ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ನಳಿನ್ ಕುಮಾರ್ ಕಟೀಲ್ ಹೇಳಿದ್ದಿಷ್ಟು
* ಸರ್ಕಾರದಲ್ಲಿ ನೂರಕ್ಕೆ ನೂರರಷ್ಟು ವಿಜಯೇಂದ್ರ ಹಸ್ತಕ್ಷೇಪ ಮಾಡಿಲ್ಲ
* ನಮ್ಮ ಸರ್ಕಾರ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ
* ಬಿಜೆಪಿ ಶಾಸಕರಿಗೆ ನಳಿನ್ ಕುಮಾರ್ ಕಟೀಲ್ ಖಡಕ್ ವಾರ್ನ್
ಬೆಂಗಳೂರು(ಮೇ.28): ಕೋವಿಡ್ ಕರ್ನಾಟಕ, ದೇಶಕ್ಕೆ ಮಾತ್ರ ಬಂದಿರೋದು ಅಲ್ಲ. ಪ್ರಪಂಚದಲ್ಲಿಯೇ ಬಂದಿದೆ. ಈಗ ಆತ್ಮವಿಶ್ವಾಸ ಕಳೆದುಕೊಳ್ಳಬೇಕಿಲ್ಲ. ಗುಣಮುಖರಾದವರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಕರ್ನಾಟಕದಲ್ಲಿ ಎರಡನೇ ಅಲೆ ಆರಂಭದಲ್ಲಿ ಸಮಸ್ಯೆ ಇತ್ತು. ಈಗ ಸಮಸ್ಯೆಗಳು ಸರಿಯಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇಂದು(ಶುಕ್ರವಾರ) ನಗರದ ಯಶವಂತಪುರದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂಪಾಯಿ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರು ಅಹರ್ನಿಶಿಯಾಗಿ ಶ್ರಮಿಸುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಸಚಿವ ಸೋಮಶೇಖರ್ ಅತ್ಯುತ್ತಮ ಸಚಿವರಾಗಿದ್ದಾರೆ. ಮೈಸೂರಿನಲ್ಲಿ ಉತ್ತಮ ರೀತಿ ಯಾಗಿ ಕರ್ತವ್ಯ ನಿರ್ವಹಿಸಿ, ಕೊವೀಡ್ ನಿಯಂತ್ರಣ ಮಾಡಲು ಶ್ರಮ ಪಟ್ಟಿದ್ದಾರೆ. ಹೀಗಾಗಿ ಇವರು ಮೈಸೂರು ಜಿಲ್ಲೆ ಹಾಗೂ ರಾಜ್ಯದಲ್ಲಿ ಅತ್ಯುತ್ತಮ ಸಚಿವರಾಗಿದ್ದಾರೆ ಎಂದು ಸೋಮಶೇಖರ್ ಕೆಲಸಕ್ಕೆ ನಳಿನ್ ಕುಮಾರ್ ಕಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 24 ಗಂಟೆಗಳ ಪರಿಶ್ರಮದ ಕೆಲಸ ಮಾಡುತ್ತಿದ್ದಾರೆ. ಸಚಿವರ ಟೀಂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜನರ ಜೊತೆ ನಾನು ಇದ್ದೇನೆ ಅಂತಾ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ ಮಾಡಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಿಂದೆ ಕರ್ನಾಟಕದಲ್ಲಿ ಮಾಸ್ ಲೀಡರ್ ಮುಖ್ಯಮಂತ್ರಿಗಳನ್ನು ಬದಲಿಸಿದಾಗ ಏನಾಗಿತ್ತು?
