ಕುರ್ಚಿ ಉಳಿಸಿಕೊಳ್ಳಲು, ಕುರ್ಚಿ ಭದ್ರಪಡಿಸಿಕೊಳ್ಳಲು, ಅಧಿಕಾರ ಪಡೆಯಲು ಕಿತ್ತಾಟ ಮಾಡುವುದೇ ರಾಜ್ಯ ಸರ್ಕಾರದ ಸಾಧನೆಯಾಗಿದೆ. ಕುರ್ಚಿ ತಿಕ್ಕಾಟದಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಇಂಡಿ (ಜು.17): ಕುರ್ಚಿ ಉಳಿಸಿಕೊಳ್ಳಲು, ಕುರ್ಚಿ ಭದ್ರಪಡಿಸಿಕೊಳ್ಳಲು, ಅಧಿಕಾರ ಪಡೆಯಲು ಕಿತ್ತಾಟ ಮಾಡುವುದೇ ರಾಜ್ಯ ಸರ್ಕಾರದ ಸಾಧನೆಯಾಗಿದೆ. ಕುರ್ಚಿ ತಿಕ್ಕಾಟದಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷಕ್ಕೆ ನಿಷ್ಠಾವಂತ ಶಾಸಕರು ಆಯ್ಕೆಯಾಗುವ ಅವಶ್ಯಕತೆ ಇದೆ. ಪಕ್ಷವನ್ನು ರಾಜಕೀಯವಾಗಿ ಬಳಸಿಕೊಂಡು, ಉನ್ನತ ಸ್ಥಾನಮಾನ, ಹುದ್ದೆಗಳನ್ನು ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿ, ಪಕ್ಷದ ವರಿಷ್ಠರಿಗೆ, ನಂಬಿದ ನಿಷ್ಠಾವಂತ ಕಾರ್ಯಕರ್ತರಿಗೆ ವಂಚಿಸಿ ಮತ್ತೊಂದು ಪಕ್ಷಕ್ಕೆ ಹೋಗುವವರು ಇದ್ದಾರೆ. ಅಂತಹವರನ್ನು ದೂರ ಇಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕರ್ತರು ಪಕ್ಷ ಸಂಘಟನೆ, ಬಲವರ್ಧನೆಗೆ ಶ್ರಮಿಸಬೇಕು. ಪಕ್ಷ ಹಾಗೂ ಬಿ.ಡಿ.ಪಾಟೀಲರಿಗೆ ಶಕ್ತಿ ತುಂಬಬೇಕು. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಸಂಪರ್ಕ ನಿರಂತರವಾಗಿ ಇಟ್ಟುಕೊಳ್ಳುವ ಬಯಕೆಯಿಂದ ನಿಮ್ಮ ಬಳಿಗೆ ಬಂದಿದ್ದೇನೆ. ಜನರ ಧ್ವನಿಯಾಗಿರುವ, ಪಕ್ಷ ಕಟ್ಟಲು ಶ್ರಮಿಸುವ ನಿಷ್ಠಾವಂತರನ್ನು ಹುಡುಕಿ ಕಾರ್ಯಕರ್ತರ ಸಮಕ್ಷಮ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.
ಜನತೆಯ ಸುಲಿಗೆ: ರಾಜ್ಯದ ಕಾಂಗ್ರೆಸ್ ಸರ್ಕಾರ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ತೆರಿಗೆ ಮೂಲಕ ಜನತೆಯ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ನಿಖಿಲ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಸತ್ತ ಸರ್ಕಾರವಾಗಿದೆ. ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಜನರಿಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆಯನ್ನು ಹಿಡಿದಿದೆ. ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ದುಪ್ಪಟ್ಟು ತೆರಿಗೆ ವಿಧಿಸುವ ಮೂಲಕ ಜನತೆಯ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಯಾವುದೋ ಒಂದು ಭಾಗಕ್ಕೆ ಜೆಡಿಎಸ್ ಸೀಮಿತವಾಗಿಲ್ಲ. ಬದಲಾಗಿ ರಾಜ್ಯದ ಉದ್ದಗಲಕ್ಕೂ ಪ್ರಾದೇಶಿಕ ಪಕ್ಷಕ್ಕೆ ಜನರ ಮನ್ನಣೆ ದೊರೆತಿದೆ. ಈಗಾಗಲೇ ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡಿದ್ದು ಅದನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದರು.
