Asianet Suvarna News Asianet Suvarna News

MLC Election: ಕಟೀಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಸಲೀಂ ಅಹ್ಮದ್‌

*  ಕಟೀಲ್‌ ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿಯಿಂದ ಮಾತನಾಡಬೇಕು
*  ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಾರಕ
*  ಅಕಾಲಿಕ ಮಳೆ ಬಂದು ಹಾನಿಗೀಡಾದರೂ ಸ್ಪಂದಿಸದ ಬಿಜೆಪಿ ಸರ್ಕಾರ 
 

Nalin Kumar Kateel Lost Mental Balance Says Saleem Ahmed grg
Author
Bengaluru, First Published Nov 29, 2021, 2:06 PM IST

ಹಾವೇರಿ(ನ.29):  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮಾಜಿ ಪ್ರಧಾನಿಗಳ ಬಗ್ಗೆ ಕೀಳು ಹೇಳಿಕೆ ನೀಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಪರಿಷತ್‌ ಚುನಾವಣೆಯ(Vidhan Parishat Election) ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ತಿರುಗೇಟು ನೀಡಿದ್ದಾರೆ. 

ಗುಂಡಿನಿಂದ ಬಾಂಬ್‌ವರೆಗೆ ಬಂದಿದ್ದು ಕಾಂಗ್ರೆಸ್‌(Congress) ಸಾಧನೆ ಎಂಬ ಕಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂದಿರಾ ಗಾಂಧಿಯವರು 16 ವರ್ಷ ರಾಷ್ಟ್ರವನ್ನು ಆಳಿದ್ದಾರೆ. ಅವರನ್ನು ಉಕ್ಕಿನ ಮಹಿಳೆ ಎಂದೇ ಕರೆಯುತ್ತಾರೆ. ವಾಜಪೇಯಿ ಅವರು ಇಂದಿರಾರನ್ನು ದುರ್ಗೆ ಎಂದು ಹೇಳಿದ್ದರು. ರಾಜೀವ ಗಾಂಧಿ ಅವರು ದೇಶದ ಏಕತೆಗಾಗಿ ಪ್ರಾಣ ಬಿಟ್ಟಿದ್ದಾರೆ. ಕಟೀಲ ಅವರ ಕೀಳುಭಾಷೆಯನ್ನು ಖಂಡಿಸುತ್ತೇನೆ. ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿಯಿಂದ ಮಾತನಾಡಬೇಕು. ಇಲ್ಲದಿದ್ದರೆ ಜನರು ಅವರನ್ನು ನೋಡಿ ನಗುತ್ತಾರೆ ಎಂದು ತಿರುಗೇಟು ನೀಡಿದರು.

ಈಗಾಗಲೇ ಧಾರವಾಡ(Dharwad) ಸ್ಥಳೀಯ ಸಂಸ್ಥೆ ಕ್ಷೇತ್ರದ ಮೂರೂ ಜಿಲ್ಲೆಗಳಲ್ಲಿ ಪ್ರಚಾರ(Campaign) ನಡೆಸುತ್ತಿದ್ದೇನೆ. ಪಂಚಾಯಿತಿ ವ್ಯವಸ್ಥೆ ಗಟ್ಟಿಗೊಳಿಸಲು, ಸರ್ಕಾರದ ವೈಫಲ್ಯಗಳನ್ನು ಹೇಳಿ ಮತ ಕೇಳುತ್ತೇನೆ. ಪಂಚಾಯಿತಿ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಬಿಜೆಪಿ(BJP) ಸರ್ಕಾರದ ಅವಧಿಯಲ್ಲಿ ಒಂದೂ ಮನೆ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ 15 ಸಾವಿರ ಮನೆ ಕೊಟ್ಟಿದ್ದೇವೆ. 8 ತಿಂಗಳಿಂದ ಗ್ರಾಪಂ ಅಧಿಕಾರಿಗಳಿಗೂ ಸಂಬಳ ಬಿಡುಗಡೆಯಾಗಿಲ್ಲ ಎಂಬ ಮಾಹಿತಿಯಿದೆ. ಸದಸ್ಯರ ಗೌರವಧನವೂ ಬಿಡುಗಡೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ. ತಾಲೂಕು ಮಟ್ಟದಲ್ಲಿ ಉಚಿತ ಬಸ್‌ಪಾಸ್‌, ಉಚಿತ ಮೆಡಿಕಲ್‌ ವ್ಯವಸ್ಥೆ ಮಾಡುವ ಭರವಸೆ ನೀಡುತ್ತಿದ್ದೇನೆ. ಜತೆಗೆ, ಸರ್ಕಾರದ ನ್ಯೂನತೆಯನ್ನು ತಿಳಿಸುವ ಕೆಲಸ ಮಾಡುತ್ತೇನೆ. ಬಿಜೆಪಿ ಸರ್ಕಾರ ಚುನಾವಣೆ ನಡೆಸುವಲ್ಲಿ ಪಲಾಯನವಾದ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. 

