ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯವ್ಯಸನವನ್ನು ತಡೆಯಲು, ರಾಜ್ಯ ಸರ್ಕಾರವು ಬಾರ್, ಕ್ಲಬ್‌ಗಳು ಮತ್ತು ಮದ್ಯದ ಮಳಿಗೆಗಳಲ್ಲಿ 'ನೋ ಐಡಿ, ನೋ ಎಂಟ್ರಿ' ನಿಯಮವನ್ನು ಕಡ್ಡಾಯಗೊಳಿಸಿದೆ.

  • - ‘ನೋ ಐಡಿ, ನೋ ಎಂಟ್ರಿ’ ನಿಯಮ ರಾಜ್ಯದಲ್ಲಿ ಜಾರಿ
  • - ಸರ್ಕಾರ ನೀಡಿದ ಅಧಿಕೃತ ಐಡಿ ಪ್ರದರ್ಶನ ಕಡ್ಡಾಯ
  • - ಅಪ್ರಾಪ್ತರ ಮದ್ಯವ್ಯಸನ ತಪ್ಪಿಸಲು ಸರ್ಕಾರ ಸೂಚನೆ
  • - ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು (ಜೂ.9): ‘ಬಾರ್‌, ಕ್ಲಬ್‌, ಮದ್ಯ ಮಳಿಗೆ ಸೇರಿ ಮದ್ಯಪಾನ ಮಾಡುವ ಯಾವುದೇ ಸ್ಥಳಗಳಲ್ಲಿ ಕಡ್ಡಾಯವಾಗಿ ವಯಸ್ಸಿನ ಪರಿಶೀಲನೆ ಮಾಡಬೇಕು. ಇದಕ್ಕಾಗಿ ಪ್ರವೇಶಕ್ಕೆ ಸರ್ಕಾರ ನೀಡಿರುವ ಅಧಿಕೃತ ಗುರುತಿನ ಚೀಟಿ (ಐಡಿ ಕಾರ್ಡ್‌) ಕಡ್ಡಾಯ ಮಾಡಬೇಕು’ ಎಂದು ಹಿರಿಯ ಅಧಿಕಾರಿಗಳಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಸಂಬಂಧಪಟ್ಟ ಮಳಿಗೆಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ತಿಳಿವಳಿಕೆ ಮೂಡಿಸಬೇಕು. ವಯಸ್ಸಿನ ಪುರಾವೆಯ ಐಡಿ ಕಾರ್ಡ್ ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶ ನೀಡಬಾರದು (ನೋ ಐಡಿ, ನೋ ಎಂಟ್ರಿ). ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು, ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಪ್ರಿಯಾಂಕ್ ಮನವಿ ಮಾಡಿದ್ದಾರೆ.

3 ಯುವಕರಲ್ಲಿ ಒಬ್ಬರಿಗೆ ಮದ್ಯ ವ್ಯಸನ:

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ ಅವರು, ‘ಬೆಂಗಳೂರಿನಲ್ಲಿ ಹದಿಹರೆಯದ ಯುವ ಜನತೆಯಲ್ಲಿ ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಬಳಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಬೆಂಗಳೂರಿನ 4 ಪ್ರಮುಖ ಶಿಕ್ಷಣ ಸಂಸ್ಥೆಗಳ ಪಿಯುಸಿ, ಪ್ರೌಢ ಶಾಲೆ ಹಾಗೂ ಪದವಿ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲಾಯಿತು. ಈ ವರದಿಯಲ್ಲಿ 4,093 ವಿದ್ಯಾರ್ಥಿಗಳ ಪೈಕಿ ಪ್ರತಿ ಮೂವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಬಳಕೆ ಮಾಡುತ್ತಿರುವ ಆಘತಕಾರಿ ಅಂಶ ಬೆಳಕಿಗೆ ಬಂದಿದೆ’ ಎಂದು ಹೇಳಿದರು.

ಅಪ್ರಾಪ್ತ ವಯಸ್ಕರಲ್ಲಿನ ಮದ್ಯಪಾನಕ್ಕೆ ಕೇವಲ ಪರವಾನಗಿ ನಿಯಮಗಳು ಸಾಲದು. ಬದಲಿಗೆ ಯುವಕರ ಸುರಕ್ಷತೆ, ಆರೋಗ್ಯದ ದೃಷ್ಟಿಯಿಂಧ ಗಂಭೀರ ಕಾಳಜಿ ವಹಿಸಬೇಕು. ಮದ್ಯ ಮಾರಾಟ ಮಾಡುವ ಎಲ್ಲಾ ಮಳಿಗೆ ಅಥವಾ ಸಂಸ್ಥೆಗಳು ವಯಸ್ಸಿನ ಪರಿಶೀಲನಾ ನಿಯಮ ಪಾಲಿಸಬೇಕು. ಕಡ್ಡಾಯವಾಗಿ ಸರ್ಕಾರ ನೀಡಿದ ಅಧಿಕೃತ ಗುರುತಿನ ಚೀಟಿ ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಪ್ರಿಯಾಂಕ್‌ ಹೇಳಿದ್ದಾರೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ:

