ಕಳೆದ ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ 10 ಸಾವಿರ ಕೋಟಿ ರು.ನಷ್ಟು ಅಭಿವೃದ್ಧಿಗೆ ಹಣ ತಂದಿದ್ದೇವೆ. 1.25 ಸಾವಿರ ಕೋಟಿ ರು. ಹಣವನ್ನು ಜನಪರ ಯೋಜನೆಗೆ ನೀಡಿದೆ. ಇದು ಸುಳ್ಳು ಎನ್ನುವುದಾದರೆ ಜೆಡಿಎಸ್‌ನವರು ಎಲ್ಲಿಯಾದರೂ ಚರ್ಚೆಗೆ ಕರೆಯಲಿ. ನಾನು ಮತ್ತು ಶಾಸಕರು ಮಾತನಾಡಲು ಸಿದ್ಧ.

ಮಂಡ್ಯ : ಮಂಡ್ಯ ಜಿಲ್ಲೆಯಿಂದ ಜೆಡಿಎಸ್ ಪಕ್ಷವನ್ನು ಓಡಿಸದಿದ್ದರೆ ಯುವಜನಾಂಗಕ್ಕೆ ಭವಿಷ್ಯವಿಲ್ಲ. ನನಗಾಗಿ ಓಡಿಸಬೇಡಿ. ನಿಮ್ಮ ಭವಿಷ್ಯಕ್ಕಾಗಿ ಓಡಿಸಿ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಮಂಗಳವಾರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಸಮಾವೇಶ ಹಾಗೂ ನರೇಗಾ ಬಚೋವೋ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಗೆ 10 ಸಾವಿರ ಕೋಟಿ ರು.ನಷ್ಟು ಅಭಿವೃದ್ಧಿಗೆ ಹಣ

ಕಳೆದ ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ 10 ಸಾವಿರ ಕೋಟಿ ರು.ನಷ್ಟು ಅಭಿವೃದ್ಧಿಗೆ ಹಣ ತಂದಿದ್ದೇವೆ. 1.25 ಸಾವಿರ ಕೋಟಿ ರು. ಹಣವನ್ನು ಜನಪರ ಯೋಜನೆಗೆ ನೀಡಿದೆ. ಇದು ಸುಳ್ಳು ಎನ್ನುವುದಾದರೆ ಜೆಡಿಎಸ್‌ನವರು ಎಲ್ಲಿಯಾದರೂ ಚರ್ಚೆಗೆ ಕರೆಯಲಿ. ನಾನು ಮತ್ತು ಶಾಸಕರು ಬಂದು ಕುಳಿತುಕೊಂಡು ಮಾತನಾಡಲು ಸಿದ್ಧ ಎಂದು ಸವಾಲು ಹಾಕಿದರು.

ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು

ಸಂಸದರು, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿಯವರೆಗೆ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು. ಕೇವಲ ಸುಳ್ಳು ಹೇಳಿಕೊಂಡು ಓಡಾಡುವುದೇ ಅವರ ಕೆಲಸವಾಗಿದೆ ಎಂದು ಜರಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರ ಕ್ಷೇತ್ರಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ರಸ್ತೆ ಅಥವಾ ಇತರೆ ಅಭಿವೃದ್ಧಿಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರಿಗೆ ಮೊದಲ ಹಂತದಲ್ಲಿ 10 ಕೋಟಿ ರು., ಎರಡನೇ ಹಂತದಲ್ಲಿ 20 ಕೋಟಿ ರು., ಮೂರನೇ ಹಂತದಲ್ಲಿ 25 ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ. ಆಡಳಿತ ಪಕ್ಷದವರಿಗೆ 85 ಕೋಟಿ ರು. ವಿಪಕ್ಷದವರಿಗೆ 55 ಕೋಟಿ ರು. ಬಂದಿದೆ. ಹಿಂದೆ ಯಾರಾದರೂ ಶಾಸಕರಿಗೆ ನೇರವಾಗಿ ಕೊಟ್ಟಿರುವ ಉದಾಹರಣೆ ಇದೆಯೇ. ಮಂಡ್ಯ ಜಿಲ್ಲೆಗೆ 8000 ಸಾವಿರ ಕೊಟಿ ರು. ಅಭಿವೃದ್ಧಿಗೆ ಕೊಟ್ಟಿದ್ದೇನೆ ಎನ್ನುತ್ತಾರೆ. ಅದನ್ನು ಎಲ್ಲ ಕಡೆ ಹುಡುಕಿಸಿದೆ. ಆದರೆ, ಎಲ್ಲೂ ಸಿಗಲಿಲ್ಲ ಎಂದು ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಕುಟುಕಿದರು.