ಟಿಕೆಟ್‌ ಬೇಡವೆನ್ನುತ್ತಲೇ ಅಫಜಲ್ಪುರ ಅಖಾಡಕ್ಕಿಳಿದ ಹಾಲಿ ಶಾಸಕ ಎಂವೈ ಪಾಟೀಲ್‌, ಬಿಜೆಪಿ ಟಿಕೆಟ್‌ಗಾಗಿ ಗುತ್ತೇದಾರ್‌ ಸಹೋದರರ ಪೈಪೋಟಿ, ಟಿಕೆಟ್‌ಗಾಗಿ ಬೆಂಗಳೂರಲ್ಲಿ ಮಾಲೀಕಯ್ಯಾ, ಗಾಣಗಾಪುರದಲ್ಲಿ ನಿತೀನ್‌ ಠಿಕಾಣಿ. 

ಶೇಷಮೂರ್ತಿ ಅವಧಾನಿ

ಕಲಬುರಗಿ(ಏ.08): ಜಿಲ್ಲೆಯ 9 ವಿಧಾನಸಬೆ ಕ್ಷೇತ್ರಗಳ ಪೈಕಿ ಭೀಮಾ ತೀರ ಅಫಜಲ್ಪುರದಲ್ಲಿ ರಾಜಕೀಯ ರಂಗೇರಿದೆ. ಕಾಂಗ್ರೆಸ್‌ ಇಲ್ಲಿಂದ ಹಾಲಿ ಶಾಸಕ ಎಂವೈ ಪಾಟೀಲರಿಗೇ ಟಿಕೆಟ್‌ ನೀಡಿ ಕಣಕ್ಕಿಳಿಸಿದ ಬೆನ್ನಲ್ಲೇ ಇಲ್ಲಿನ ಮತದಾರರ ಮನಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆಂಬ ಗುಂಗು ಶುರುವಾಗಿದೆ. ಜೆಡಿಎಸ್‌ನಿಂದ ಶಿವಕುಮಾರ್‌ ನಾಟೀಕಾರ್‌ ಸ್ಪರ್ಧೆಯ ಸಿದ್ದತೆಯಲ್ಲಿದ್ದರೆ, ಪಿಎಸ್‌ಐ ಹಗರಣದಕಿಂಗ್‌ಪಿಎನ್‌ ಆರ್‌ ಡಿ ಪಾಟೀಲ್‌ ಪಕ್ಷೇತರರಾಗಿ ಕಣಕ್ಕಿಳಿಯೋದಾಗಿ ಹೇಳಿರೋದರಿಂದ ಬರುವ ದಿನಗಳಲ್ಲಿ ಇಲ್ಲಿನ ರಾಜಕೀಯ ಇನ್ನೂ ರಂಗೇರುವ ಸಾಧ್ಯತೆಗಳೇ ಹೆಚ್ಚಿವೆ.

ಬಿಜೆಪಿ ಟಿಕೆಟ್‌ಗಾಗಿ ತಾಲೂಕಿನ ಗುತ್ತೇದಾರ್‌ ಕುಟುಂಬದಲ್ಲೇ ಸಹೋದರರ ಮಧ್ಯೆ ಪೈಪೋಟಿ ಕಾಣಿಸಿಕೊಂಡಿದೆ. ಜನಾಗ್ರಹದಂತೆ ಕಣಕ್ಕಿಳಿಯುತ್ತಿರುವೆ ಎಂದು ಮಾಲೀಕಯ್ಯಾ ಗುತ್ತೇದಾರ್‌ ತಮಗೇ ಟಿಕೆಟ್‌ ಬೇಕೆದು ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದಾರೆ. ಬೆಂಗಳೂರು, ದೆಹಲಿ ಸುತ್ತಿ ಬಂದಿರುವ ನಿತೀನ್‌ ಗುತ್ತೇದಾರ್‌ ಗಾಣಗಾಪುರದಲ್ಲಿ ತಂದೆಯವರ ಸಮಾಧಿ ಸ್ಥಳದಲ್ಲಿ ಅಭಿಮಾನಿಗಳ ಸಭೆ ನಡೆಸಿ ಕಣಕ್ಕಿಳಿಯೋದು ನಿಶ್ಚಿತ, ಬಿಜೆಪಿ ಟಿಕೆಟ್‌ಗಾಗಿ ಯತ್ನ ಸಾಗಿದೆ, ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸೋದು ಗ್ಯಾರಂಟಿ ಎಂದು ಘೋಷಿಸಿದ್ದಾರೆ.

