ಸಿದ್ದರಾಮಯ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆಯಾ?: ಕಾಂಗ್ರೆಸ್‌ ಶಾಸಕ ರಾಯರೆಡ್ಡಿ ಹೇಳಿದ್ದಿಷ್ಟು

ಚುನಾವಣೆಯ ಗೆಲುವಿನ ನಂತರ ಕ್ಷೇತ್ರದ 153 ಗ್ರಾಮಗಳಲ್ಲಿ ಗ್ರಾಮ ಜನ ಸಂಪರ್ಕ ಸಭೆ ನಡೆಸಲಾಗಿದೆ. ಸಾರ್ವಜನಿಕರಿಂದ ಬಂದಿರುವ ಮನವಿಯಂತೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ಕೆ ಕೈಹಾಕಲಾಗಿದೆ: ಶಾಸಕ ಬಸವರಾಜ ರಾಯರೆಡ್ಡಿ 

No Money Problem in CM Siddaramaiah's Government Says Congress MLA Basavaraj Rayareddy grg

ಕುಕನೂರು(ಸೆ.16): ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ಈಗಾಗಲೇ ಕ್ಷೇತ್ರದ ವಿವಿಧ ಅಭಿವೃದ್ಧಿಗೆ ಕಾರ್ಯಕ್ಕೆ ಮಂಜೂರಾತಿ ನೀಡಿದ್ದಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ತಾಲೂಕಿನ ಮಸಬಹಂಚಿನಾಳದ ಪ್ರೌಢ ಶಾಲೆಯ ಸಮುದಾಯ ಭವನದಲ್ಲಿ ನೂತನ ಪಿಯು ಕಾಲೇಜು ಮಂಜೂರಾತಿ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ಚರ್ಚೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ಚುನಾವಣೆಯ ಗೆಲುವಿನ ನಂತರ ಕ್ಷೇತ್ರದ 153 ಗ್ರಾಮಗಳಲ್ಲಿ ಗ್ರಾಮ ಜನ ಸಂಪರ್ಕ ಸಭೆ ನಡೆಸಲಾಗಿದೆ. ಸಾರ್ವಜನಿಕರಿಂದ ಬಂದಿರುವ ಮನವಿಯಂತೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಕ್ಕೆ ಕೈಹಾಕಲಾಗಿದೆ. 1985  ರಿಂದ ಕ್ಷೇತ್ರದ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿದ್ದೇನೆ. ಸದ್ಯ ಕ್ಷೇತ್ರದಲ್ಲಿ ಐದು ಪ್ರೌಢ ಶಾಲೆಗಳು ಹಾಗೂ 3 ಪಿಯು ಕಾಲೇಜು ಮಂಜೂರಾತಿ ಮಾಡಿಸಿದ್ದೇನೆ. ಇವೆಲ್ಲವಕ್ಕೂ ಹುದ್ದೆ ಸಹಿತ ಮಂಜೂರಾತಿ ಕೊಡಿಸಿದ್ದೇನೆ ಎಂದರು.

ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ, ನೀವು ಬಂದು ಸಭೆ ಮಾಡಿ: ಸಿಎಂಗೆ ಶಾಸಕ ರಾಯರಡ್ಡಿ ಮತ್ತೆ ಪತ್ರ

