ಸಾರ್ವಜನಿಕರ ಅನುಕೂಲ ಮತ್ತು ರಾಷ್ಟ್ರೀಯ ಹೆದ್ದಾರಿಯ ವಾಹನಗಳ ಸುಗಮ ಸಂಚಾರಕ್ಕಾಗಿ ರಸ್ತೆ ಅಗಲೀಕರಣದ ಜೊತೆಗೆ ಚರಂಡಿ ಮತ್ತು ರಸ್ತೆ ವಿಭಜಕಕ್ಕೆ ವಿದ್ಯುತ್ ದೀಪ ಅಳವಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಾಗಮಂಗಲ (ಡಿ.01): ಸಾರ್ವಜನಿಕರ ಅನುಕೂಲ ಮತ್ತು ರಾಷ್ಟ್ರೀಯ ಹೆದ್ದಾರಿಯ ವಾಹನಗಳ ಸುಗಮ ಸಂಚಾರಕ್ಕಾಗಿ ರಸ್ತೆ ಅಗಲೀಕರಣದ ಜೊತೆಗೆ ಚರಂಡಿ ಮತ್ತು ರಸ್ತೆ ವಿಭಜಕಕ್ಕೆ ವಿದ್ಯುತ್ ದೀಪ ಅಳವಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ಬೆಳ್ಳೂರು ಕ್ರಾಸ್‌ನಿಂದ ಹೊಸಮನೆ ಗೇಟ್ ವರೆಗೆ 2 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮುಂದಿನ 50 ವರ್ಷಗಳ ದೂರದೃಷ್ಟಿಯಿಂದ ಬೆಳ್ಳೂರು ಕ್ರಾಸ್‌ನ ರಸ್ತೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಅಂಗಡಿ ಮುಂಗಟ್ಟುಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೆ ತೆರವುಗೊಳಿಸಿ ರಸ್ತೆ ಅಗಲೀಕರಣಗೊಳಿಸಲಾಗುವುದು. ಸ್ಥಳೀಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬೆಳ್ಳೂರು ಕ್ರಾಸ್ ಜಂಕ್ಷನ್ ಬಳಿ ದೊಡ್ಡದಾದ ಸರ್ಕಲ್ ಮಾಡಿ ಬೆಳ್ಳೂರು ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಜೋಡಿ ರಸ್ತೆ ಮತ್ತು ಚರಂಡಿ ಹಾಗೂ ನಾಗಮಂಗಲ ರಸ್ತೆಯ 400 ಮೀಟರ್ ದೂರದವರೆಗೆ ಜೋಡಿರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಹೊಸಮನೆ ಗೇಟ್‌ವರೆಗೆ ಮರು ಡಾಂಬರೀಕರಣ ಮಾಡಲಾಗುವುದು ಎಂದರು. ಈ ಕೆಲಸಕ್ಕೆ ಯಾರೇ ವಿರೋಧ ವ್ಯಕ್ತಪಡಿಸಿ ನನ್ನನ್ನು ಬೈದುಕೊಂಡರೂ ಲೆಕ್ಕಿಸುವುದಿಲ್ಲ. ರಸ್ತೆಗೆ ಸೇರಿದ ಜಾಗವನ್ನು ಅಳತೆ ಮಾಡಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿ ಮುಂಗಟ್ಟುಗಳನ್ನು ಶೀಘ್ರದಲ್ಲಿ ತೆರವುಗೊಳಿಸುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾದರಿ ಗ್ರಾಮ ಅಭಿವೃದ್ಧಿಗೆ ಶಂಕುಸ್ಥಾಪನೆ

ತಾಲೂಕಿನ ಎ.ನಾಗತಿಹಳ್ಳಿಯೂ ಮಾದರಿ ಗ್ರಾಮಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮ ಪರಿಮಿತಿಯೊಳಗೆ ಕಾಂಕ್ರೀಟ್ ರಸ್ತೆ, ಚರಂಡಿ ಮತ್ತು ವಿದ್ಯುತ್ ಸಂಬಂಧಿತ ಕಾಮಗಾರಿಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿ, ಎ.ನಾಗತಿಹಳ್ಳಿ ಸೇರಿದಂತೆ ತಾಲೂಕಿನ ಒಟ್ಟು 10 ಹಳ್ಳಿಗಳು ಮಾದರಿ ಗ್ರಾಮಕ್ಕೆ ಆಯ್ಕೆಯಾಗಿವೆ. 50 ಲಕ್ಷ ರು. ವೆಚ್ಚದಲ್ಲಿ ಗ್ರಾಮ ಪರಿಮಿತಿಯೊಳಗೆ ಶಿಥಿಲಗೊಂಡಿರುವ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಬದಲಿಸಲಾಗುವುದು. ಇದಲ್ಲದೆ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗುವುದು ಎಂದರು.

ನಂತರ ಬೆಳ್ಳೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವರು, ತಾಲೂಕಿನ ಕರಿಜೀರಹಳ್ಳಿಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಈ ವೇಳೆ ಟಿಎಪಿಸಿಎಂಎಸ್ ನಿರ್ದೇಶಕ ಎನ್.ಟಿ.ಕೃಷ್ಣಮೂರ್ತಿ, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಎಸ್.ಬಿ.ಸತೀಶ್, ಲೋಕೋಪಯೋಗಿ ಇಲಾಖೆ ಮೈಸೂರು ವಿಭಾಗದ ಅಧಿಕ್ಷಕ ಅಭಿಯಂತರ ಕೇಶವಪ್ರಸಾದ್, ಎಇಇ ಲಿಂಗರಾಜು, ಎಇ ಇಮ್ರಾನ್, ಅಭಿಷೇಕ್, ಸಿಡಿಪಿಒ ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಬೆಳ್ಳೂರು ಪಪಂ ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮ, ಮುಖಂಡರಾದ ಸುರೇಂದ್ರ, ದೊರೆಸ್ವಾಮಿ, ಮಹಮ್ಮದ್ ಯಾಸೀನ್, ಶಿವಣ್ಣ, ವೆಂಕಟೇಶ್ ಸೇರಿದಂತೆ ಹಲವರು ಇದ್ದರು.