Karnataka Politics: ಬಿಜೆಪಿಯಲ್ಲಿ ಶಿಸ್ತಿದ್ದರೆ ತೋರಿಸಲಿ: ಡಿ.ಕೆ.ಶಿವಕುಮಾರ

ಜಿಪಂ, ತಾಪಂ ಚುನಾವಣೆ ಮಾಡಲು ಸರ್ಕಾರಕ್ಕೆ ಮನಸ್ಸಿಲ್ಲ. ಹಾನಗಲ್ಲ ಉಪಚುನಾವಣೆ(Hanagal Byelection) ರೀತಿಯಲ್ಲೇ ಈ ಚುನಾವಣೆ ಮೂಲಕ ಸಂದೇಶ ಕೊಡುತ್ತೇವೆ. ಈ ಸರ್ಕಾರದ ಭ್ರಷ್ಟಾಚಾರ(Corruption), ವೈಫಲ್ಯ ತೋರಿಸಿ ಮತ ಯಾಚಿಸುತ್ತೇನೆ. ಈ ಕ್ಷೇತ್ರ ಪ್ರತಿನಿಧಿಸದಿದ್ದರೂ ಈ ಹಿಂದೆ ಎರಡು ಬಾರಿ ಪರಿಷತ್‌ ಸದಸ್ಯನಾಗಿದ್ದಾಗ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ. ಇದನ್ನು ಜನರು ಸ್ಮರಿಸುತ್ತಿದ್ದಾರೆ. ಆದ್ದರಿಂದ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಾರಕ

ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸಿಎಂ ಬದಲಾದರೂ ಭ್ರಷ್ಟಾಚಾರ ನಿಂತಿಲ್ಲ. ಅಕಾಲಿಕ ಮಳೆ ಬಂದು ಹಾನಿಗೀಡಾದರೂ ಸರ್ಕಾರ ಸ್ಪಂದಿಸಿಲ್ಲ. ಬಿಜೆಪಿ ಸರ್ಕಾರ(BJP Government) ರಾಜ್ಯಕ್ಕೆ ಮಾರಕವಾಗಿದ್ದು, ಹೀಗಾಗಿ ಸರ್ಕಾರ ಅಧಿಕಾರದಲ್ಲಿ ಇರಬಾರದು ಎಂದು ಸಲೀಂ ಅಹ್ಮದ್‌ ಹೇಳಿದರು.

ಬಿಜೆಪಿಯವರು ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ. ಬೆಲೆ ಏರಿಕೆ ಮಾಡಿ ಜನರ ಬದುಕು ಹೈರಾಣಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ(Narendra Modi) ನುಡಿದಂತೆ ನಡೆಯಲಿಲ್ಲ, 7 ವರ್ಷಗಳಿಂದಲೂ ಸುಳ್ಳು ಹೇಳುತ್ತಾ ಕಾಲಕಳೆಯುತ್ತಿದ್ದಾರೆ. ಗ್ರಾಪಂಗಳಿಗೆ ಅನುದಾನ ಕೊಟ್ಟಿಲ್ಲ, ಗ್ರಾಪಂ ಸದಸ್ಯರಿಗೆ ಗೌರವಧನವನ್ನೂ ಸಹ ಕೊಟ್ಟಿಲ್ಲ ಎಂದು ಟೀಕಿಸಿದರು.

ನಾನು ವಿಧಾನ ಪರಿಷತ್‌ ಸದಸ್ಯನಾಗಿದ್ದಾಗ ಜಿಲ್ಲೆಯನ್ನೇ ನೋಡಲ್‌ ಆಗಿಟ್ಟುಕೊಂಡು ಹೆಚ್ಚಿನ ಅನುದಾನ ಕೊಟ್ಟಿದ್ದೇನೆ. ಆದರೆ, ಎರಡು ಸಲ ಲೋಕಸಭೆ ಚುನಾವಣೆಯಲ್ಲಿ(Lok Sabha Election)ಸೋತಿದ್ದೇನೆ. ಈ ಸಲ ಪಕ್ಷದ ಕಾರ್ಯಕರ್ತರ, ಮುಖಂಡರ ಒತ್ತಾಸೆಯಂತೆ ಜಿಲ್ಲೆಗೆ ಪಕ್ಷ ಟಿಕೆಟ್‌ ಕೊಟ್ಟಿದೆ.

