ನನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ಹೊರತು, ಕೆಕೆಆರ್‌ಪಿ ಅಲ್ಲ: ಸೋಮಶೇಖರ ರೆಡ್ಡಿ
ಅಭಿವೃದ್ಧಿ ಕೆಲಸದ ಮೂಲಕ ಜನರ ಬಳಿಗೆ ಹೋಗುವೆ, ಆಮಿಷ ಒಡ್ಡಲ್ಲ: ಸೋಮಶೇಖರ ರೆಡ್ಡಿ
ಬಳ್ಳಾರಿ(ಮಾ.11): ಜನಾರ್ದನ ರೆಡ್ಡಿ ಸಂಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಕೆಆರ್‌ಪಿ) ಅಭ್ಯರ್ಥಿ ನನ್ನ ಎದುರಾಳಿಯಲ್ಲ. ನನಗೆ ನೇರ ಪ್ರತಿಸ್ಪರ್ಧಿ ಕಾಂಗ್ರೆಸ್ ಹೊರತು, ಕೆಕೆಆರ್‌ಪಿ ಅಲ್ಲ ಎಂದು ನಗರ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ ಸ್ಪಷ್ಟಪಡಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಕೆಆರ್‌ಪಿ ಅಭ್ಯರ್ಥಿ ನನಗೆ ಲೆಕ್ಕವೇ ಅಲ್ಲ; ಕಾಂಗ್ರೆಸ್ ನನ್ನ ನೇರ ಪ್ರತಿಸ್ಪರ್ಧಿಯಾಗಲಿದೆ. ಕೆಕೆಆರ್‌ಪಿ ಅಭ್ಯರ್ಥಿಯ ಚುನಾವಣೆ ಅಖಾಡದಿಂದ ನನಗೆ ಯಾವುದೇ ಪರಿಣಾಮವಾಗುವುದಿಲ್ಲ. ಬಿಜೆಪಿಗೆ ತನ್ನದೇ ಆದ ವೋಟ್‌ಬ್ಯಾಂಕ್ ಇದೆ. 2001ರಿಂದಲೂ ನಾನು ಬಳ್ಳಾರಿ ನಗರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾ ಬಂದಿರುವೆ. ಜನರ ಸಂಕಷ್ಟಗಳಿಗೆ ಸ್ಪಂದಿಸಿರುವೆ. ಸರ್ಕಾರದ ಯೋಜನೆಗಳು ಪರಿಣಾಮಕಾರಿ ಜಾರಿಗೆ ಶ್ರಮಿಸಿರುವೆ. ನನಗೆ ಗೆಲುವಿನ ಪೂರ್ಣ ವಿಶ್ವಾಸವಿದೆ. ಹೀಗಾಗಿ ನಾನು ಬೇರೆಯವರ ರೀತಿ ಕುಕ್ಕರ್, ಲಿಕ್ಕರ್, ಸೀರೆಗಳನ್ನು ಹಂಚಲು ಹೋಗುವುದಿಲ್ಲ. ಸರ್ಕಾರದಿಂದ ನಗರದ ಬಡಜನರಿಗೆ ಮನೆಗಳ ಪಟ್ಟಾವಿತರಣೆ ಮಾಡಿರುವೆ. ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವೆ. ನಾನು ಮಾಡಿರುವ ಕೆಲಸವನ್ನಿಟ್ಟುಕೊಂಡು ಜನರ ಬಳಿ ಹೋಗುತ್ತೇನೆಯೇ ಹೊರತು, ಮತದಾರರಿಗೆ ಆಮಿಷವೊಡ್ಡುವ ಕೆಲಸ ಮಾಡುವುದಿಲ್ಲ ಎಂದರು.
