ಮೋದಿಗೆ ಸರಿಸಾಟಿಯಾಗುವ ನಾಯಕ ಇಲ್ಲ: ಎಚ್.ಡಿ.ದೇವೇಗೌಡ
ದೇಶದ ಪ್ರಗತಿಗಾಗಿ ಎನ್‌ಡಿಎ ಜತೆಗೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾಗಿ ಅವರನ್ನು ಎದುರಿಸುತ್ತೇವೆ ಎನ್ನುವ ನಾಯಕ ಇಂಡಿಯಾ ಒಕ್ಕೂಟದಲ್ಲಿ ಒಬ್ಬರೂ ಇಲ್ಲ ಎಂದು ಲೇವಡಿ ಮಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಪಾಂಡವಪುರ(ನ.09): ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾ ಒಕ್ಕೂಟದಲ್ಲಿ ಒಬ್ಬ ನಾಯಕನಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ಹೊರಹಾಕಿದರು.
ತಾಲೂಕಿನ ಚಿನಕುರಳಿ ಗ್ರಾಮದ ಶ್ರೀರಾಮಮೇಶ್ವರ ದೇವಸ್ಥಾನಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿ ನಂತರ ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡ ಉದ್ಘಾಟಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದ ಪ್ರಗತಿಗಾಗಿ ಎನ್‌ಡಿಎ ಜತೆಗೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿಸಾಟಿಯಾಗಿ ಅವರನ್ನು ಎದುರಿಸುತ್ತೇವೆ ಎನ್ನುವ ನಾಯಕ ಇಂಡಿಯಾ ಒಕ್ಕೂಟದಲ್ಲಿ ಒಬ್ಬರೂ ಇಲ್ಲ ಎಂದು ಲೇವಡಿ ಮಾಡಿದರು.
ಚನ್ನಪಟ್ಟಣ ಉಪಚುನಾವಣೆ: ಈ ಸರ್ಕಾರ ತೆಗೆವವರೆಗೆ ಉಸಿರು ಎಳೆಯಲ್ಲ, ದೇವೇಗೌಡ
ಅಮೆರಿಕಾದಲ್ಲಿ ಆ ರಾಷ್ಟ್ರದ ಶ್ರೇಯೋಭಿವೃದ್ಧಿಗಾಗಿ ಡೋನಾಲ್ಡ್ ಟ್ರಂಪ್ ಗೆದ್ದಿದ್ದಾರೆ. ಟ್ರಂಪ್ ಅವರೊಂದಿಗೆ ಪ್ರಧಾನಿ ಮೋದಿ ಉತ್ತಮ ಭಾಂದವ್ಯ ಹೊಂದಿದ್ದಾರೆ. ಇದು ನಮ್ಮ ಶತ್ರುಗಳನ್ನು ಸಮರ್ಥವಾಗಿ ಎದುರಿಸಲು ಬಲಬಂದತಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಎರಡು ಸ್ಥಾನಗಳಿದ್ದರೂ ದೇಶದ ಎರಡು ಪ್ರಮುಖ ಖಾತೆಯ ಜವಾಬ್ದಾರಿಯನ್ನು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೋದಿ ನೀಡಿದ್ದಾರೆ. ಕುಮಾರಸ್ವಾಮಿ ದೇವೇಗೌಡರ ಮಗ ಅಂತ ಈ ಹುದ್ದೆ ಕೊಟ್ಟಿಲ್ಲ. ಅದು ಕುಮಾರಸ್ವಾಮಿ ಬೆಳೆಸಿಕೊಂಡಿರುವ ವ್ಯಕ್ತಿತ್ವ ಎಂದರು.
ಈ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ 80 ಕೋಟಿ ರು. ಹಣವನ್ನು ಭ್ರಷ್ಟಾಚಾರ ನಡೆಸಿ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದರು. ಮಂಡ್ಯ ಲೋಕಸಭಾ ಚುನಾವಣೆ ವೇಳೆ ಗುತ್ತಿಗೆದಾರನಾಗಿದ್ದ ಎದುರಾಳಿ ಅಭ್ಯರ್ಥಿಗೆ 120 ಕೋಟಿ ಕಾಮಗಾರಿಗೆ 24 ಗಂಟೆಯೊಳಗೆ ಎಲ್‌ಓಸಿ ನೀಡಿದರು. ಆದರೂ ಎಚ್‌ಡಿಕೆಯನ್ನು ಸೋಲಿಸಲಾಗಲಿಲ್ಲ. ಇದಕ್ಕಾಗಿ ಮಂಡ್ಯ ಜಿಲ್ಲೆಯ ಮಹಾಜನತೆಯನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ ಎಂದರು.
