ಚುನಾವಣೆ ಮೇಲೆ ಪೆನ್‌ಡ್ರೈವ್ ಪರಿಣಾಮ: ಸಚಿವ ಎನ್.ಚಲುವರಾಯಸ್ವಾಮಿ
ಕೇವಲ ಸುಶಿಕ್ಷಿತ ಮಹಿಳೆಯರ ಮೇಲೆ ಮಾತ್ರವಲ್ಲದೇ, ಪುರುಷರ ಮೇಲೂ ಪರಿಣಾಮ ಬೀರುತ್ತದೆ. ಅಂತಹ ನೀಚ ಕೃತ್ಯವನ್ನು ಯಾರು ತಾನೇ ಒಪ್ಪಿಕೊಳ್ಳುವುದಕ್ಕೆ ಸಾಧ್ಯ. ಆ ಪ್ರಕರಣದ ಬಗ್ಗೆ ಮಾತನಾಡುವುದಕ್ಕೆ ಅಸಹ್ಯವಾಗುತ್ತದೆ. ಅದಕ್ಕಾಗಿ ನಾವು ಆ ವಿಷಯ ಮಾತನಾಡುವುದನ್ನೇ ನಿಲ್ಲಿಸಿದ್ದೇವೆ ಎಂದ ಸಚಿವ ಎನ್.ಚಲುವರಾಯಸ್ವಾಮಿ
ಮಂಡ್ಯ(ಮೇ.31): ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲೆ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಕೇವಲ ಸುಶಿಕ್ಷಿತ ಮಹಿಳೆಯರ ಮೇಲೆ ಮಾತ್ರವಲ್ಲದೇ, ಪುರುಷರ ಮೇಲೂ ಪರಿಣಾಮ ಬೀರುತ್ತದೆ. ಅಂತಹ ನೀಚ ಕೃತ್ಯವನ್ನು ಯಾರು ತಾನೇ ಒಪ್ಪಿಕೊಳ್ಳುವುದಕ್ಕೆ ಸಾಧ್ಯ. ಆ ಪ್ರಕರಣದ ಬಗ್ಗೆ ಮಾತನಾಡುವುದಕ್ಕೆ ಅಸಹ್ಯವಾಗುತ್ತದೆ. ಅದಕ್ಕಾಗಿ ನಾವು ಆ ವಿಷಯ ಮಾತನಾಡುವುದನ್ನೇ ನಿಲ್ಲಿಸಿದ್ದೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರು ಜೆಡಿಎಸ್-ಬಿಜೆಪಿ ಮೈತ್ರಿಗೆ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಗೆಲ್ಲಿಸುವುದರೊಂದಿಗೆ ಎರಡೂ ಪಕ್ಷಗಳಿಗೆ ಸೋಲಿನ ರುಚಿ ತೋರಿಸಿದ್ದಾರೆ. ಇದು ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲೂ ಪುನರಾವರ್ತನೆಯಾಗಲಿದೆ ಎಂದು ಭವಿಷ್ಯ ನುಡಿದರು.
ವಿಧಾನಪರಿಷತ್ ಚುನಾವಣೆ 2024: ಬಿಜೆಪಿ ಮೇಲ್ಮನೆ ಅಭ್ಯರ್ಥಿ ನಾಳೆಯ ನಂತರ ಆಯ್ಕೆ
ಶಿಕ್ಷಕರ ಸಂಪರ್ಕವೇ ಇಲ್ಲ:
ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಸತತ ನಾಲ್ಕು ಬಾರಿ ಪ್ರತಿನಿಧಿಸಿ ಗೆದ್ದಿರುವ ಮರಿತಿಬ್ಬೇಗೌಡರು ಸಮರ್ಥರಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಸದನದಲ್ಲಿ ದನಿ ಎತ್ತಿ ಪರಿಹಾರ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್-ಬಿಜೆಪಿ ಅಭ್ಯರ್ಥಿ ಉದ್ಯಮಿಯಾಗಿದ್ದು, ಅವರಿಗೆ ಶಿಕ್ಷಕರ ಸಂಪರ್ಕವೇ ಇಲ್ಲ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವೂ ಇಲ್ಲ. ಹೀಗಾಗಿ ಶಿಕ್ಷಿತರು ಮರಿತಿಬ್ಬೇಗೌಡರನ್ನು ಬೆಂಬಲಿಸುವುದರಿಂದ ಗೆಲುವು ನಿಶ್ಚಿತ ಎಂದು ಖಚಿತವಾಗಿ ಹೇಳಿದರು.
