Asianet Suvarna News Asianet Suvarna News

Tumakuru ಅವಳಿ ಶಿಶು ಧಾರುಣ ಸಾವು ಪ್ರಕರಣ: ಸಚಿವರ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ಕೇವಲ ರಾಜಕೀಯ, ಚುನಾವಣೆ, ಪ್ರಚಾರದಲ್ಲಿ ಮುಳುಗೇಳುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಆಡಳಿತದ ಕರಾಳ ಮುಖದ ಬಗ್ಗೆ (ಮಂಡ್ಯದ ಘಟನೆ) ಸ್ವಲ್ಪ ಹೊತ್ತಿನ ಹಿಂದೆ ನಾನು ಟ್ವೀಟ್ ಮಾಡಿದ್ದೆ. ಆದರೆ, ಅದಕ್ಕಿಂತ ಭಯಾನಕ ಹಾಗೂ ಕರುಳು ಹಿಂಡುವ, ಇಡೀ ಕರ್ನಾಟಕವೇ ತಲೆ ತಗ್ಗಿಸುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಆಡಳಿತಕ್ಕೆ ಛೀಮಾರಿ ಹಾಕಿದ್ದಾರೆ. 

jds leader hd kumaraswamy demands dr sudhakar resignation over pregnant woman death in tumakuru gvd
Author
First Published Nov 3, 2022, 8:45 PM IST

ಬೆಂಗಳೂರು (ನ.03): ಕೇವಲ ರಾಜಕೀಯ, ಚುನಾವಣೆ, ಪ್ರಚಾರದಲ್ಲಿ ಮುಳುಗೇಳುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಆಡಳಿತದ ಕರಾಳ ಮುಖದ ಬಗ್ಗೆ (ಮಂಡ್ಯದ ಘಟನೆ) ಸ್ವಲ್ಪ ಹೊತ್ತಿನ ಹಿಂದೆ ನಾನು ಟ್ವೀಟ್ ಮಾಡಿದ್ದೆ. ಆದರೆ, ಅದಕ್ಕಿಂತ ಭಯಾನಕ ಹಾಗೂ ಕರುಳು ಹಿಂಡುವ, ಇಡೀ ಕರ್ನಾಟಕವೇ ತಲೆ ತಗ್ಗಿಸುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ಆಡಳಿತಕ್ಕೆ ಛೀಮಾರಿ ಹಾಕಿದ್ದಾರೆ. 

ಆರೋಗ್ಯ ಇಲಾಖೆ ಅದೆಷ್ಟು ಹಾಳಾಗಿ ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ದುರಂತ ಸಾಕ್ಷಿ ಇನ್ನೊಂದಿಲ್ಲ. ಈ ಹದಗೆಟ್ಟ ಆರೋಗ್ಯ ವ್ಯವಸ್ಥೆ ತುಮಕೂರಿನಲ್ಲಿ ಅನಾಥ ಬಾಣಂತಿಯ ಜತೆಗೇ ಹುಟ್ಟಿದೊಡನೆ ಎರಡು ಹಸುಗೂಸುಗಳನ್ನು ಬಲಿ ತೆಗೆದುಕೊಂಡಿದೆ. ಅಭಿವೃದ್ಧಿ, ಆವಿಷ್ಕಾರ ಎಂದೆಲ್ಲ ಬೀಗುವ ಈ ಸರಕಾರ ನಾಚಿಕೆಯಿಂದ ತಲೆ ತಗ್ಗಿಸಬೇಕಿದೆ. ಎಂದು ಹೆಚ್‌ಡಿಕೆ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರಸವ ವೇದನೆಯಿಂದ ಬಳಲುತ್ತಿದ್ದ ತುಮಕೂರಿನ ಭಾರತೀನಗರದ ಶ್ರೀಮತಿ ಕಸ್ತೂರಿ (30) ಎಂಬ ಮಹಿಳೆಯನ್ನು ನಿನ್ನೆ ತಡರಾತ್ರಿ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಕರ್ತವ್ಯದಲ್ಲಿದ್ದ ವೈದ್ಯೆ, ಆ ಗರ್ಭಿಣಿಗೆ ಹೆರಿಗೆ ಮಾಡಿಸದೆ ತಾಯಿ ಕಾರ್ಡ್ ಮಾಡಿಸಿಲ್ಲ ಎನ್ನುವ ನೆಪ ಹೇಳಿ ನಿರ್ದಯವಾಗಿ ವಾಪಸ್ ಕಳಿಸಿದ್ದಾರೆ.

Tumkur: ಜಿಲ್ಲಾಸ್ಪತ್ರೆ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಮಕ್ಕಳು ಬಲಿ..!

ಹೆರಿಗೆ ನೋವಿನಿಂದ ನರಳುತ್ತಿದ್ದ ಆ ಮಹಿಳೆ, ತನಗೆ ಹೆರಿಗೆ ಮಾಡಿಸಿ ಎಂದು ಆ ವೈದ್ಯೆಯನ್ನು ಪರಿಪರಿಯಾಗಿ ಅಂಗಲಾಚಿದ್ದಾರೆ. ಆದರೆ, ದರ್ಪದಿಂದ ವರ್ತಿಸಿದ ವೈದ್ಯೆ, ಹೆರಿಗೆ ಮಾಡಿಸದೆ ಮಾನವೀಯತೆಯನ್ನೇ ಮರೆತು ಆಕೆಯನ್ನು ವಾಪಸ್ ಕಳಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಹೆರಿಗೆ ಮಾಡಿಸಿಕೋ ಎಂದು ತಾಕೀತು ಮಾಡಿದ್ದಾರೆ. ಬೇರೆ ದಾರಿ ಇಲ್ಲದೆ, ಹಣವೂ ಇಲ್ಲದೆ ಹೊಟ್ಟೆ ನೋವಿನಲ್ಲೇ ಮನೆಗೆ ವಾಪಸ್ ಬಂದಿದ್ದ ಆ ಮಹಿಳೆ, ಇಡೀ ರಾತ್ರಿ ನರಳಿನರಳಿ ಬೆಳಗಿನಜಾವ ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವವಾಗಿ ಎರಡು ಮಕ್ಕಳ ಜತೆಗೆ ತಾನೂ ಸಾವನ್ನಪ್ಪಿದ್ದಾರೆ. 6 ವರ್ಷದ ಇನ್ನೊಂದು ಹೆಣ್ಣು ಮಗು ತಬ್ಬಲಿ ಆಗಿದೆ ಎಂದು ಹೆಚ್‌. ಡಿ. ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬಾಣಂತಿ ಮತ್ತು ಅವಳಿ ಹಸುಗೂಸುಗಳ ಧಾರುಣ ಸಾವಿಗೆ ಆ ವೈದ್ಯೆ ಮತ್ತು ಸರಕಾರವೇ ನೇರ ಹೊಣೆ. ಸ್ವತಃ ವೈದ್ಯರೆಂದು ಹೇಳಿಕೊಳ್ಳುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಉಸ್ತುವಾರಿಯಲ್ಲಿ ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಹಳ್ಳಹಿಡಿದು ಹೋಗಿದೆ ಎನ್ನುವುದಕ್ಕೆ ಈ ಸಾವುಗಳೇ ಸಾಕ್ಷಿ. ಮಾನವೀಯತೆ ಇಲ್ಲದ ವೈದ್ಯೆ ಹಾಗೂ ಸರಕಾರವೇ ಮಾಡಿದ ಕೊಲೆಗಳಿವು. ಎಂದು ಆರೋಪ ಮಾಡಿದ್ದಾರೆ. ಕೂಡಲೇ ಆ ವೈದ್ಯೆಯನ್ನು ಸೇವೆಯಿಂದ ವಜಾ ಮಾಡಬೇಕು. ಕರ್ತವ್ಯಲೋಪ ಎಸಗಿದ ಇತರೆ ಸಿಬ್ಬಂದಿಗೂ ತಕ್ಕಶಾಸ್ತಿ ಮಾಡಬೇಕು. ಜಿಲ್ಲಾಸ್ಪತ್ರೆಯ ಅಧಿಕ್ಷರನ್ನೂ ಇದಕ್ಕೆ ಹೊಣೆ ಮಾಡಿ ಮನೆಗೆ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿಯೇ ‘ಪಂಚರತ್ನ’ ಗುರಿ: ಎಚ್‌.ಡಿ.ಕುಮಾರಸ್ವಾಮಿ

ಈ ಸರಕಾರಿ ಕೊಲೆಗಳಿಗೆ ಆರೋಗ್ಯ ಸಚಿವರು ನೈತಿಕ ಹೊಣೆ ಹೊರಲೇಬೇಕು, ಡಾ.ಕೆ.ಸುಧಾಕರ್ ಅವರು ಕೂಡಲೇ ರಾಜೀನಾಮೆ ನೀಡಲೇಬೇಕು, ಇಲ್ಲವೇ ಮುಖ್ಯಮಂತ್ರಿ ಶ್ರೀ @BSBommai ಅವರು ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ತಬ್ಬಲಿಯಾದ ಮಗುವಿನ ಜವಾಬ್ದಾರಿಯನ್ನು ಸರಕಾರವೇ ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ @BJP4Karnataka ಸರಕಾರ ಬಂದ ಮೇಲೆ ಚುನಾವಣೆಗಳು, ಮುಖ್ಯಮಂತ್ರಿಗಳ ಬದಲಾವಣೆ, ಅಬ್ಬರದ ಪ್ರಚಾರವೇ ಸುದ್ದಿಯಾಗುತ್ತಿದೆ. ಆದರೆ, ಅಭಿವೃದ್ಧಿಯಲ್ಲಿ  ಹಿಮ್ಮುಖವಾಗಿ ಚಲಿಸುತ್ತಿದೆ. ಬಾಣಂತಿ ಮತ್ತು ಹಸುಗೂಸುಗಳ ದುರಂತ ಸಾವು ಕರ್ನಾಟಕದ ಆತ್ಮಸಾಕ್ಷಿಯನ್ನು ಕಲಕಿದೆ. ಆ ನತದೃಷ್ಟ ಮಹಿಳೆ, ಆಕೆಯ ಮಕ್ಕಳಿಬ್ಬರಿಗೂ ಚಿರಶಾಂತಿ ಸಿಗಲಿ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
 

Follow Us:
Download App:
  • android
  • ios