ನಾಯಕತ್ವ ಬದಲಾವಣೆಯಿಲ್ಲ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪ್ರತಿಕ್ರೆಯೆ ನೀಡಿದ ನಳಿನ್ ಕುಮಾರ್ ಕಟೀಲ್, ನಾಯಕತ್ವ ಬದಲಾವಣೆಯಿಲ್ಲ. ಈ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ, ಯಾವುದೇ ಬದಲಾವಣೆ ಆಗೋದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದಗಿನಿಂದ ಬದಲಾವಣೆ ಬಗ್ಗೆ ಚರ್ಚೆ ಆರಂಭವಾಗಿದೆ. ಆದ್ರೆ ಯಡಿಯೂರಪ್ಪ ಅವರೇ ನಮ್ಮ ನಾಯಕರು. ಮುಂದಿನ ಎರಡು ವರ್ಷ ಅವರೇ ಸಿಎಂ ಆಗಿ ಇರ್ತಾರೆ. ಸದ್ಯಕ್ಕೆ ಶಾಸಕಾಂಗ ಪಕ್ಷದ ಸಭೆ ಇಲ್ಲ. ಕೋವಿಡ್ ಮುಗಿಯುವ ತನಕ ಯಾವುದೇ ಸಭೆಗಳನ್ನ ನಡೆಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಸಿ.ಪಿ. ಯೋಗೇಶ್ವರ್ ಜವಾಬ್ದಾರಿಯುತ ಸ್ಥಾನದಲ್ಲಿ ಇರೋರು ಅವರ ಹೇಳಿಕೆಗಳನ್ನ ಇವತ್ತು ಗಮನಿಸುತ್ತೇನೆ. ಯೋಗೇಶ್ವರ್ ಅವರಿಂದಲೇ ವಿವರಣೆ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಈಗ ಕೋವಿಡ್ ಕೆಲಸ ಮಾತ್ರ. ಬೇರೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಶಾಸಕರಿಗೆ ಈ ಹಿಂದೆಯೇ ಸೂಚಿಸಿದ್ದೆ, ಈಗಲೂ ಅದೇ ಸೂಚನೆ ಕೊಡುತ್ತಿದ್ದೇನೆ. ಈಗ ಕೋವಿಡ್ ಕೆಲಸ ಮಾಡಬ್ಬೇಕು, ಬೇರೆ ರಾಜಕೀಯ ಚಟುವಟಿಕೆ ಮಾಡಬಾರದು ಎಂದು ಎಲ್ಲ ಬಿಜೆಪಿ ಶಾಸಕರಿಗೆ ಕಟೀಲ್ ಖಡಕ್ ವಾರ್ನ್ ಮಾಡಿದ್ದಾರೆ.
ಯೋಗೇಶ್ವರ್‌ಗೆ ಟಾಂಗ್ ಕೊಟ್ಟ ಸೋಮಶೇಖರ್
ಶುದ್ಧ ಸರ್ಕಾರ ಇಲ್ಲ ಎಂಬ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಸೋಮಶೇಖರ್, ಯಾರು ಮೂರು ಪಕ್ಷಗಳನ್ನು ಬದಲಾವಣೆ ಮಾಡಿರ್ತಾರೋ ಅವರು ಮಾತ್ರ ಈ ರೀತಿ ಹೇಳೋಕೆ ಸಾಧ್ಯ. ನಮ್ಮ ಸರ್ಕಾರ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಿ.ಪಿ. ಯೋಗೇಶ್ವರ್ ಒಬ್ಬ ಮಂತ್ರಿಯಾಗಿ ಈ ರೀತಿ ಹೇಳೋದು ಸರಿಯಲ್ಲ ಎಂದು ಹೇಳುವ ಯೋಗೇಶ್ವರ್‌ಗೆ ಟಾಂಗ್ ಕೊಟ್ಟಿದ್ದಾರೆ.
ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸೋಮಶೇಖರ್, ನೂರಕ್ಕೆ ನೂರರಷ್ಟು ವಿಜಯೇಂದ್ರ ಹಸ್ತಕ್ಷೇಪ ಮಾಡಿಲ್ಲ. ಇದುವರೆಗೂ ನನ್ನ ಇಲಾಖೆಗೆ ಅವರು ಹಸ್ತಕ್ಷೇಪ ಮಾಡಿರುವ ನಿದರ್ಶನ ಇಲ್ಲ. ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಅದು ಬಿಟ್ಟು ಸರ್ಕಾರದ ಆಡಳಿತಕ್ಕೆ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳುವ ಮೂಲಕ ಬಿ.ವೈ. ವಿಜಯೇಂದ್ರ ಪರ ಸೋಮಶೇಖರ್ ಬ್ಯಾಟಿಂಗ್ ಬೀಸಿದ್ದಾರೆ.