ಕುಂದಗೋಳ: ನೂತನ ಶಾಸಕ ಎಂ.ಆರ್‌.ಪಾಟೀಲ ಎದುರು ನೂರೆಂಟು ಸವಾಲು

ಜಿಲ್ಲೆಯಲ್ಲೇ ಅತಿ ಹಿಂದುಳಿದ ಕ್ಷೇತ್ರವೆಂದರೆ ಕುಂದಗೋಳ. ಹಾಗಂತ ಅಭಿವೃದ್ಧಿ ಕೆಲಸಗಳು ಆಗಿಲ್ಲ ಅಂತೇನೂ ಇಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬ ಅಸಮಾಧಾನ ಜನಸಾಮಾನ್ಯರದ್ದು. ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಂ.ಆರ್‌. ಪಾಟೀಲಗೆ ಇಲ್ಲಿ ಅಭಿವೃದ್ಧಿ ಮಾಡುವ ಮೂಲಕ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿಯಿಂದ ಹೊರತರುವುದು ದೊಡ್ಡ ಸವಾಲಾಗಿದೆ.

New MLA MR Patil faces many challenges at kundagola assembly constituency rav

ಗಂಗಾಧರ ಡಾಂಗೆ

ಕುಂದಗೋಳ (ಮೇ.26) : ಜಿಲ್ಲೆಯಲ್ಲೇ ಅತಿ ಹಿಂದುಳಿದ ಕ್ಷೇತ್ರವೆಂದರೆ ಕುಂದಗೋಳ. ಹಾಗಂತ ಅಭಿವೃದ್ಧಿ ಕೆಲಸಗಳು ಆಗಿಲ್ಲ ಅಂತೇನೂ ಇಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬ ಅಸಮಾಧಾನ ಜನಸಾಮಾನ್ಯರದ್ದು. ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಂ.ಆರ್‌. ಪಾಟೀಲಗೆ ಇಲ್ಲಿ ಅಭಿವೃದ್ಧಿ ಮಾಡುವ ಮೂಲಕ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿಯಿಂದ ಹೊರತರುವುದು ದೊಡ್ಡ ಸವಾಲಾಗಿದೆ.

ಭರ್ತಿ ಕಪ್ಪು ಮಣ್ಣಿನಿಂದ ಕೂಡಿರುವ ಈ ಕ್ಷೇತ್ರದಲ್ಲಿ ಜನರ ಉದ್ಯೋಗ ಕೃಷಿ. ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳ ಇಲ್ಲಿನ ಪ್ರಮುಖ ಬೆಳೆ. ಶಿಗ್ಗಾಂವಿಯಲ್ಲಿ ಉಗಮವಾಗುವ ಬೆಣ್ಣಿಹಳ್ಳದ ಉಪಟಳವೂ ಇಲ್ಲಿನ ಜನರನ್ನು ಹೈರಾಣಾಗಿಸಿದೆ. ಹತ್ತಾರು ಹಳ್ಳಿಗಳು ಜಲದಿಗ್ಬಂಧನಕ್ಕೊಳಗಾಗುವುದು ಪ್ರತಿವರ್ಷ ಇಲ್ಲಿ ಮಾಮೂಲಿ. ನದಿಯಂತೆ ಬೆಣ್ಣಿಹಳ್ಳ ಹರಿಯುತ್ತಿದ್ದರೂ ಕುಡಿವ ನೀರಿಗೆ ತತ್ವಾರ ತಪ್ಪಿಲ್ಲ. ಹಳ್ಳಿಗಳಲ್ಲಿ ದೂರ ದೂರದಿಂದ ನೀರು ತರುವುದು ಇಲ್ಲಿನ ಜನರಿಗೆ ತಪ್ಪದ ಶಿಕ್ಷೆ.

'ಗೌಡ್ರ ಚಿಂತಿ ಬಿಡ್ರಿ, ಈ ಸಲಾ ನಿಮ್ಮನ್‌ ಗೆಲ್ಸತೀವಿ' : ಎಂಆರ್‌ ಪಾಟೀಲ್‌ಗೆ ಮತದಾರರ ಅಭಯ

ಬಹುಗ್ರಾಮ ಕುಡಿವ ನೀರು ಯೋಜನೆ ಬರೀ ಹೆಸರಿಗೆ ಮಾತ್ರ ಸೀಮಿತವಾಗಿದೆ. ಕುಡಿವ ನೀರಿನ ಸಮಸ್ಯೆ ಬಗೆಹರಿಸುವುದು ದೊಡ್ಡ ಸವಾಲು. ಸದ್ಯ ‘ಹರ್‌ ಘರ್‌ ಜಲಜೀವನ’ ಕೇಂದ್ರದ ಯೋಜನೆಯೇನೋ ಬಂದಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ.