ಸೇಡಂ ಜಿದ್ದಾಜಿದ್ದಿ: ಕಾಗಿಣಾ ತೀರದಲ್ಲಿ ಈ ಬಾರಿ ಮತ್ತೊಂದು ಚತುಷ್ಕೋನ ಕದನ

ಇತ್ತ ನಿತಿನ್‌ ಬೆಂಬಲಿಗರು ಬಿಜೆಪಿ ಹೈಕಮಾಂಡ್‌ಗೆ ರಕ್ತದಲ್ಲಿ ಪತ್ರ ಬರೆದು, ಶ್ರೀಶೈಲ ಹರಕೆಗಳನ್ನು ತೀರಿಸುತ್ತ ನಿತೀನ್‌ಗೆ ಟಿಕೆಟ್‌ ಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಹೀಗಾಗಿ ಗುತ್ತೇದಾರ್‌ ಕುಟುಂಬದಲ್ಲಿನ ಈ ಟಿಕೆಟ್‌ ಫೈಟ್‌ ತಾಲೂಕಿನಲ್ಲೇ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು ಜನರಲ್ಲಿ ಒಂಥರಾ ಗುಂಗು ಹಿಡಿಸಿದೆ. ದಿನ ಬೆಳಗಾದರೆ ಬಿಜೆಪಿ ಟಿಕೆಟ್‌ ಯಾರಿಗಾಯ್ತೆಂದು ಜನರೇ ಕುತೂಹಲದಿಂದ ಚರ್ಚಿಸುವಂತಾಗಿದೆ.
ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜೆಎಂ ಕೊರಬು ತಮಗೆ ಟಿಕೆಟ್‌ ಕೈ ತಪ್ಪಿದ್ದರಿಂದ ಬೇಸರದಲ್ಲಿದ್ದಾರೆ. ಅಭಿಮಾನಿಗಳ ಸಭೆ ಕರೆದು ಮುಂದಿನ ನಡೆಯನ್ನು ನಿರ್ಧರಿಸೋದಾಗಿಯೂ ಹೇಳುವ ಮೂಲಕ ತಮ್ಮ ರಾಜಕೀಯ ನಡೆ ಗುಟ್ಟಾಗಿಟ್ಟಿದ್ದಾರೆ.

ತಮ್ಮ ಮಕ್ಕಳಲ್ಲಿ ಯಾರಿಗಾದರೂ ಟಿಕೆಟ್‌ ಕೊಡುವಂತೆ ಕೋರಿ ತಮಗೆ ಟಿಕೆಟ್‌ ಬೇಡವೆಂದವರು ಎಂವೈ ಪಾಟೀಲ್‌. ಆದರೆ ಹೈಕಮಾಂಡ್‌ ಪಾಟೀಲರನ್ನೇ ಕಣಕ್ಕಿಳಿಸಿರೋದರಿಂದ ಅವರೀಗ ಉತ್ಸಾಹದಿಂದ ಕ್ಷೇತ್ರ ಸಂಚಾರಕ್ಕೆ ತೊಡಗಿದ್ದಾರೆ.

