ಬೆಳಗಾವಿ ವಿಭಜನೆ ವಿಚಾರದ ಬಗ್ಗೆ ಯಾವುದೇ ತೀರ್ಮಾನ ಸದ್ಯಕ್ಕಿಲ್ಲ: ಡಿ.ಕೆ.ಶಿವಕುಮಾರ್
ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಮೂರು ಜಿಲ್ಲೆಗಳನ್ನಾಗಿಸುವ ವಿಚಾರದ ಬಗ್ಗೆ ಯಾವುದೇ ತೀರ್ಮಾನವನ್ನು ಸದ್ಯಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು (ಸೆ.05): ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಮೂರು ಜಿಲ್ಲೆಗಳನ್ನಾಗಿಸುವ ವಿಚಾರದ ಬಗ್ಗೆ ಯಾವುದೇ ತೀರ್ಮಾನವನ್ನು ಸದ್ಯಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಆಡಳಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ವಿಭಜನೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ. ಆದರೆ, ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ರಾಮನಗರ, ಗದಗ, ಚಾಮರಾಜನಗರ ಜಿಲ್ಲೆಗಳಲ್ಲಿ ನಾಲ್ಕು ಹಾಗೂ ಕೊಡಗು ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿವೆ.
ಅದರಿಂದ ಆಡಳಿತ ಸುಗಮವಾಗಿ ಸಾಗುತ್ತಿದೆ. ಬೆಳಗಾವಿ ವಿಭಜನೆ ಕುರಿತು ಯಾರೂ ಅನಗತ್ಯವಾಗಿ ಗಾಬರಿಯಾಗುವ ಅಗತ್ಯವಿಲ್ಲ. ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಕಳೆದ 3 ತಿಂಗಳಲ್ಲಿ 122 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ರೈತರ ಆತ್ಮಹತ್ಯೆ ಕುರಿತಾದ ವರದಿ ಎಲ್ಲಿದೆ? ಅದನ್ನು ನನಗೆ ನೀಡಿ. ಎಲ್ಲವೂ ಸುಳ್ಳು ಸುದ್ದಿ. ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರು.
ಎಲ್ಲಾ ಕ್ಷೇತ್ರದಲ್ಲೂ ಭಾರತ ಉತ್ತಮ ಸಾಧನೆ: ಸಚಿವ ಪರಮೇಶ್ವರ್
ಮೇಕೆದಾಟು ಪಾದಯಾತ್ರೆ ವೇಳೆ ಚಳವಳಿಗಾರರು ಎಲ್ಲಿದ್ರು?: ‘ಕಾವೇರಿ ನೀರಿನ ವಿಚಾರವಾಗಿ ಪ್ರತಿಭಟನೆ ಮಾಡುವ ಸಂಘಟನೆಗಳು ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಎಲ್ಲಿಗೆ ಹೋಗಿದ್ದವು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಯಾಕೆ ಒತ್ತಾಯಿಸಿಲ್ಲ?’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಕಾವೇರಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೆಲ ಸಂಘಟನೆಗಳು ತಮಿಳುನಾಡಿಗೆ ನೀರು ಬಿಡದಂತೆ ಹೋರಾಟ ನಡೆಸುತ್ತಿವೆ ಅವರಿಗೆ ಧನ್ಯವಾದಗಳು. ಆದರೆ, ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ಈ ಸಂಘಟನೆಗಳು ಎಲ್ಲಿ ಹೋಗಿದ್ದವು? ಆಗ ಯಾಕೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಬೇಕು ಎಂದು ಕೇಂದ್ರವನ್ನು ಕೇಳಲಿಲ್ಲ? ಎಂದು ಹೇಳಿದರು.
ಕಾವೇರಿ ನೀರು ಬಿಡುವುದು ಕೇಂದ್ರ ಸರ್ಕಾರದ ಕೈಯಲ್ಲಿ ಇದೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ
ಅಶ್ವತ್ಥನಾರಾಯಣ್ ಹೇಳಿಕೆಗೆ ಡಿಕೆಶಿ ವ್ಯಂಗ್ಯ: ಕಾಂಗ್ರೆಸ್‌ನಿಂದ ಕೆಲ ಬಿಜೆಪಿ ಶಾಸಕರಿಗೆ ಬ್ಲ್ಯಾಕ್‌ಮೇಲ್ ನಡೆಯುತ್ತಿದೆ ಎಂಬ ಮಾಜಿ ಉಪಮುಖ್ಯಮಂತ್ರಿ ಡಾ ಸಿ.ಎನ್. ಅಶ್ವತ್ಥನಾರಾಯಣ್ ಹೇಳಿಕೆಗೆ ‘ಓ.. ಬ್ಲ್ಯಾಕ್‌ಮೇಲ್ ಎಂದು ಹೇಳಿದ್ದಾರಾ? ಇದು ನವರಂಗಿ ನಾರಾಯಣನ ಮಾತು. ನವರಂಗಿ ನಾರಾಯಣನ ಮಾತಿಗೆ ನಮ್ಮ ಎಂ.ಬಿ.ಪಾಟೀಲ್ ತಕ್ಕ ಉತ್ತರ ಕೊಟ್ಟಿದ್ದಾರೆ’ ಎಂದು ವ್ಯಂಗ್ಯ ಧಾಟಿಯಲ್ಲಿ ಹೇಳಿದರು.