ಡಿಕೆಶಿ ದತ್ತು ಭರವಸೆ:

ಹಿಂದೆ ದಿ.ಸಿ.ಎಸ್‌.ಶಿವಳ್ಳಿ ಸಚಿವರು, ಶಾಸಕರಾಗಿದ್ದಾಗ ಕೆಲವೊಂದಿಷ್ಟುಅಭಿವೃದ್ಧಿ ಕೆಲಸಗಳಾಗಿವೆ. ಆದರೆ ಅವರ ನಿಧನದ ನಂತರ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಶಾಸಕರಾದರು. ಅಧಿಕಾರಿಗಳ್ಯಾರೂ ಶಾಸಕರ ಮಾತು ಕೇಳುವ ಗೋಜಿಗೆ ಹೋಗಲಿಲ್ಲ.

2019ರಲ್ಲಿ ಉಪಚುನಾವಣೆ ವೇಳೆ ಈ ಕ್ಷೇತ್ರ ದತ್ತು ಪಡೆಯುತ್ತೇನೆ. ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಪಡಿಸುವೆ ಎಂದೆಲ್ಲ ಈಗಿನ ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದ್ದರು. ಬರೀ ಚುನಾವಣೆಯಲ್ಲಿ ಗೆಲ್ಲುವುದಕ್ಕಷ್ಟೇ ಈ ಭರವಸೆ ಸೀಮಿತವಾಗಿತ್ತು. ಆಮೇಲೆ ಕ್ಷೇತ್ರದತ್ತ ತಿರುಗಿಯೂ ನೋಡಿಲ್ಲ. ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳೇ ಆಗಲಿಲ್ಲ.

ಏನೇನು ಸಮಸ್ಯೆ:

ತಾಲೂಕಿನಲ್ಲಿ ಸಾರಿಗೆ ಸಂಪರ್ಕದ್ದೇ ದೊಡ್ಡ ಸಮಸ್ಯೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಾರಿಗೆ ಸಂಪರ್ಕ ಸಮರ್ಪಕವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಆಗೊಮ್ಮೆ, ಈಗೊಮ್ಮೆ ಸಂಚರಿಸುವ ಬಸ್‌ಗಳಿಂದಾಗಿ ಸುಸ್ತಾದ ಜನರು ಖಾಸಗಿ ವಾಹನಗಳ ಮೊರೆ ಹೋಗುವಂತಾಗಿದೆ. ಇನ್ನು ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕುರಿತು ಹಲವು ಬಾರಿ ಪ್ರತಿಭಟನೆ, ಆಕ್ರೋಶ ವ್ಯಕ್ತವಾದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಈ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂಬ ಆಸೆ ಕ್ಷೇತ್ರದ ಜನರಲ್ಲಿದೆ.

ಮೂಲಸೌಕರ್ಯಕ್ಕೆ ಆದ್ಯತೆ:

ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕು. ಬೆಣ್ಣಿಹಳ್ಳದ ಪ್ರವಾಹಕ್ಕೆ ತಡೆ ನೀಡಬೇಕು. ಮೆಣಸಿನಕಾಯಿ ಸಂಸ್ಕರಣಾ ಘಟಕ ಪ್ರಾರಂಭಿಸಬೇಕಿದೆ. ಕೃಷಿಗೆ ಸಂಬಂಧಿತ ಕೈಗಾರಿಕೆಗಳೂ ಬರಬೇಕಿದೆ. ಕ್ರೀಡಾಪಟುಗಳಿಗೆ ಸುಸಜ್ಜಿತ ಕ್ರೀಡಾಂಗಣ ಬೇಕು. ಹಳ್ಳಿಗಳ ರಸ್ತೆಗಳನ್ನು ಮಾಡಬೇಕಿದೆ. ಈ ಎಲ್ಲ ಸಮಸ್ಯೆ ಬಗೆಹರಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡುವುದು ಸುಲಭದ ಮಾತಲ್ಲ. ನೂತನ ಶಾಸಕ ಎಂ.ಆರ್‌.ಪಾಟೀಲ ಯಾವ ರೀತಿ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

ರಾಜ್ಯದಲ್ಲಿ ಲೂಟಿ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ: ಪ್ರಿಯಾಂಕಾ ಗಾಂಧಿ

ಕ್ಷೇತ್ರದಲ್ಲಿ ಸಾಕಷ್ಟುಸಮಸ್ಯೆಗಳಿವೆ. ನೂತನ ಶಾಸಕ ಎಂ.ಆರ್‌. ಪಾಟೀಲರು ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ, ಆದ್ಯತೆ ಮೇರೆಗೆ ಕೆಲಸ ಕೈಗೊಂಡು ಮಾದರಿ ಕ್ಷೇತ್ರವನ್ನಾಗಿಸಬೇಕು.

-ಶಂಕರಗೌಡ ದೊಡ್ಡಮನಿ, ರೈತ ಸಂಘದ ಮುಖಂಡ

Latest Videos
Follow Us:
Download App:
  • android
  • ios