ಬಿಜೆಪಿ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿ ನಾನು, ನನಗೇ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದೇನೆ. ಒಂದು ವೇಳೆ ಟಿಕೆಟ್‌ ಸಿಗದೆ ಇದ್ದ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ. ನನ್ನ ಹಿರಿಯ ಸಹೋದರ ಮಾಲೀಕಯ್ಯಾ ಗುತ್ತೇದಾರ್‌ ಅವರು 2018ರ ಚುನಾವಣೆ ಸಂದರ್ಭದಲ್ಲಿ 2023ರ ಉತ್ತರಾಧಿಕಾರಿ ನೀನೇ ಎಂದು ನನಗೆ ಭರವಸೆ ನೀಡಿ ಈಗ ಕೊಟ್ಟಮಾತಿಗೆ ತಪ್ಪಿದ್ದಾರೆ. ಕ್ಷೇತ್ರದಲ್ಲಿ ನನ್ನ ಪರ ಕೂಗಿದೆ. ಹೀಗಾಗಿ ಅಖಾಡದಲ್ಲಂತೂ ನಾನು ಇರೋದು ಪಕ್ಕಾ ಅಂತ ಅಫಜಲ್ಪುರ ಬಿಜೆಪಿ ಮುಖಂಡ ನಿತೀನ್‌ ಗುತ್ತೇದಾರ್‌ ತಿಳಿಸಿದ್ದಾರೆ. 

ನಾವು ಈ ಹಿಂದೆ ತೀರ್ಮಾನ ಮಾಡಿದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸಹೋದರ ರುದ್ರಗೌಡ ಪಾಟೀಲ್‌ ತಮ್ಮ ನಾಮಪತ್ರವನ್ನು 17ರಂದು ಸಲ್ಲಿಸಲಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜನಾರ್ಧನ್‌ ರೆಡ್ಡಿ ಅವರನ್ನು ಸಂಪರ್ಕಿಸಿದಾಗ ಅಫಜಲಪುರ ಟಿಕೆಟ್‌ ನೀಡುತ್ತೇನೆ ಎಂದಾಗ ಸಮಾವೇಶಕ್ಕೆ ಸಜ್ಜಾಗಿದ್ದೇವು. ಕಾಣದ ಕೈಗಳು ರೆಡ್ಡಿಗೆ ಕಿವಿ ತುಂಬಿ ಟಿಕೆಟ್‌ ನಮಗೆ ದೊರಕದಂತೆ ಮಾಡಿದ್ದಾರೆ. ಜನಾಭಿಪ್ರಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಏ. 17 ರಂದು ಬಸವೇಶ್ವರ ವೃತ್ತದಿಂದ ನ್ಯಾಷನಲ್‌ ಫಂಕ್ಷನ್‌ ಹಾಲ್‌ ವರೆಗೆ ಬೃಹತ್‌ ರ್ಯಾಲಿ ಮಾಡಿ ನಾಮಪತ್ರ ಹಾಕುತ್ತೇವೆ ಅಂತ ಅಫಜಲ್ಪುರ ಆರ್‌ಡಿಪಿ ಸಹೋದ ಮಹಾಂತೇಶ ಪಾಟೀಲ್‌ ಹೇಳಿದ್ದಾರೆ. 

ಕಾರಣಾಂತರದಿಂದ ಇದೊಂದು ಬಾರಿ ನೀವೆ ಸ್ಪರ್ಧಿಸಿರೆಂದು ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಟಿಕೆಟ್‌ ನೀಡಿದ್ದಕ್ಕೆ ವರಿಷ್ಠರಿಗೆ ಅಭಿನಂದನೆ, ಇದೊಂದು ಬಾರಿ ನನಗೆ ಅವಕಾಶ ಮಾಡಿಕೊಡಿ ಎಂದು ಜನರಿಗೆ ಕೇಳುವೆ, ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ. 7 ಜನ ಟಿಕೆಟ್‌ ಆಕಾಂಕ್ಷಿಗಳು ಇದ್ದರೂ ಸಹ ಪಕ್ಷದ ಸೂಚನೆ ಮೇರೆಗೆ ಚುನಾವಣೆ ಸ್ಪರ್ಧೆಗೆ ಮುಂದಾಗಿದ್ದೇನೆ. ಆಕಾಂಕ್ಷಿಗಳ ಜೊತೆಗೆ ಮಾತನಾಡಿದ್ದೇನೆ ಎಲ್ಲರೂ ಒಗ್ಗೂಡಿ ಚುನಾವಣೆ ಮಾಡೋಣ ಎಂದು ಭರವಸೆ ನೀಡಿದ್ದಾರೆ ಅಂತ ಅಫಜಲ್ಪುರ ಶಾಸಕ ಹಾಗೂ ಕಾಂಗ್ರೆಸ್‌ ಹುರಿಯಾಳು ಎಂವೈ ಪಾಟೀಲ್‌ ತಿಳಿಸಿದ್ದಾರೆ.

ನಾನೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ವರಿಷ್ಠರು ಹಾಲಿ ಶಾಸಕರಿಗೇ ಮತ್ತೊಮ್ಮೆ ಅವಕಾಶ ನೀಡಿರೋದಿಂದ ನಾನು ಟಿಕೆಟ್‌ ವಂಚಿತನಾಗಿದ್ದೇನೆ. ಈ ಬೆಳವಣಿಗೆ ಹಾಗೂ ಇನ್ನೂ ಹಲವು ವಿಚಾರ ಚರ್ಚಿಸಲು ಶೀಘ್ರವೇ ಹಿತೈಷಿಗಳು, ಅಭಿಮಾನಿಗಳ ಸಭೆ ಕರೆಯುವೆ. ಇಲ್ಲಿ ಹಲವು ವಿಷಯ ಚರ್ಚಿಸಿ ನನ್ನ ಮುಂದಿನ ನಡೆ ಪ್ರಕಟಿಸುವೆ. ಅಭಿಮನಿಗಳು, ಹಿತೈಷಿಗಳು ಸೇರಿ ಕೈಗಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುವೆ ಅಂತ ಅಫಜಲ್ಪುರ ಕಾಂಗ್ರೆಸ್‌ ಟಿಕೆಟ್‌ ವಂಚಿತ ಜೆಎಂ ಕೊರಬು ಹೇಳಿದ್ದಾರೆ. 

ಕರ್ನಾಟಕದಲ್ಲಿ ಪಕ್ಷಾಂತರ ಪರ್ವ: ಬಿಜೆಪಿಗೆ ಗುಡ್‌ಬೈ ಹೇಳ್ತಾರಾ ಮತ್ತೊಬ್ಬ ನಾಯಕ?

ನಾನು ಜನಾಗ್ರಹದಿಂದ ಕಣಕ್ಕೆ ಇಳಯಲು ಮುಂದಾದವ, 2018 ರ ಚುನಾವಣೆಯ ನಂತರ ಕೋವಿಡ್‌ ಬಂದು ಅನಾರೋಗ್ಯ ಕಾಡಿದಾಗ ಕ್ಷೇತ್ರದತ್ತ ಗಮನ ವಿರಲಿ ಎಂದು ತಮ್ಮ ನಿತಿನ್‌ಗೆ ಹೇಳಿದ್ದೇ ತಪ್ಪಾಯ್ತು ಎಂಬಂತೆ ಇಂದು ಅವನೇ ಟಿಕೆಟ್‌ಗೆ ದುಂಬಾಲು ಬಿದ್ದಿದ್ದಾನೆ. ಈ ಬಾರಿ ಆತ ನನಗೆ ಬೆಂಬಬಲಿಸಲಿ, ಮುಂದೆ ಅವನಿಗೆ ಅವಕಾಶ ಇದ್ದೇ ಇರುತ್ತದಲ್ಲ. ಜನರೇ ನನ್ನ ಸ್ಪರ್ಧೆ ಬಯಸಿದ್ದಾರೆ. ಜನಾಗ್ರಹವನ್ನ ನಾನು ಗೌರವಿಸುವೆ, ವರಿಷ್ಠರು ಟಿಕೆಟ್‌ ನನಗೆ ನೀಡುತ್ತಾರೆಂಬ ವಿಶ್ವಾಸವಿದೆ ಅಂತ ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಅಫಜಲ್ಪುರ ಟಿಕೆಟ್‌ ಆಕಾಂಕ್ಷಿ ಮಾಲೀಕಯಾ ಗುತ್ತೇದಾರ್‌ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.