ಅಣ್ಣ ಮಾಲಿಕಯ್ಯ ಗುತ್ತೇದಾರ್ ಮತ್ತು ತಮ್ಮ ನಿತಿನ್ ಗುತ್ತೇದಾರ ಒಂದೇ ವಿಮಾನದಲ್ಲಿ ಇಂದು ಕಲಬುರಗಿಗೆ ಆಗಮಿಸಿದ್ದು, ಅಣ್ಣ ಮಾಲೀಕಯ್ಯ ಗುತ್ತೇದಾರ್ ಸಮ್ಮುಖದಲ್ಲಿಯೇ ನಿತಿನ್ ಗುತ್ತೇದಾರ್ ಪರ ಘೋಷಣೆಗಳು ಮೊಳಗಿದವು. ಇದರಿಂದಾಗಿ ಇದೇ ಮೊದಲ ಬಾರಿಗೆ ಮಾಲಿಕಯ್ಯ ಗುತ್ತೇದಾರ್ ಗೆ ತಮ್ಮನಿಂದ ತೀವ್ರ ಮುಜುಗರ ಉಂಟಾಗುವಂತಾಯಿತು.  

ವರದಿ: ಶರಣಯ್ಯ ಹಿರೇಮಠ, ಕಲಬುರಗಿ

ಕಲಬುರಗಿ(ಏ.12): ಕಲಬುರಗಿ ಜಿಲ್ಲೆಯ ಅಫಜಲಪುರ ಮತ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್‌ಗೆ ಸ್ವತಃ ತಮ್ಮನಿಂದಲೇ ಬಂಡಾಯ ಎದುರಾಗಿದೆ. ಅಣ್ಣ ಮಾಲಿಕಯ್ಯ ಗುತ್ತೇದಾರ್ ಮತ್ತು ತಮ್ಮ ನಿತಿನ್ ಗುತ್ತೇದಾರ ಒಂದೇ ವಿಮಾನದಲ್ಲಿ ಇಂದು ಕಲಬುರಗಿಗೆ ಆಗಮಿಸಿದ್ದು, ಅಣ್ಣ ಮಾಲೀಕಯ್ಯ ಗುತ್ತೇದಾರ್ ಸಮ್ಮುಖದಲ್ಲಿಯೇ ನಿತಿನ್ ಗುತ್ತೇದಾರ್ ಪರ ಘೋಷಣೆಗಳು ಮೊಳಗಿದವು. ಇದರಿಂದಾಗಿ ಇದೇ ಮೊದಲ ಬಾರಿಗೆ ಮಾಲಿಕಯ್ಯ ಗುತ್ತೇದಾರ್ ಗೆ ತಮ್ಮನಿಂದ ತೀವ್ರ ಮುಜುಗರ ಉಂಟಾಗುವಂತಾಯಿತು. 

ವಿಮಾನ ನಿಲ್ದಾಣದಿಂದ ಮೊದಲು ನಿತಿನ್‌ ಗುತ್ತೇದಾರ್ ಹೊರಗಡೆ ಆಗಮಿಸುತ್ತಿದ್ದಂತೆಯೇ, ಮಾಲಿಕಯ್ಯ ಗುತ್ತೇದಾರ್ ಅವರ ಪುತ್ರ ಹೃತೀಷ ಗುತ್ತೇದಾರ್ ತನ್ನ ಚಿಕ್ಕಪ್ಪನಿಗೆ ಬರಮಾಡಿಕೊಂಡರು. ನಿತಿನ್‌ ಗುತ್ತೇದಾರ್‌ ಜಸ್ಟ್ ಮುಗುಳ್ನಕ್ಕು ಮುನ್ನಡೆದರು. ಅತ್ತ ಟಿಕೆಟ್ ಪಡೆದ ಖುಷಿಯಲ್ಲಿ ಮಾಲೀಕಯ್ಯ ಗುತ್ತೇದಾರ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಅವರ ಪರ ಘೋಷಣೆ ಶುರುವಾದವು. ಇತ್ತ ನಿತಿನ್‌ ಗುತ್ತೇದಾರ ಅಭಿಮಾನಿಗಳು, ನಿತಿನ್ ಗುತ್ತೇದಾರ ಪರ ಪ್ರತ್ಯೇಕವಾಗಿ ಜಯಘೋಷ ಮೊಳಗಿಸಿದರು. ಇದು ಟಿಕೆಟ್ ಪಡೆದು ಬಂದಿರುವ ಮಾಲೀಕಯ್ಯ ಗುತ್ತೇದಾರಗೆ ತೀವ್ರ ಮುಜುಗರ ಉಂಟಾಗಲು ಕಾರಣವಾಯಿತು. 

Karnataka Assembly Elections 2023: ಭೀಮಾ ತೀರದಲ್ಲಿ ರಾಜಕೀಯ ರಂಗು..!

ಅಣ್ಣನ ವಿರುದ್ಧ ತೊಡೆತಟ್ಟಿದ ತಮ್ಮ

ಮಾಲೀಕಯ್ಯ ಗುತ್ತೇದಾರಗೆ ಬಿಜೆಪಿ ಟಿಕೆಟ್ ಅನೌನ್ಸ್ ಆಗಿದ್ದರೂ ಇತ್ತ ಅವರ ಸಹೋದರ ನಿತಿನ್ ಗುತ್ತೇದಾರಗೆ ಖುಷಿ ಇಲ್ಲ. ಈ ಬಾರಿ ಬಿಜೆಪಿ ನನಗೆ ಟಿಕೆಟ್ ನೀಡುತ್ತದೆ ಎನ್ನುವ ನಂಬಿಕೆ ಇತ್ತು. ಬಿಜೆಪಿ ನನಗೆ ಕೈ ಕೊಟ್ಟಿದೆ. ಆದ್ರೆ ಜನ ಕೈ ಕೊಡಲ್ಲ ಎನ್ನುವ ನಂಬಿಕೆ ಇದೆ ಎನ್ನುವ ಮೂಲಕ ಅಣ್ಣನ ವಿರುದ್ದ ನಿತಿನ್ ಗುತ್ತೇದಾರ ತೊಡೆತಟ್ಟಿದ್ದಾರೆ. 