ಅಪ್ರಾಪ್ತ ವಯಸ್ಕರಿಗೆ ಮದ್ಯ ಸರಬರಾಜು ಮಾಡುವ ಅಥವಾ ಅಪ್ರಾಪ್ತರ ಮದ್ಯಪಾನಕ್ಕೆ ಪ್ರಚೋದನೆ ನೀಡುವ ಯಾವುದೇ ಸಂಸ್ಥೆಯ ವಿರುದ್ಧ ಕಾನೂನಿನಡಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಸ್ಥೆ ಆವರಣದೊಳಗೆ ನಡೆಯುವ ನಿಯಮ ಉಲ್ಲಂಘನೆಗಳಿಗೆ ಆಯಾ ಸಂಸ್ಥೆಯ ಮಾಲೀಕರು, ವ್ಯವಸ್ಥಾಪಕರು, ಪರವಾನಗಿದಾರರು ಮತ್ತು ಕಾರ್ಯಕ್ರಮದ ಆಯೋಜಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಸಿಸಿಟಿವಿ ಕಡ್ಡಾಯ:

ಪ್ರವೇಶ ದ್ವಾರದ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ತನಿಖೆಯ ಸಮಯದಲ್ಲಿ ನಿಯಮ ಪಾಲನೆ ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ನಿಗದಿತ ಅವಧಿಯವರೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಬೇಕು.

ಅಪ್ರಾಪ್ತರಿಗೆ ಮದ್ಯ ನೀಡುವ ಬಗ್ಗೆ ಶೂನ್ಯ ಸಹಿಷ್ಣುತೆ:

ಅಪ್ರಾಪ್ತ ವಯಸ್ಕರ ಮದ್ಯಪಾನಕ್ಕೆ ಪ್ರೋತ್ಸಾಹ ನೀಡುವ ಅಥವಾ ಅದಕ್ಕೆ ಕಾರಣವಾಗುವ ಸಂಸ್ಥೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅಳವಡಿಸಿಕೊಳ್ಳುತ್ತೇವೆ. ನಮ್ಮ ಸರ್ಕಾರ ಯಾವುದೇ ರಾಜಿ ಇಲ್ಲದೆ ಕ್ರಮ ಕೈಗೊಳ್ಳಲಿದೆ.

ಅಪ್ರಾಪ್ತ ವಯಸ್ಕರು ಮದ್ಯ, ತಂಬಾಕು ಮತ್ತು ಮಾದಕ ದ್ರವ್ಯಗಳಿಗೆ ಬಲಿಯಾಗುವುದನ್ನು ತಡೆಯಲು ಪೊಲೀಸರು ಶಿಕ್ಷಣ ಸಂಸ್ಥೆಗಳು, ಪೋಷಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯೂಎ) ಮತ್ತು ನಾಗರಿಕ ಗುಂಪುಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಶೇ.33ರಷ್ಟು ವಿದ್ಯಾರ್ಥಿಗಳು ಮದ್ಯದಾಸರು!

ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರಿ ಬಾ ವೈದ್ಯಕೀಯ ಕಾಲೇಜಿನ ಸಂಶೋಧಕರು ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ ಯುವಕರಲ್ಲಿ ಶೇ.33 ರಷ್ಟು ಮಂದಿ ಮದ್ಯ ಸೇವಿಸುತ್ತಿದ್ದರೆ, ಶೇ. 18 ರಷ್ಟು ಮಂದಿ ತಂಬಾಕು ಚಟಕ್ಕೆ ದಾಸರಾಗಿರುವುದು ಬೆಳಕಿಗೆ ಬಂದಿದೆ.

ಇದು ತಂಬಾಕು ಬಳಕೆಯ ರಾಷ್ಟ್ರೀಯ ಸರಾಸರಿ (ಶೇ. 8.7) ಮತ್ತು ಮದ್ಯಪಾನದ ರಾಷ್ಟ್ರೀಯ ಸರಾಸರಿಗಿಂತ (ಶೇ. 7.9) ಹೆಚ್ಚಿದೆ. ಅಲ್ಲದೆ, ಕರ್ನಾಟಕದ ಒಟ್ಟಾರೆ ಸರಾಸರಿಯಾದ ಶೇ.4.7 (ತಂಬಾಕು) ಮತ್ತು ಶೇ.8.5ಕ್ಕಿಂತಲೂ (ಮದ್ಯಪಾನ) ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹದಿಹರೆಯದವರು ಮದ್ಯಪಾನ ಮಾಡಲು ಪ್ರಾರಂಭಿಸುವ ಸರಾಸರಿ ವಯಸ್ಸು 17 ವರ್ಷ, ಕೆಲವರು ಕೇವಲ 8-10 ವರ್ಷ ವಯಸ್ಸಿನಲ್ಲೇ ಮದ್ಯಪಾನದ ಹವ್ಯಾಸ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ ಎಂದು ಗೃಹ ಸಚಿವರ ಕಚೇರಿಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.