Asianet Suvarna News Asianet Suvarna News

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಪೂರ್ಣ ಬಹುಮತ ಸಿಗುವುದು ಖಚಿತ: ಡಾ.ಅಶ್ವತ್ಥ ನಾರಾಯಣ್

ದೇಶದ ಜನತೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಆಪೇಕ್ಷೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಎನ್.ಡಿ.ಎ 400ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಮಾಜಿ ಸಚಿವ ಹಾಗೂ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಡಾ. ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು. 

NDA is sure to get full majority in Lok Sabha Election Says Dr CN Ashwath Narayan gvd
Author
First Published Feb 16, 2024, 10:23 PM IST

ಮೈಸೂರು (ಫೆ.16): ದೇಶದ ಜನತೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಆಪೇಕ್ಷೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಎನ್.ಡಿ.ಎ 400ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಮಾಜಿ ಸಚಿವ ಹಾಗೂ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಡಾ. ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಕಚೇರಿಯಲ್ಲಿ ಮೈಸೂರು-ಕೊಡಗು ಲೋಕಸಭಾ ಚುನಾವಣಾ ಕಾರ್ಯಲಯ ಉದ್ಘಾಟಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರು ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. 

ಮೋದಿ ಅವರು ಮೂರನೇ ಬಾರಿಗೆ ದೇಶದ ಪ್ರಧಾನಿ ಆಗಬೇಕು ಎಂಬುದು ಜನರ ಆಕಾಂಕ್ಷೆಯಾಗಿದೆ.  ಮೋದಿ ಅವರು ಕಳೆದ 10 ವರ್ಷಗಳ ಅವಧಿಯಲ್ಲಿ ಸ್ವಚ್ಛ ಮತ್ತು ಕಳಂಕ ರಹಿತ ಆಡಳಿತ ನೀಡಿದ್ದಾರೆ. ವಿಕಸಿತ ಭಾರತ ನಿರ್ಮಾಣಕ್ಕೆ ಅವರು ಶ್ರಮಿಸುತ್ತಿದ್ದಾರೆ ಎಂದರು. ಸಮಾಜದ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಯೋಜನೆಯನ್ನು ಅವರು ನೀಡಿದ್ದಾರೆ. ಬಡವರು, ಮಹಿಳೆಯರು, ಯುವಕರು, ಮಧ್ಯಮ ವರ್ಗದವರು ಸೇರಿ ಎಲ್ಲರಿಗಾಗಿ ಯೋಜನೆ ಜಾರಿಗೊಳಿಸಿದ್ದಾರೆ. ಮೋದಿ ಅವರ ಆಡಳಿತವನ್ನು ದೇಶದ ಜನರು ಮೆಚ್ಚಿದ್ದಾರೆ. 

ಗ್ರಾಪಂ ಮಟ್ಟದಲ್ಲೇ ಸಿಗುತ್ತೆ ವಿವಾಹ ನೋಂದಣಿ ಸರ್ಟಿಫಿಕೇಟ್: ಸಚಿವ ಕೃಷ್ಣ ಬೈರೇಗೌಡ

ಹಾಗಾಗಿ ದೇಶದ ಜನರು ಮೂರನೇ ಬಾರಿಗೂ ಮೋದಿ ಪ್ರಧಾನಿ ಆಗಬೇಕು ಎಂದು ಇಚ್ಛಿಸಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರದ ಯೋಜನೆಯನ್ನು ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಜಿಲ್ಲೆಯಲ್ಲಿ ಅನುಭವಿಗಳಿದ್ದಾರೆ. ಇಲ್ಲಿನ ಬಿಜೆಪಿ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮೈಸೂರಿನ ಎಲ್ಲಾ ಕ್ಷೇತ್ರದಲ್ಲೂ ಮತ್ತೊಮ್ಮೆ ನಮ್ಮ ಅಭ್ಯರ್ಥಿ ಆಯ್ಕೆ ಆಗಬೇಕು. ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆಯಬೇಕು. ರಾಮಮಂದಿರದ ಶಿಲ್ಪಿ ಕಲ್ಲು ಮೈಸೂರಿನದ್ದೇ. ಮೈಸೂರು ಅಂದರೆ ಇಡೀ ವಿಶ್ವದ ಗಮನ ಸೆಳೆಯುತ್ತಿದೆ ಎಂದು ಅವರು ತಿಳಿಸಿದರು. 

ಪಕ್ಷದವರು ಎಲ್ಲಾ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಒಂದು ಕುಟುಂಬ ಸದಸ್ಯರೆಲ್ಲಾ ತಮ್ಮ ಅಭಿಪ್ರಾಯ ಹೇಳಿದರೂ, ಒಗ್ಗಟ್ಟಿನ ಕೆಲಸ ಮಾಡಬೇಕು. ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಎಲ್ಲಾ ವರ್ಗದವರನ್ನು ಮೇಲೆತ್ತಲು ಪ್ರಧಾನಿ ನರೇಂದ್ರಮೋದಿ ಅವರು ಅನೇಕ ಯೋಜನೆ ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದು ಹಾಕಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದೆ. ಸುಜಲ ಧಾರಾ ಯೋಜನೆಯಡಿ ಮನೆ, ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುತ್ತಿದೆ. ಕೇಂದ್ರ ಸರ್ಕಾರ ನುಡಿದಂತೆ ನಡೆದಿದೆ ಎಂದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೊಡಗಿನಿಂದ ಬಿಜೆಪಿ ಅಭ್ಯರ್ಥಿಗೆ ಒಂದು ಲಕ್ಷ ಮತಗಳ ಲೀಡ್ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಲೂಟಿ ಜಾತ್ರೆ: ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ಸಹ ಪ್ರಭಾರಿ ರಾಬೀನ್ ದೇವಯ್ಯ, ಮಾಜಿ ಸಚಿವರಾದ ಎಸ್.ಎ, ರಾಮದಾಸ್, ಸಿ.ಎಚ್. ವಿಜಯಶಂಕರ್, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಕೊಡಗು ಬಿಜೆಪಿ ಅಧ್ಯಕ್ಷ ರವಿಕಾಳಪ್ಪ, ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯಾಧ್ಯಕ್ಷ ಅನಿಲ್ ಥಾಮಸ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ ಮಹೇಶ್, ಎಚ್.ಜಿ. ಗಿರಿಧರ್, ರಘು, ಗ್ರಾಮಂತರ ಪ್ರಧಾನ ಕಾರ್ಯದರ್ಶಿಗಳಾದ ಬಾಲಕೃಷ್ಣ, ಮಹೇಶ್, ಜಯರಾಮೇಗೌಡ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಮುಖಂಡರಾದ ಎಸ್. ಜಯಪ್ರಕಾಶ್, ಸಂದೇಶ್ ಸ್ವಾಮಿ, ಕವೀಶ್ ಗೌಡ, ಮಾಜಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಮೊದಲಾದವರು ಇದ್ದರು.

Follow Us:
Download App:
  • android
  • ios