ಮಂಗಳೂರು (ಮೇ.31):  ‘ಯಡಿಯೂರಪ್ಪ ಬಳಿಕ ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಕೊರತೆಯಿದೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ನಿಜವಾಗಿಯೂ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇರುವುದೇ ಹೊರತು ಬಿಜೆಪಿಯಲ್ಲಿ ಅಲ್ಲ. ಹಾಗಾಗಿಯೇ ಸಿದ್ದರಾಮಯ್ಯ ಸಮರ್ಥ ನಾಯಕ ಅಲ್ಲ ಎನ್ನುವುದನ್ನು ಅರಿತ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಎಂದಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮೊದಲು ತಮ್ಮ ಪಕ್ಷದ ಸ್ಥಿತಿಗತಿಗಳ ಬಗ್ಗೆ ನೋಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರಲ್ಲದೆ, ಕಾಂಗ್ರೆಸ್‌ನವರಿಗೆ ಸದ್ಯ ಬೇರೆ ಏನೂ ಕೆಲಸವಿಲ್ಲ. ಪ್ರತಿಪಕ್ಷವಾಗಿಯೂ ಸರಿಯಾಗಿ ಕೆಲಸ ಮಾಡದೆ ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಿದೆ ಎಂದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಿಷ್ಟು .

ಬಿಜೆಪಿ ಸಮರ್ಥ ರಾಜಕೀಯ ಪಕ್ಷ. ನಾಯಕತ್ವದ ಕೊರತೆ ಎದುರಾಗಲು ಸಾಧ್ಯವೇ ಇಲ್ಲ. ಅದರಲ್ಲೂ ನಾಯಕತ್ವದ ಪಾಠವನ್ನು ಕಾಂಗ್ರೆಸ್‌ನಿಂದ ಕಲಿಯಬೇಕಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು 40-45 ವರ್ಷಗಳ ಸುದೀರ್ಘ ಹೋರಾಟ ಮಾಡಿ ಪಕ್ಷವನ್ನು ಬೆಳೆಸಿದ ಕಾರಣದಿಂದಾಗಿಯೇ ಇಂದು ಎತ್ತರದ ಸ್ಥಾನಕ್ಕೆ ಬಂದಿದ್ದಾರೆ. ಕಾಂಗ್ರೆಸ್‌ ನಾಯಕರಂತೆ ಪಕ್ಷಾಂತರ ಮಾಡಿಯೋ ಅಥವಾ ಯಾರದ್ದೋ ಕಾಲು ಹಿಡಿದೋ ಸಿಎಂ ಆದವರಲ್ಲ ಎಂದು ನಳಿನ್‌ ಟೀಕಿಸಿದರು.

ಸಿದ್ದರಾಮಯ್ಯ ಅವರು ಮಾತನಾಡುವ ಮೊದಲು ಅವರು ಎಲ್ಲಿದ್ದರು, ಅವರ ಗುರುಗಳು ಯಾರು ಎಂಬುದನ್ನು ಯೋಚನೆ ಮಾಡಬೇಕು. ಕಾಂಗ್ರೆಸ್‌ಗೆ ಬರುವ ಮುನ್ನ ಕಾಂಗ್ರೆಸ್‌ಗೆ ಅವರು ಯಾವ ರೀತಿ ಬೈಯ್ಯುತ್ತಿದ್ದರು? ಬಳಿಕ ಅದೇ ಅದೇ ಕಾಂಗ್ರೆಸ್‌ಗೆ ಬಂದು ಮುಖ್ಯಮಂತ್ರಿಯಾಗಿದ್ದರು ಎಂದು ತಿರುಗೇಟು ನೀಡಿದರು.