ಶಿಕ್ಷಕರಿಗೆ ಶೀಘ್ರ ಒಪಿಎಸ್, ಎನ್‌ಪಿಎಸ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇವುಗಳ ಜಾರಿಗೆ ಕೆಲವು ಕಾನೂನಾತ್ಮಕ ಚರ್ಚೆಗಳಾಗಬೇಕಿದೆ. ಶೀಘ್ರದಲ್ಲೇ ಜಾರಿಗೊಳಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಲಿದೆ. ಏಳನೇ ವೇತನ ಆಯೋಗವನ್ನು ಜುಲೈ ಅಂತ್ಯದೊಳಗೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಶಿಕ್ಷಕರ ಕ್ಷೇತ್ರಕ್ಕೆ ಹಿಂದಿನಿಂದಲೂ ಕಾಂಗ್ರೆಸ್ ನ್ಯಾಯ ಒದಗಿಸುತ್ತಾ ಬಂದಿದೆ ಎಂದರು.
ಸಮಾಜ ತಲೆತಗ್ಗಿಸುವ ವಿಚಾರ:
ಪ್ರಜ್ವಲ್ ಪೆನ್‌ಡ್ರೈವ್ ಕುರಿತು ನಾನು ಮಾತನಾಡುವುದಿಲ್ಲ ಎಂದಿದ್ದೇನೆ. ಏಕೆಂದರೆ, ವಾಟ್ಸಾಪ್‌ನಲ್ಲಿ ಜೈ ಜೆಡಿಎಸ್, ಜೈ ಕುಮಾರಣ್ಣ, ಜೈ ರೇವಣ್ಣ, ಜೈ ಪ್ರಜ್ವಲ್ ಅಂತಾರೆ. ಇದನ್ನು ನೋಡಿದಾಗ ಏನನ್ನು ಹೇಳೋದು. ಇದು ನಿಜಕ್ಕೂ ಸಮಾಜ ತಲೆ ತಗ್ಗಿಸುವ ಸಂಗತಿ. ಈ ಪ್ರಕರಣದಿಂದ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಜೆಡಿಎಸ್‌ನವರು ಮಾತಾಡುತ್ತಾರೆ. ಕಾನೂನು ಬದ್ಧವಾಗಿ ಏನು ಆಗುತ್ತೋ ನೋಡೋಣ. ನ್ಯಾಯಾಲಯಕ್ಕೆ ಎಲ್ಲರೂ ಸಹ ತಲೆಬಾಗಲೇಬೇಕಾಗುತ್ತದೆ. ನಮ್ಮ ಸರ್ಕಾರದಿಂದ ಪಕ್ಷಪಾತವಿಲ್ಲದೆ ತನಿಖೆ ಮಾಡುತ್ತಿದೆ. ಎಸ್‌ಐಟಿ ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿ ನೀಡಲಿದೆ. ನ್ಯಾಯಾಲಯ ಮುಂದೆ ಎಲ್ಲವೂ ಇದೆ ಎಂದು ಸೂಚ್ಯವಾಗಿ ಹೇಳಿದರು.
ಕುಮಾರಸ್ವಾಮಿಗೆ ಯಾರ ಮೇಲೂ ನಂಬಿಕೆ ಇಲ್ಲ:
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಯಾರ ಮೇಲೂ ನಂಬಿಕೆಯೇ ಇಲ್ಲ. ಮೋದಿ ಅವರನ್ನೇ ಹಿಯಾಳಿಸಿ ಬೈದಿದ್ದಾರೆ. ಆರ್‌ಎಸ್‌ಎಸ್, ಬಿಜೆಪಿ-ಕಾಂಗ್ರೆಸ್ ಎಲ್ಲರಿಗೂ ಬೈದಿದ್ದಾರೆ. ಕುಮಾರಸ್ವಾಮಿ ಅನುಮಾನ ಪಡದ ವ್ಯಕ್ತಿ ಇಲ್ಲವೇ ಇಲ್ಲ. ಪೆನ್‌ಡ್ರೈವ್ ಪ್ರಕರಣದ ಬಗ್ಗೆ ನಮ್ಮ ಸರ್ಕಾರ ಮಾತಾಡಬಾರದು ಎಂದು ತೀರ್ಮಾನ ಮಾಡಿದ್ದೇವೆ. ಇದು ಚರ್ಚೆ ಮಾಡುವ ವಿಚಾರವಲ್ಲ. ಕಾನೂನು ಬದ್ಧವಾಗಿ ಕ್ರಮವಾಗಬೇಕು. ಇಷ್ಟೊತ್ತಿಗೆ ಕುಮಾರಸ್ವಾಮಿ ಕುಟುಂಬ ಎಸ್‌ಐಟಿ ಮುಂದೆ ಪ್ರಜ್ವಲ್‌ನನ್ನು ತಂದು ನಿಲ್ಲಿಸಬೇಕಿತ್ತು. ಅದನ್ನು ಬಿಟ್ಟು ಮಾತಾಡೋದು ಅಲ್ಲ ಎಂದರು.