ಹಿರೇವಡ್ರಕಲ್, ಲಿಂಗನಬಂಡಿ, ಮುಧೋಳ, ಯಡಿಯಾಪುರ ಹಾಗೂ ಮಂಗಳೂರು ಗ್ರಾಮಗಳಿಗೆ ಪ್ರೌಢ ಶಾಲೆ ಮಂಜೂರುಗೊಂಡಿದ್ದು, ಗುನ್ನಾಳ, ಕುದರಿಮೋತಿ, ಮಂಸಬಹಂಚಿನಾಳ ಗ್ರಾಮಗಳಲ್ಲಿ ಪಿಯು ಕಾಲೇಜು ಮಂಜೂರಾತಿಯಾಗಿದೆ. ಪ್ರತಿ ಪ್ರೌಢ ಶಾಲೆಗೆ 10 ಹುದ್ದೆ, ಕಟ್ಟಡ ನಿರ್ಮಾಣಕ್ಕೆ 2.85 ಕೋಟಿ, ಪ್ರತಿ ಪಿಯು ಕಾಲೇಜುಗೆ 16 ಹುದ್ದೆ, ಕಟ್ಟಡ ನಿರ್ಮಾಣಕ್ಕೆ 2.85 ಕೋಟಿ ಮಂಜೂರಾತಿ ಆಗಿದೆ. ಎಲ್ಲ ಪಿಯು ಕಾಲೇಜುಗಳಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳನ್ನು ಪ್ರಾರಂಭಿಸಲಾಗುತ್ತಿದ್ದು, ಇದೇ ಅ.2ರಂದು ಉದ್ಘಾಟಿಸಲಾಗುವುದು. ಯಾವುದೇ ಪಕ್ಷ ಭೇದವಿಲ್ಲದೇ ಪ್ರೋಟೊಕಾಲ್ ಇಲ್ಲದೇ ಎಲ್ಲರನ್ನು ಒಗ್ಗೂಡಿಸಿ ಅಭಿವೃದ್ಧಿ ಕಾರ್ಯ ನಡೆಸಲಾಗುವುದು. ಕಾಲೇಜು, ಪ್ರೌಢ ಶಾಲೆ ನಿರ್ಮಾಣಕ್ಕೆ ನಿವೇಶನ ಅಗತ್ಯವಿದ್ದು, ಗ್ರಾಮಸ್ಥರು ಎಲ್ಲರೂ ಸಭೆ ನಡೆಸಿ, ದಾನದ ರೂಪದಲ್ಲಿ ನೀಡಬಹುದು. ಜಮೀನು ಖರೀದಿಗೆ ನಾನು ಸಹ 1 ಲಕ್ಷ ವೈಯಕ್ತಿಕ ಹಣ ನೀಡುತ್ತೇನೆ. ಎಲ್ಲರೂ ಸೇರಿ ಭೂಮಿ ಖರೀದಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಈ ಹಿಂದೆ ಮಸಬಹಂಚಿನಾಳ ಗ್ರಾಮಕ್ಕೆ ಪ್ರೌಢ ಶಾಲೆ ಮಂಜೂರಾತಿಗೊಂಡ ಸಂದರ್ಭದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಭೂದಾನ ನೀಡಿದ್ದು, ಇದೇ ರೀತಿ ಬೇರೆ ಬೇರೆ ಗ್ರಾಮಗಳಲ್ಲಿ ಕೂಡ ಭೂ ದಾನ ನೀಡಿದ್ದಾರೆ. ರಾಜಕಾರಣಿ, ಅಧಿಕಾರಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಹೆಚ್ಚು ಸಹಕಾರ ದೊರೆಯುತ್ತದೆ. ಜನಪರ ಕೆಲಸ ಮಾಡಬೇಕು. ಈಗಾಗಲೇ ಕ್ಷೇತ್ರದಲ್ಲಿ ಎಂಜಿನಿಯರ್ ಕಾಲೇಜು, ಕೌಶಲ್ಯ ಅಭಿವೃದ್ಧಿ ಕೇಂದ್ರ, ಎಂಎ, ಎಕಾಂ ಸೇರಿದಂತೆ ಹಲವು ಪದವಿ ಕಾಲೇಜು ಸ್ಥಾಪನೆಗೊಂಡಿದೆ. ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮುಂದಿನ ಭವಿಷ್ಯದಲ್ಲಿ ಇದು ಸಹಕಾರಿಯಾಗಲಿದೆ ಎಂದರು.

ಕರ್ನಾಟಕ ಭ್ರಷ್ಟರಾಜ್ಯ ಆಗುತ್ತಿದೆ, ರಾಜಕೀಯ ವ್ಯವಸ್ಥೆ ಬೇಸರ ತಂದಿದೆ: ಶಾಸಕ ಬಸವರಾಜ ರಾಯರೆಡ್ಡಿ

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಮಾತನಾಡಿ, ಶಾಸಕ ಬಸವರಾಜ ರಾಯರಡ್ಡಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಒಂದು ತಿಂಗಳಲ್ಲಿ ಪ್ರೌಢ ಶಾಲೆ, ಕಾಲೇಜು ಮಂಜೂರಾತಿ ಮಾಡಿಸಿ, ಹುದ್ದೆ, ಕಟ್ಟಡ ನಿರ್ಮಾಣಕ್ಕೆ ಅನುದಾನ ಕೂಡ ತಂದಿದ್ದಾರೆ. ಇದು ಒಂದು ಐತಿಹಾಸಿಕ ಮೈಲುಗಲ್ಲು ಎಂದರು.

ಡಿಡಿಪಿಯು ಜಗದೀಶ ಮಾತನಾಡಿದರು. ಡಿಡಿಪಿಐ ಶ್ರೀಶೈಲ ಬಿರಾದಾರ, ತಹಸೀಲ್ದಾರ್ ಎಚ್.ಪ್ರಾಣೇಶ್, ತಾಪಂ ಇಒ ಸಂತೋಷ ಬಿರಾದಾರ, ಬಿಇಒ ನಿಂಗಪ್ಪ, ಪ್ರಮುಖರಾದ ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ್, ಬಸವರಾಜ ಉಳ್ಳಾಗಡ್ಡಿ, ಯಲ್ಲಪ್ಪ ಮೇಟಿ, ವೀರನಗೌಡ ಪೊಲೀಸ್ ಪಾಟೀಲ್, ದೇವಪ್ಪ ಅರಕೇರಿ, ಡಾ.ಮಲ್ಲಿಕಾರ್ಜುನ ಭಜಂತ್ರಿ, ಮಂಜುನಾಥ ಕಡೆಮನಿ, ನಾರಾಯಣಪ್ಪ ಹರಪನಹಳ್ಳಿ, ಸಂಗಮೇಶ ಗುತ್ತಿ, ಸಂತೋಷ ಬೆಣಕಲ್, ನಿಂಗಪ್ಪ ಗೋಡೆಕಾರ್, ರವಿ ಭಜಂತ್ರಿ, ಪಪಂ ಸದಸ್ಯ ಗಗನ್ ನೋಟಗಾರ ಇತರರಿದ್ದರು.

Latest Videos
Follow Us:
Download App:
  • android
  • ios