ರಾಜ್ಯದ ಎಲ್ಲರಿಗೂ 200 ಯೂನಿಟ್‌ ಉಚಿತ ವಿದ್ಯುತ್‌ ನೀಡದಿದ್ದರೆ ಜನರು ವಿದ್ಯುತ್‌ ಬಿಲ್‌ ಪಾವತಿಸದಂತೆ ಆಂದೋಲನ ರೂಪದಲ್ಲಿ ಜೆಡಿಎಸ್‌ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಮೇ.25): ರಾಜ್ಯದ ಎಲ್ಲರಿಗೂ 200 ಯೂನಿಟ್‌ ಉಚಿತ ವಿದ್ಯುತ್‌ ನೀಡದಿದ್ದರೆ ಜನರು ವಿದ್ಯುತ್‌ ಬಿಲ್‌ ಪಾವತಿಸದಂತೆ ಆಂದೋಲನ ರೂಪದಲ್ಲಿ ಜೆಡಿಎಸ್‌ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ಎರಡು ಸಚಿವ ಸಂಪುಟ ಸಭೆಗಳನ್ನು ಕಾದು ನೋಡಲಾಗುವುದು. ನಂತರವೂ ಕ್ರಮ ಗೊಳ್ಳದಿದ್ದರೆ 200 ಯೂನಿಟ್‌ಗೆ ದುಡ್ಡು ಕಟ್ಟಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿ ಆಂದೋಲನ ರೂಪದಲ್ಲಿ ಹೋರಾಟ ನಡೆಸುತ್ತೇವೆ. 

ಸರ್ಕಾರವು ತೊಂದರೆ ನೀಡದರೆ ಪ್ರತಿ ತಾಲೂಕಿನಲ್ಲಿ ಪಕ್ಷದ ವತಿಯಿಂದ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ ಸರ್ಕಾರವು ಮಹಿಳೆಯರಿಗೆ ಎರಡು ಸಾವಿರ ರು. ಮತ್ತು ನಿರುದ್ಯೋಗಿಗಳಿಗೆ ಮೂರು ಸಾವಿರ ರು. ನೀಡಲಾಗುವುದು ಎಂದು ಘೋಷಣೆ ಮಾಡುವಾಗ ಯಾವುದೇ ಷರತ್ತುಗಳ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದರೆ, ಈಗ ಮಾರ್ಗಸೂಚಿಗಳನ್ನು ಹಾಕಲಾಗುತ್ತದೆ ಎಂಬುದಾಗಿ ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಪರ್ದಿ ಕೇಸು ಸೋತವರಿಗೂ ಮಕ್ಕಳ ಭೇಟಿ ಹಕ್ಕಿದೆ: ಹೈಕೋರ್ಟ್‌ನಿಂದ ಮಹತ್ವದ ಆದೇಶ!

ಹಾದಿಬೀದಿಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಯೋಜನೆ ಕೊಡಕ್ಕಾಗುವುದಿಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಯನ್ನು ಒಪ್ಪಲಾಗದು. ಭರವಸೆ ನೀಡಬೇಕಾದಾಗ ನಿಮಗೆ ತಲೆ ಇರಲಿಲ್ಲವೇ? ಈಗ ಮತ ಕೊಟ್ಟವರೆಲ್ಲ ಹಾದಿಬೀದಿಯವರು ಆಗಿಬಿಟ್ಟರೆ? ಎಂದು ಕಿಡಿಕಾರಿದ ಅವರು, ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದ ನೈಜ ಬಣ್ಣ ಒಂದು ವಾರದಲ್ಲಿಯೇ ಬಯಲಿಗೆ ಬಂದಿದೆ. ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹೇಳಿದ್ದರು. ಈಗ ವರಸೆ ಬದಲಿಸಿ, ಷರತ್ತುಗಳು ಅನ್ವಯವಾಗಲಿದೆ ಎನ್ನುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಗ್ಯಾರಂಟಿಗಳ ಭರವಸೆ ನೀಡಲಾಗಿದೆ. ಜಾರಿ ಮಾಡಿ ಎಂದು ಜನರು ಕೇಳುತ್ತಿದ್ದಾರೆ. ವಿದ್ಯುತ್‌ ಬಿಲ್‌ ಕಟ್ಟುತ್ತಿಲ್ಲ, ಬಸ್‌ ಟಿಕೆಟ್‌ ಪಡೆಯಲು ನಿರಾಕರಿಸುತ್ತಿದ್ದಾರೆ. ನುಡಿದಂತೆ ನಡೆಯಬೇಕು. ಮಾತು ತಪ್ಪಿದರೆ ಜನರಿಗೆ ಮೋಸ ಮಾಡಿದಂತೆ ಆಗುತ್ತದೆ. ನಾವು ಜನರ ಪರ ನಿಲ್ಲುತ್ತೇವೆ. ನಾನು ಕೊಟ್ಟಮಾತು ತಪ್ಪಲ್ಲ, ಮಾತಿಗೆ ತಪ್ಪಿದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರಲ್ಲ ಎಂದಿದ್ದಾರೆ. ಅವರೆಲ್ಲಾ ಮಾಡಿರುವ ಭಾಷಣಗಳನ್ನು ಜನರು ನೋಡಿದ್ದಾರೆ ಮತ್ತು ಕೇಳಿದ್ದಾರೆ. ಎಲ್ಲರಿಗೂ ವಿದ್ಯುತ್‌ ಉಚಿತ ಎಂದು ಭಾಷಣದಲ್ಲಿ ಹೇಳಿದ್ದರು. ಈಗ ನೋಡಿದರೆ, ಅದಕ್ಕೆ ಮಾರ್ಗಸೂಚಿ ರಚನೆಯಾಗಬೇಕು ಎನ್ನುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

ಪೊಲೀಸರಿಂದ ಕಿರುಕುಳ: ಡಿಕೆಶಿ ಮುಂದೆ ಶಾಸಕಿ ರೂಪಕಲಾ ಕಣ್ಣೀರು!

ಅವತ್ತು ವೀರಾವೇಶದಲ್ಲಿ ಮಾತಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಒಂದೇ ವಾರದಲ್ಲಿ ಅವರ ನಿಜವಾದ ಬಣ್ಣ ಬಯಲಾಗುತ್ತಿದೆ. ಇವರು ಜನರ ಭಾವನೆಗಳ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಕಾದು ನೋಡೋಣ. ನಂತರ ಜನತೆಯ ಜತೆ ಸೇರಿ ಯಾವ ರೀತಿ ಹೋರಾಟ ಮಾಡಬೇಕೋ, ಆ ರೀತಿ ಮಾಡುತ್ತೇನೆ ಎಂದರು. ಕಳೆದ ಎರಡು ದಿನಗಳ ಮಳೆ ಬೆಂಗಳೂರಿನ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎನ್ನುವುದನ್ನು ನಾನು ಬಲ್ಲೆ. ಕಳೆದ 15 ವರ್ಷಗಳಿಂದ ಬೆಂಗಳೂರಲ್ಲಿ ಬಿಜೆಪಿ, ಕಾಂಗ್ರೆಸ್‌ ಆಡಳಿತ ನಡೆಸಿವೆ. ಬೆಂಗಳೂರು ಈಗ ಪ್ರತಿ ಮಳೆಗಾಲದಲ್ಲಿಯೂ ಈ ಸಮಸ್ಯೆಗಳು ಆಗುತ್ತಿವೆ. ಇದರ ಬಗ್ಗೆ ರಾಷ್ಟ್ರೀಯ ಪಕ್ಷಗಳಿಗೆ ಚಿಂತೆ ಇದೆಯಾ ಎಂದು ಕಿಡಿಕಾರಿದರು.