ರಾಜ್ಯ ಸಚಿವ ಸಂಪುಟ ಬದಲಾವಣೆ ವದಂತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಳ್ಳಿಹಾಕಿದ್ದು, ಯಾವುದೇ ಫೈಲ್ ತನ್ನ ಬಳಿ ಬರಬೇಕು ಎಂದು ಸ್ಪಷ್ಟಪಡಿಸಿದರು. ಇತ್ತ, ಮಾಜಿ ಸಚಿವೆ ಹೆಬ್ಬಾಳಕರ್, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದು, ಸಂಪುಟದಲ್ಲಿ ಮಹಿಳೆಯರಿಲ್ಲದಿದ್ದರೆ ಅದು ಅಪೂರ್ಣ ಎಂದಿದ್ದಾರೆ.
ಕಲಬುರಗಿ (ಆ.28): ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರ ತಳ್ಳಿ ಹಾಕಿರುವ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ತಮಗೆ ಈ ವಿಚಾರದಲ್ಲಿ ಯಾವುದೇ ಸುದ್ದಿ ಗಮನಕ್ಕೆ ಬಂದಿಲ್ಲವೆಂದು ಹೇಳುವ ಮೂಲಕ ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ತಳ್ಳಿ ಹಾಕಿದ್ದಾರೆ.
ಏನಾದ್ರೂ ಫೈಲ್ ಬರಬೇಕಿದ್ದರೆ ನನ್ನ ಹತ್ತಿರವೇ ಬರಬೇಕು ತಾನೆ?
ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಗುರುವಾರ ಕಲಬುರಗಿಗೆ ಬಂದಿಳಿದಿರುವ ಖರ್ಗೆ, ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯ ಸಂಪುಟದಲ್ಲಿನ ಬದಲಾವಣೆ ಬಗ್ಗೆ ನನಗೆ ಈ ಬಗ್ಗೆ ಯಾವುದೇ ಸುದ್ದಿ ಇಲ್ಲ, ನಿಮಗೆ ಏನಾದರೂ ಗೊತ್ತಿದ್ದರೆ ಹೇಳಿ. ನಾನು ಈಗ ಸದ್ಯ ಕಲ್ಬುರ್ಗಿಯಲ್ಲಿ ಇದ್ದೇನೆ. ಏನಾದರೂ ಫೈಲ್ ಬರಬೇಕಿದ್ದರೆ ಅದು ನನ್ನ ಹತ್ತಿರವೇ ಬರಬೇಕು ತಾನೆ? ಬೇರೆಯವರ ಹತ್ತಿರ ಅಂತೂ ಹೋಗುವುದಿಲ್ಲ ಎಂದು ಹೇಳುವ ಮೂಲಕ ಸಂಪುಟದಲ್ಲಿನ ಬದಲಾವಣೆ ವಿಚಾರ ಚರ್ಚೆಗೆ ತೆರೆ ಎಳೆದರು.
ಮಹಿಳೆಯರಿಲ್ಲದೆ ಸಚಿವ ಸಂಪುಟ ಅಪೂರ್ಣ: ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ: ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಅವಕಾಶ ಕೊಟ್ಟರೂ, ಕೊಡದಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಮೂರು ವರ್ಷಗಳ ಕಾಲ ಸಚಿವೆಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಪಕ್ಷಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧ ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಮುಂದುವರಿಸುವಂತೆ ತಾವು ಯಾರನ್ನೂ ಕೇಳಿಲ್ಲ. ರಾಜಕಾರಣದಲ್ಲಿ ಇಂತಹ ಬೆಳವಣಿಗೆ ಸಹಜವಾಗಿದ್ದು, ಯಾವಾಗ ಏನು ಬೇಕಾದರೂ ಆಗಬಹುದು. ಹೈಕಮಾಂಡ್ ಸಾಕಷ್ಟು ಆಲೋಚಿಸಿ ನಿರ್ಧಾರ ಕೈಗೊಳ್ಳುತ್ತದೆ. ಅದನ್ನು ಪ್ರಶ್ನಿಸುವುದು ತಮ್ಮ ಕೆಲಸವಲ್ಲ. ಆದರೆ, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು. ಮಹಿಳೆಯರಿಲ್ಲದ ಸಂಪುಟ ಅಪೂರ್ಣ ಎನ್ನುವುದು ತಮ್ಮ ಅಭಿಪ್ರಾಯ ಎಂದರು.