ಹಾವೇರಿ(Haveri) nಜಿಲ್ಲೆಯಲ್ಲಿ ಹೆಚ್ಚಿನ ಮತದಾರರಿದ್ದು, ಈ ಭಾಗದಲ್ಲಿ 25 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಈ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತ ಕೊಟ್ಟು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.ಮಾಜಿ ಸಚಿವ ಬಸವರಾಜ ಶಿವಣ್ಣನವರ(Shivaraj Sajjanar) ಮಾತನಾಡಿ, ಈ ಚುನಾವಣೆ ನಮಗೆ ಬಹಳ ಮುಖ್ಯವಾಗಿದ್ದು, ನಮ್ಮ ಪಕ್ಷದ ಮತಗಳನ್ನು ನಾವು ಮೊದಲು ಗಟ್ಟಿಮಾಡಿಕೊಂಡರೆ ಮೊದಲ ಸುತ್ತಿನಲ್ಲೇ  ಗೆಲವು ಸಾಧಿಸಲು ಅನುಕೂಲವಾಗಲಿದೆ. ಈ ಚುನಾವಣೆಯ ಗೆಲುವು ಮುಂಬರುವ ಜಿಪಂ, ತಾಪಂ ಹಾಗೂ ವಿಧಾನಸಭೆ ಚುನಾವಣೆಗೆ ಭದ್ರ ಬುನಾದಿಯಾಗಲಿದೆ ಎಂದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ(Rudrappa Lamani) ಮಾತನಾಡಿ, ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದ್ದೆವು. ಆದರೀಗ ಅವು ಕೆಲ ಹಳ್ಳಿಗಳಲ್ಲಿ ಬಂದ್‌ ಆಗಿದ್ದರೂ ಬಿಜೆಪಿ ಸರ್ಕಾರ ಅವುಗಳನ್ನು ದುರಸ್ತಿಗೊಳಿಸುತ್ತಿಲ್ಲ. ಬಿಜೆಪಿಯವರ ಹಣೆಬರಹಕ್ಕೆ ಜಿಪಂ, ತಾಪಂ ಚುನಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾನಗಲ್ಲ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದ ಬಳಿಕ ನಮಗೆ ಬಲದಂತಾಗಿದೆ. ಈ ಚುನಾವಣೆಯಲ್ಲೂ ಸಲೀಂ ಅಹ್ಮದ್‌ ಅವರನ್ನು ಮೊದಲ ಸುತ್ತಿನಲ್ಲೇ ಗೆಲ್ಲಿಸಲು ಶ್ರಮಿಸೋಣ ಎಂದರು.

Council Election Karnataka : ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತವೆಂಬ ವಿಶ್ವಾಸ

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸ್ಥಳೀಯ ಸಂಸ್ಥೆಗಳನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರ ವಿಕೇಂದ್ರಿಕರಣದ ಮೂಲಕ ಸ್ಥಳೀಯ ಸರ್ಕಾರವನ್ನಾಗಿ ಮಾಡಿದೆ. ಆದರೆ, ಪ್ರಸ್ತುತ ಸರ್ಕಾರ ಅಧಿಕಾರಿಗಳು ಹಾಗೂ ಶಾಸಕರ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಹತ್ತಿಕ್ಕಲು ಮುಂದಾಗಿದೆ ಎಂದು ದೂರಿದರು.

ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ಗ್ರಾಪಂ ಅಧ್ಯಕ್ಷರಿಗೆ ಸಹಿ ಹಾಕುವ ಅಧಿಕಾರ ಹಾಗೂ ನರೇಗಾ ಯೋಜನೆಯನ್ನು ನೀಡಿದ್ದು ಕಾಂಗ್ರೆಸ್‌ ಸರ್ಕಾರ. ಪ್ರತಿ ಗ್ರಾಮಕ್ಕೂ ಶುದ್ಧ ಕುಡಿಯುವ ನೀರಿನ ಘಟಕ, ಪ್ರತಿ ಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೆವು. ಆದರೀಗ ಜಿಲ್ಲೆಯಲ್ಲಿ ಮೊದಲು ಪರ್ಸೆಂಟೇಜ್‌ ಕೊಡದಿದ್ದರೆ ಕಾಮಗಾರಿಯ ಭೂಮಿ ಪೂಜೆ ಮಾಡುತ್ತಿಲ್ಲ, ಹೀಗಾಗಿ ಗುತ್ತಿಗೆದಾರರು ಟೆಂಡರ್‌ ಹಾಕಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಪರಿಷತ್‌ ಸದಸ್ಯ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಆರ್‌.ಎಂ. ಕುಬೇರಪ್ಪ, ಡಾ. ಸಂಜಯ ಡಾಂಗೆ, ಡಿ. ಬಸವರಾಜ, ಪ್ರೇಮಾ ಪಾಟೀಲ, ಈರಪ್ಪ ಲಮಾಣಿ, ಶ್ರೀನಿವಾಸ ಹಳ್ಳಳ್ಳಿ, ಎಂ.ಎಂ. ಮೈದೂರ ಇತರರು ಇದ್ದರು.
 

Follow Us:
Download App:
  • android
  • ios