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ. ಬುಧವಾರ ಪದ್ಮನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ನೂತನ ಶಾಸಕರು ಸೇರಿದಂತೆ ಇತರೆ ಮುಖಂಡರ ಜತೆ ಸಭೆ ನಡೆಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
19 ಸೀಟು ಗೆದ್ದಿದ್ದೇವೆ ಎಂಬ ಆತಂಕ ಬೇಡ. 119 ಸ್ಥಾನ ಗೆಲ್ಲುವ ದಿಕ್ಕಿನಲ್ಲಿ ಕೆಲಸ ಮಾಡೋಣ. ನಾನು ಬದುಕಿರುವ ತನಕ ಪಕ್ಷಕ್ಕಾಗಿ ದುಡಿಯುತ್ತೇನೆ. ನೀವು ಯಾರೂ ಧೈರ್ಯ ಕಳೆದುಕೊಳ್ಳಬೇಡಿ. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಂಡು ಜನತೆ ಜತೆ ನಿಂತು ಕೆಲಸ ಮಾಡೋಣ. ಪ್ರಾಮಾಣಿಕತೆ, ಬದ್ಧತೆ, ಅಚಲತೆಯಿಂದ ದುಡಿದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ಕಷ್ಟವಲ್ಲ ಎಂದು ಕಿವಿಮಾತು ಹೇಳಿದರು. ನಾನು ಸಹ ಸೋಲು ಅನುಭವಿಸಿದ್ದೇನೆ. ಗೆದ್ದಿದ್ದೇನೆ. ಸೋತಾಗ ಹೆದರಿ ಮನೆ ಸೇರಿಕೊಂಡಿಲ್ಲ, ಗೆದ್ದಾಗ ಬೀಗಿಲ್ಲ.
ಭರವಸೆ ನೀಡುವಾಗ ನಿಮಗೆ ತಲೆ ಇರಲಿಲ್ಲವೇ, ಕರೆಂಟ್ ಬಿಲ್ ಕಟ್ಟದಂತೆ ಕರೆ ನೀಡುವೆ: ಎಚ್‌ಡಿಕೆ
ಎಲ್ಲಾ ಸಮಯದಲ್ಲಿಯೂ ಶ್ರದ್ಧೆ, ವಿನಯದಿಂದ ಜನರ ಕೆಲಸ ಮಾಡಿದ್ದೇನೆ. ಆಡಳಿತ ಪಕ್ಷದ ವಿರುದ್ಧ ಹೋರಾಟ ನಡೆಸಿದ್ದೇನೆ. 1962ರಲ್ಲಿ ಪಕ್ಷೇತರ ಶಾಸಕನಾಗಿ ಗೆದ್ದುಬಂದು ಈ ನೆಲ ಜಲಕ್ಕಾಗಿ ಹೋರಾಟ ನಡೆಸಿದವನು ನಾನು. ಒಬ್ಬನೇ ಶಾಸಕ ಎಂದು ನಾನು ಕೈಕಟ್ಟಿಕೂತಿದ್ದರೆ ಕಾವೇರಿ ನೀರಿನ ಸದ್ಬಳಕೆ ಸಾಧ್ಯವಾಗುತ್ತಿತ್ತಾ? ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ತಲೆ ಎತ್ತುತ್ತಿದ್ದವಾ? ಮನಸ್ಸಿಟ್ಟು ಯೋಚನೆ ಮಾಡಿ, ಅಧೈರ್ಯಪಟ್ಟರೆ ಉಪಯೋಗವಿಲ್ಲ. ನಿಮ್ಮ ಜತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿಲ್ಲುತ್ತಾರೆ. ಹೋರಾಟ ಮಾಡಿ ಎಂದು ಧೈರ್ಯ ತುಂಬಿದರು.
ಚುನಾವಣೆಯಲ್ಲಿ ಸತತ ಸೋಲು: ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ
ಮುಂದೆ ಹಲವು ಚುನಾವಣೆಗಳು ಬರಲಿವೆ. ಲೋಕಸಭೆ ಚುನಾವಣೆ ಸಹ ಬರುತ್ತದೆ. ಈಗಿನಿಂದಲೇ ಕೆಲಸ ಮಾಡಬೇಕು. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿ. ನಿಮ್ಮ ಜತೆ ನಾನು, ಕುಮಾರಸ್ವಾಮಿ ಇರುತ್ತೇವೆ. ಹೆದರಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಹೆದರಿ ಕೂತರೆ ಏನನ್ನೂ ಸಾಧನೆ ಮಾಡಿದಂತೆ ಆಗುವುದಿಲ್ಲ ಎಂದರು. ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ಜಿ.ಟಿ.ದೇವೇಗೌಡ, ವಿಧಾನಪರಿಷತ್ ಸದಸ್ಯ ಟಿ.ಎ.ಶರಣ ಮತ್ತು ಪಕ್ಷದ ಎಲ್ಲಾ ನೂತನ ಶಾಸಕರು ಉಪಸ್ಥಿತರಿದ್ದರು.