ಕೊತ್ವಾಲ್ ಬಳಿ ₹100ಕ್ಕೆ ಕೆಲಸ ಮಾಡ್ತಿದ್ದ ಡಿಕೆಶಿ ಎಂದಾದರೂ ಕಣ್ಣೀರು ಹಾಕಿದ್ದಾರಾ?: ಎಚ್.ಡಿ.ದೇವೇಗೌಡ
ರೌಡಿ ಕೊತ್ವಾಲ್ ರಾಮಚಂದ್ರನ ಹತ್ತಿರ ನೂರು ರುಪಾಯಿಗೆ ಕೆಲಸ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್, ಇವತ್ತು ನೆಹರು, ಇಂದಿರಾಗಾಂಧಿ ಆಳ್ವಿಕೆ ಮಾಡಿದ ಪಕ್ಷದ ಅಧ್ಯಕ್ಷನಾಗಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತನಿಗೆ ನೋವಾದಾಗ ನಮಗೆ ಹೃದಯ ಮರುಗಿ ಕಣ್ಣೀರು ಬರುತ್ತದೆ.
ಪಾಂಡವಪುರ (ನ.09): ರೌಡಿ ಕೊತ್ವಾಲ್ ರಾಮಚಂದ್ರನ ಹತ್ತಿರ ನೂರು ರುಪಾಯಿಗೆ ಕೆಲಸ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್, ಇವತ್ತು ನೆಹರು, ಇಂದಿರಾಗಾಂಧಿ ಆಳ್ವಿಕೆ ಮಾಡಿದ ಪಕ್ಷದ ಅಧ್ಯಕ್ಷನಾಗಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತನಿಗೆ ನೋವಾದಾಗ ನಮಗೆ ಹೃದಯ ಮರುಗಿ ಕಣ್ಣೀರು ಬರುತ್ತದೆ. ಆದರೆ, ದೇಶಕ್ಕೆ ಅನ್ನ ನೀಡುವ ರೈತರು, ಬಡವರಿಗೆ ನೋವಾದಾಗ ಡಿ.ಕೆ.ಶಿವಕುಮಾರ್ ಎಂದಾದರೂ ಕಣ್ಣೀರು ಹಾಕಿದ್ದಾರಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದನ್ನು ಟೀಕಿಸಿದ್ದ ಡಿಕೆಶಿಗೆ ಏಕವಚನದಲ್ಲಿ ತಿರುಗೇಟು ನೀಡಿದ ದೇವೇಗೌಡ, ರೈತನಿಗೆ ನೋವಾದರೆ ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ನಾವು ಬಡತನವನ್ನು ಅನುಭವಿಸಿ ಬಂದಿದ್ದೇವೆ. ನಮಗೆ ಬಡವರ ಬಗ್ಗೆ ನೋವಿದೆ. ರೈತರ ಕಷ್ಟದ ಬಗ್ಗೆ ತಿಳಿದಿದೆ. ಅಂತವರಿಗಾಗಿ ಈ ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಕಣ್ಣೀರು ಹಾಕಿದ್ದಾರೆ. ಆದರೆ, ದೇಶಕ್ಕೆ ಅನ್ನ ನೀಡುವ ರೈತರಿಗೆ ನೋವಾದಾಗ ಡಿಕೆಶಿ ಎಂದಾದರೂ ಕಣ್ಣೀರು ಹಾಕಿದ್ದಾರಾ ಎಂದು ಪ್ರಶ್ನಿಸಿದರು.
ದಯವಿಟ್ಟು ಎಚ್‌ಡಿಕೆ ವರ್ಸಸ್ ಡಿಕೆಶಿ ಎಂದು ಹೋಲಿಕೆ ಮಾಡಬೇಡಿ ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಈಗ ಇರುವಂತಹ ಕೆಟ್ಟ ಸರ್ಕಾರವನ್ನು ನನ್ನ 62 ವರ್ಷದ ರಾಜಕೀಯದ ಇತಿಹಾಸದಲ್ಲಿ ಕಂಡಿಲ್ಲ. ದೇವೇಗೌಡರಿಗೆ 92 ವರ್ಷ ವಯಸ್ಸಾಗಿದೆ. ಮೊಮ್ಮಗನನ್ನು ಗೆಲ್ಲಿಸಿ ನಂತರ ಮನೆ ಸೇರಿಕೊಳ್ಳುತ್ತಾನೆ ಅಂದುಕೊಂಡಿದ್ದಾರೆ. ನಾನು ಮನೆ ಸೇರುವ ಜಾಯಮಾನದವನಲ್ಲ. ಹೋರಾಟ ಎಂಬುದು ಈ ದೇವೇಗೌಡನ ಹುಟ್ಟು ಗುಣ. ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ದೇಹದಲ್ಲಿ ಕೊನೆ ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ.
ನಾನು ತಪ್ಪು ಮಾಡಿದೆ ಅಂತ ಹೇಳುವ ಯೋಗ್ಯತೆ ಯಾರಿಗೂ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ
ಈ ಸರ್ಕಾರವನ್ನು ತೆಗೆಯುವ ಕೊನೆ ಹಂತದವರೆಗೆ ಈ ಆತ್ಮದಿಂದ ಕೊನೆ ಉಸಿರು ಎಳೆಯುವುದಿಲ್ಲ ಎಂದು ಗುಡುಗಿದರು. 2028ರ ವಿಧಾನಸಭೆ ಚುನಾವಣೆಯಲ್ಲಿ ನಿಲ್ಲುತ್ತೇನೆ. ಈ ಬಾರಿ ನಾನು ನಿಲ್ಲಲ್ಲ ಎಂದು ನಿಖಿಲ್ ಹಠ ಹಿಡಿದಿದ್ದ. ಆದರೆ, ಮೋದಿ, ನಡ್ಡಾ, ಶಾ ಅವನನ್ನು ನಿಲ್ಲಿಸಿದ್ದಾರೆ. ಚನ್ನಪಟ್ಟಣ ಬಿಡಬಾರದು ಎಂದು ನಿಲ್ಲಿಸಿದ್ದಾರೆ. ಈ ಬಾರಿ ಚನ್ನಪಟ್ಟಣದ ಜನ ನಿಖಿಲ್‌ರನ್ನು ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನಸೌಧಕ್ಕೆ ಕರೆ ತಂದು ಕೂರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.