ಮೈಸೂರು ಪಾಕ್‌ಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮೈಸೂರು ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಮೈಸೂರು (ಮೇ.28): ಮೈಸೂರು ಪಾಕ್‌ಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮೈಸೂರು ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಮೈಸೂರು ಪಾಕ್ ಹೆಸರು ಬದಲಾವಣೆ ಚರ್ಚೆ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಅವರು, ಪಾಕ ಎನ್ನುವುದು ಸಂಸ್ಕೃತ ಪದ. ಪಾಕ ಎಂದರೆ ಸಿಹಿ ಎಂದರ್ಥ ಬರುತ್ತದೆ. ಸಿಹಿ ತಿನಿಸುಗಳಲ್ಲಿ ಪಾಕ್ ಎಂಬ ಪದ ಬದಲಾಯಿಸುವುದು ಸರಿಯಲ್ಲ. ಮೈಸೂರು ಪಾಕ್‌ಗೆ ಎಷ್ಟೋ ವರ್ಷಗಳ ಇತಿಹಾಸವಿದೆ. ಅದೇ ರೀತಿ ಮಾಡುತ್ತಾ ಹೋದರೆ ಎಷ್ಟೋ ಹೆಸರುಗಳನ್ನು ಬದಲಾಯಿಸಬೇಕಾಗುತ್ತದೆ. ಅದೆಲ್ಲ ಈಗ ಅಪ್ರಸ್ತುತ ಎಂದರು.

ಸೋಪ್‌ಗೆ ರಾಯಭಾರಿ ಆಗಲ್ಲ: ಮೈಸೂರು ಸ್ಯಾಂಡಲ್ ಸೋಪಿನ ಜಾಹೀರಾತಿಗೆ ನಾನು ರಾಯಭಾರಿ ಆಗಲ್ಲ. ಅದರ ಬಗ್ಗೆ ನನಗೆ ಆಸಕ್ತಿಯೂ ಇಲ್ಲ. ನಾನು ಜನಸೇವೆ ಕ್ಷೇತ್ರದಲ್ಲಿದ್ದು, ನನ್ನ ಕೆಲಸವೇ ಬೇಕಾದಷ್ಟು ಇದೆ. ಮೈಸೂರು ಸ್ಯಾಂಡಲ್ ಸೋಪಿಗೆ ಅದರದೇ ಆದ ಐತಿಹ್ಯವಿದೆ. ಅದಕ್ಕೆ ದೇಶಾದ್ಯಂತ ತನ್ನದೇ ಆದ ಮಾರುಕಟ್ಟೆ ಇದೆ. ದೇಶದ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಕನ್ನಡದ ಕಲಾವಿದರಿಂದ ಜಾಹೀರಾತು ಕೊಡಿಸಲಿ. ಅನ್ಯ ಭಾಷಿಕ ಕಲಾವಿದರಿಗೆ ಹೆಚ್ಚು ಸಂಭಾವನೆ ಕೊಟ್ಟು ರಾಯಭಾರಿಯಾಗಿಸುವ ಅಗತ್ಯ ಇಲ್ಲ ಎಂದರು.

ನಲ್ಲಿ ನೀರು ಸರ್ಕಾರದ ಉದ್ದೇಶ: ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಯನ್ನು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗೆ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೂಚನೆ ನೀಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಪ್ರತೀ ಕುಟುಂಬಕ್ಕೂ ನಲ್ಲಿ ನೀರು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಇದರ ಗಂಭೀರತೆ ಅರ್ಥ ಮಾಡಿಕೊಂಡು ಬಾಕಿ ಇರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಲೋಕಸಭಾ ಸದಸ್ಯರು ನಿರ್ದೇಶನ ನೀಡಿದರು.

ಪ್ರತೀ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು: ಜಲಜೀವನ್ ಮಿಷನ್ ಯೋಜನೆಯು ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾಗಿದ್ದು, ಪ್ರತೀ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಜಲಜೀವನ್ ಮಿಷನ್ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಆಗಾಗ ಭೇಟಿ ನೀಡಿ ಸ್ಥಳ ಪರಿಶೀಲಿಸುವಂತಾಗಬೇಕು ಎಂದು ಸಂಸದರು ಸಲಹೆ ಮಾಡಿದರು. ಈ ಬಗ್ಗೆ ಗಮನಸೆಳೆದ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಚೆಂಬೆಬೆಳ್ಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಪೂರ್ಣಗೊಳಿಸಿ, ಶುದ್ಧ ಕುಡಿಯುವ ನೀರು ಒದಗಿಸುವಂತಾಗಬೇಕು. ಜೆಜೆಎಂ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಲಾಗಿದೆ. ಆದರೂ ಸಹ ಪರಿಪೂರ್ಣವಾಗಿ ಕಾಮಗಾರಿ ಆಗದಿರುವುದು ಬೇಸರ ತರಿಸಿದೆ ಎಂದರು.