ಉಸಿರುವವರೆಗೂ ಹೋರಾಟ:
ರಾಜ್ಯದಲ್ಲಿ ಇರುವಂತಹ ಕೆಟ್ಟ ಸರ್ಕಾರವನ್ನು ನನ್ನ 62 ವರ್ಷದ ರಾಜಕೀಯದ ಇತಿಹಾಸದಲ್ಲಿ ಕಂಡಿಲ್ಲ. ದೇವೇಗೌಡರಿಗೆ 92 ವರ್ಷ ವಯಸ್ಸಾಗಿದೆ. ಮೊಮ್ಮಗನನ್ನು ಗೆಲ್ಲಿಸಿ ನಂತರ ಮನೆ ಸೇರಿಕೊಳ್ಳುತ್ತಾನೆ ಅಂದುಕೊಂಡಿದ್ದಾರೆ. ನಾನು ಮನೆ ಸೇರುವ ಜಾಯಮಾನದವನಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಹೋರಾಟ ಎಂಬುದು ಈ ದೇವೇಗೌಡನ ಹುಟ್ಟುಗುಣ. ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ದೇಹದಲ್ಲಿ ಕೊನೆ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ. ಈ ಸರ್ಕಾರವನ್ನು ಕಿತ್ತೊಗೆಯುವರೆಗೂ ಹೋರಾಟ ನಿಲ್ಲೋದಿಲ್ಲ ಎಂದು ಗುಡುಗಿದರು.
ಸಿಎಸ್‌ಪಿ ಉತ್ತಮ ಸಂಘಟಕ:
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉತ್ತಮ ಸಂಘಟಕ. ಹೋರಾಟಗಾರ, ಹಿಡಿದ ಕೆಲಸವನ್ನು ಬಿಡದೆ ಮಾಡುವ ಹಠಗಾರ. ಜಿಲ್ಲೆಯಲ್ಲಿ ಪಕ್ಷದ ಅಸ್ಥಿತ್ವ ಉಳಿಸಿಲು ಶಕ್ತಿಮೀರಿ ಹೋರಾಟ ಮಾಡುತ್ತಿರುವ ಹಲವು ನಾಯಕರಲ್ಲಿ ಸಿ.ಎಸ್.ಪುಟ್ಟರಾಜು ಅವರು ಒಬ್ಬರು ಎಂದರು.
ಸಿ.ಎಸ್.ಪುಟ್ಟರಾಜು ಒಂದು ನಿಮಿಷವೂ ವಿಶ್ರಾಂತಿ ಪಡೆಯುದಿಲ್ಲ. ಇಷ್ಟೊಂದು ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿಬೆಳೆಸಲು ಅವರ ಶ್ರೀಮತಿಯ ಯೋಗ ಹಾಗೂ ಸ್ನೇಹಿತರ ಸಹಕಾರ ಹೆಚ್ಚಾಗಿದೆ. ವಿಶೇಷವೇನೆಂದರೆ ಜಿಲ್ಲೆಯ ಜನತೆ ಗೆಲ್ಲಿಸಿದರೆ ಏಳು ಜನರನ್ನು ಗೆಲ್ಲಿಸುತ್ತಾರೆ. ಸೋಲಿಸಿದರೆ ಏಳು ಜನರನ್ನು ಸೋಲಿಸುತ್ತಾರೆ ಎಂದರು.
ಕೊತ್ವಾಲ್ ಬಳಿ ₹100ಕ್ಕೆ ಕೆಲಸ ಮಾಡ್ತಿದ್ದ ಡಿಕೆಶಿ ಎಂದಾದರೂ ಕಣ್ಣೀರು ಹಾಕಿದ್ದಾರಾ?: ಎಚ್.ಡಿ.ದೇವೇಗೌಡ
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲೂ ಪ್ರಚಾರ ಮಾಡುತ್ತಿದ್ದೇನೆ. ಮುಂದೆ ಸಿ.ಎಸ್.ಪುಟ್ಟರಾಜು ಪರ ಚುನಾವಣೆಗೂ ಪ್ರಚಾರ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ, ಎಸ್‌ಟಿಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಶಾಸಕ ಎಚ್.ಟಿ.ಮಂಜು, ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರರೆಡ್ಡಿ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಅಮೆರಿಕಾ ಚಿಕ್ಕಸ್ವಾಮಣ್ಣ, ಎಸ್‌ಟಿಜಿ ಶಿಕ್ಷಣ ಸಂಸ್ಥೆ ಸಿಇಒ ಸಿ.ಪಿ.ಶಿವರಾಜು, ಜಿಪಂ ಮಾಜಿ ಸದಸ್ಯೆ ನಾಗಮ್ಮಪುಟ್ಟರಾಜು, ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ಸಿ.ಹರೀಶ್ ಸೇರಿದಂತೆ ಹಲವರು ಹಾಜರಿದ್ದರು.