ಸದ್ಯದಲ್ಲೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದೆ

ನನ್ನ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ ಯಾವ ದಿನ ನಾಮಪತ್ರ ಸಲ್ಲಿಸಬೇಕು ಎನ್ನುವುದು ನಿರ್ಣಯಿಸುತ್ತೇನೆ. ಆದರೆ ಈ ಬಾರಿ ಸ್ಪರ್ಧೆ ಮಾಡುವುದಂತೂ ಖಚಿತ ಎಂದು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ನಿತಿನ್ ಗುತ್ತೇದಾರ್ ಖಡಾಖಂಡಿತವಾಗಿ ಹೇಳಿದ್ದಾರೆ. 

ಹತ್ತು ವರ್ಷಗಳಿಂದ ನನಗೆ ಮುಂದೆ ಭವಿಷ್ಯ ಇದೆ ಎಂದು ಎನ್ನುತ್ತಲೇ ಬಂದಿದ್ದಾರೆ. ನನ್ನ ಅಣ್ಣ ಮಾಲಿಕಯ್ಯ ಗುತ್ತೇದಾರ್ ನನಗೆ ಮುಂದೆ ಭವಿಷ್ಯ ಇದೆ ತಾಳ್ಮೆಯಿಂದ ಇರು ಎಂದು 10 ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಈಗಲೂ ಅವರು ಅದನ್ನೇ ಹೇಳುತ್ತಿದ್ದಾರೆ. ನನ್ನ ಭವಿಷ್ಯ ಮಾಲಿಕಯ್ಯ ಗುತ್ತೇದಾರ ರೂಪಿಸಲ್ಲ , ಜನ ನನ್ನ ಭವಿಷ್ಯ ನಿರ್ಮಿಸುತ್ತಾರೆ ಎನ್ನುವ ಅಚಲ ವಿಶ್ವಾಸ ಇದೆ ಎನ್ನುವ ಮೂಲಕ ತಾಳ್ಮೆಯಿಂದ ಇರು ಎನ್ನುವ ಅಣ್ಣನ ಸಲಹೆಯನ್ನು ನಿತಿನ್ ಗುತ್ತೇದಾರ ಧಿಕ್ಕರಿಸಿದ್ದಾರೆ. 

ಅಫಜಲಪೂರ ಕ್ಷೇತ್ರದಲ್ಲಿ ಯಾವತ್ತೂ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೆ ಮುಖ್ಯವಾಗಿದೆ. ಈ ಬಾರಿಯೂ ಪಕ್ಷಗಳಿಗೆ ಜನ ಮಣೆ ಹಾಕಲ್ಲ. ಒಂದೆಡೆ ಹಿರಿಯರಾದ ಮಾಲೀಕಯ್ಯ ಗುತ್ತೇದಾರ ಮತ್ತೊಂದೆಡೆ ಇನ್ನೊಬ್ಬ ಹಿರಿಯರಾದ ಎಂ.ವೈ ಪಾಟೀಲ್ ಇವರ ನಡುವೆ ಜನ ಯುವಕನಾದ ನನಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ನಿತಿನ್ ಗುತ್ತೇದಾರ ಹೇಳಿದ್ದಾರೆ. 

Karnataka Assembly Elections 2023: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ..!

ಬಿಜೆಪಿಗೆ ಬಂಡಾಯದ ಬಿಸಿ

ಬಿಜೆಪಿ ಅಭ್ಯರ್ಥಿ ಮಾಲಿಕಯ್ಯ ಗುತ್ತೇದಾರ್ ವಿರುದ್ಧ, ಬಂಡಾಯ ಅಭ್ಯರ್ಥಿಯಾಗಿ ನಿತಿನ್ ಗುತ್ತೇದಾರ ಕಣಕ್ಕಿಳಿಯುವುದು ಖಚಿತವಾಗಿದೆ. ತಮ್ಮನಿಂದಲೇ ಸೃಷ್ಟಿಯಾಗಿರುವ ಈ ಬಂಡಾಯದ ಬೇಗುದಿ, ಬಿಜೆಪಿಯ ಅಭ್ಯರ್ಥಿ ಮಾಲಿಕಯ್ಯ ಗುತ್ತೇದಾರ್ ಗೆ ತೀವ್ರ ತಲೆ ನೋವಾಗಿ ಪರಿಣಮಿಸಿದೆ. ಕುಟುಂಬದ ಒತ್ತಡ ಅಥವಾ ಬೇರೆ ಭಾವನಾತ್ಮಕ ಒತ್ತಡಗಳಿಗೆ ಈ ಬಾರಿ ನಿತಿನ್ ಗುತ್ತೇದಾರ್ ಮಣಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಾಗಾಗಿ ಅಬ್ಜಲ್ಪುರ್ ಮತಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ತಲೆನೋವು ಗ್ಯಾರಂಟಿ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.