೧೫ ಸ್ಥಾನಗಳಲ್ಲಿ ಗೆಲುವು:
ಲೋಕಸಭೆ ಚುನಾವಣೆ ನಡೆದಿರುವ ೨೮ ಕ್ಷೇತ್ರಗಳ ಪೈಕಿ ೧೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ. ಅದರಲ್ಲಿ ಒಂದು ಕಡಿಮೆಯಾಗಬಹುದು ಅಥವಾ ಒಂದು ಹೆಚ್ಚಾಗಬಹುದು. ಮಂಡ್ಯದಲ್ಲೂ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಚಲುವರಾಯಸ್ವಾಮಿ ಹೇಳಿದರು.
ನಾವು ಇಷ್ಟೇ ಅಂತರದಿಂದ ಗೆಲುವು ಸಾಧಿಸುವರೆಂದು ಉದ್ಧಟತನದಲ್ಲಿ ಎಂದೂ ಮಾತನಾಡುವುದಿಲ್ಲ. ಒಂದು ಸಾವಿರದಲ್ಲಿ ಗೆದ್ದರೂ ಗೆಲುವೇ. ಜೆಡಿಎಸ್‌ನವರಂತೆ ೨-೩ ಲಕ್ಷ ಅಂತರದಲ್ಲಿ ಗೆಲ್ಲುತ್ತೇವೆಂಬ ಅಹಂಕಾರದ ಮಾತುಗಳನ್ನಾಡುವುದಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ. ಗೆಲುವು ಖಚಿತ ಎಂಬ ಭರವಸೆ ನಮಗಿದೆ ಎಂದರು.
ಮೇಲ್ಮನೆ ಕುತೂಹಲಕ್ಕೆ ತಿರುವು: ದಿಲ್ಲಿಗೆ ಪ್ರತ್ಯೇಕ ಪಟ್ಟಿ ನೀಡಿದ ಸಿದ್ದು, ಡಿಕೆಶಿ..!
ಬೆಟ್ಟಿಂಗ್ ಪ್ರಚೋದಿಸುವುದಿಲ್ಲ:
ಕಾಂಗ್ರೆಸ್ ಗೆಲ್ಲುತ್ತದೆ ಎಂದು ನಾವು ಹೇಳುತ್ತೇವೆಯೇ ವಿನಃ ವಿರೋಧಿಗಳಿಗೆ ಸವಾಲು ಹಾಕುವುದಿಲ್ಲ, ಬೆಟ್ಟಿಂಗ್‌ಗೆ ಜನರನ್ನು ಪ್ರಚೋದಿಸುವುದಿಲ್ಲ. ಬೆಟ್ಟಿಂಗ್‌ಗೆ ನಾವು ಹಿಂದಿನಿಂದಲೂ ವಿರೋಧಿಗಳು. ಯಾವ ಕಾರಣಕ್ಕೂ ಅದಕ್ಕೆ ಮಣೆ ಹಾಕುವುದಿಲ್ಲ. ಜೆಡಿಎಸ್‌ನವರು ಮೊದಲು ೧ಲಕ್ಷಕ್ಕೆ ೩ ಲಕ್ಷ ರು., ೨ ಲಕ್ಷ ರು. ಎನ್ನುತ್ತಿದ್ದವರು ನಂತರದಲ್ಲಿ ೨೫ ಸಾವಿರ, ೫೦ ಸಾವಿರಕ್ಕೆ ಬಂದಿದ್ದರು. ಈಗ ಬೆಟ್ಟಿಂಗ್‌ಗೆ ಯಾರೂ ಮುಂದಾಗುತ್ತಿಲ್ಲ ಎಂದರು.
ನೀರಿಗೆ ತೊಂದರೆಯಾಗುವುದಿಲ್ಲ:
ಈ ಬಾರಿ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ ಸಚಿವ ಎನ್.ಚಲುವರಾಯಸ್ವಾಮಿ, ನಾಲಾ ಆಧುನೀಕರಣ ಕಾಮಗಾರಿ ಶೀಘ್ರಗತಿಯಲ್ಲಿ ಮುಕ್ತಾಯವಾಗಲಿದೆ. ಜುಲೈ ಅಂತ್ಯದ ವೇಳೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಿರುವುದರಿಂದ ಅಲ್ಲಿಯವರೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಒಮ್ಮೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ರೈತರಿಗೆ ತೊಂದರೆಯಾಗದಂತೆ ನೀರು ಹರಿಸುವಂತೆ ಕ್ರಮ ಕೈಗೊಳ್ಳಲು ನೀರಾವರಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ಗೋಷ್ಠಿಯಲ್ಲಿ ಶಾಸಕ ಪಿ.ರವಿಕುಮಾರ್, ಮಾಜಿ ಶಾಸಕ ಎಂ.ಶ್ರೀನಿವಾಸ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ರುದ್ರಪ್ಪ, ಶ್ರೀಧರ್, ಅಂಜನಾ ಇದ್ದರು.