ಹೊಸಪೇಟೆಗೆ ಹೊಸ ಸಕ್ಕರೆ ಕಾರ್ಖಾನೆ ಸಿಹಿ: ಕಬ್ಬು ಬೆಳೆಗಾರರು ಫುಲ್ ಖುಷಿ
ಕೆಕೆಆರ್‌ಪಿಗೆ ಹೋಗೋದಿಲ್ಲ:
ಕೆಕೆಆರ್‌ಪಿಗೆ ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ. ಕೆಲವರು ತಮ್ಮದೇ ಆದ ಹಿತಾಸಕ್ತಿಗಳಿಗೆ ತೆರಳುತ್ತಿರಬಹುದು. ಪಕ್ಷದ ನಾಯಕರು ಯಾರೂ ಕೆಕೆಆರ್‌ಪಿಗೆ ಹೋಗಿಲ್ಲ. ಪಕ್ಷದ ಸಿದ್ಧಾಂತದಡಿ ಕೆಲಸ ಮಾಡುವವರು ಯಾವುದೇ ಕಾರಣಕ್ಕೆ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ಜನಾರ್ದನ ರೆಡ್ಡಿ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದೆವು. ಆದರೆ, ಅವರು ಸ್ವಂತ ಪಕ್ಷ ಸ್ಥಾಪಿಸುವ ನಿರ್ಧಾರ ಕೈಗೊಂಡರು. ನಾವು ಎಷ್ಟುಹೇಳಿದರೂ ಕೇಳಲಿಲ್ಲ. ಈಗ ನನ್ನ ವಿರುದ್ಧವೇ ಚುನಾವಣೆಗೆ ನಿಂತಿದ್ದಾರೆ ಎಂದರು.
ವ್ಯವಹಾರ ನನಗೆ ಗೊತ್ತಿಲ್ಲ:
ನನ್ನ ಸಹೋದರ ಜನಾರ್ದನ ರೆಡ್ಡಿಯ ಆರ್ಥಿಕ ವ್ಯವಹಾರದ ಬಗ್ಗೆ ನಿಜವಾಗಿಯೂ ಗೊತ್ತಿಲ್ಲ. ಎದುರು ಕಂಡಾಗ ಕುಶಲೋಪರಿ ಮಾತನಾಡುತ್ತಿದ್ದೇವೆ ಹೊರತು ಎಂದೂ ಆತನ ಆರ್ಥಿಕ ವ್ಯವಹಾರದ ಬಗ್ಗೆ ಚರ್ಚೆ ಮಾಡಿಲ್ಲ. ಅದರ ಅಗತ್ಯ ನನಗಿರಲಿಲ್ಲ. ನಾನು ಫುಲ್‌ಟೈಮ್ ರಾಜಕೀಯ ಮಾಡಿಕೊಂಡು ಬಂದೆನೇ ಹೊರತು, ಹಣಕಾಸಿನ ವ್ಯವಹಾರದ ಕಡೆ ಹೆಚ್ಚು ಗಮನ ನೀಡಲಿಲ್ಲ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು. ನನ್ನ ಎದುರು ನನ್ನ ತಮ್ಮನ ಪತ್ನಿಯೇ ಚುನಾವಣೆಗೆ ನಿಂತಿದ್ದಾರೆ. ರಾಜಕೀಯದಲ್ಲಿ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಸಂಕಷ್ಟದ ವೇಳೆ ಜೊತೆಗಿದ್ದು ಎಷ್ಟೇ ಸಹಾಯ ಮಾಡಿದರೂ ರಾಜಕೀಯ ಮುಂದೆ ಎಲ್ಲವೂ ಗೌಣ ಎನ್ನುವಂತಾಗಿದೆ. ನನ್ನ ವಿರುದ್ಧ ಸ್ಪರ್ಧಿಸುವ ಮುನ್ನ ಅವರು ತಿಳಿದುಕೊಳ್ಳಬೇಕಿತ್ತು ಎಂದು ಜನಾರ್ದನ ರೆಡ್ಡಿ ವಿರುದ್ಧ ಹರಿಹಾಯ್ದರು.
ನಿದ್ರೆ ಮಾತ್ರೆ ಸೇವಿಸಲ್ಲ:
ಜನಾರ್ದನ ರೆಡ್ಡಿಯ ಪತ್ನಿ ಚುನಾವಣೆ ಸ್ಪರ್ಧೆಯಿಂದ ಶಾಸಕ ಸೋಮಶೇಖರ ರೆಡ್ಡಿಗೆ ನಿದ್ರೆ ಬರುತ್ತಿಲ್ಲ. ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕೆಕೆಆರ್‌ಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ರೆಡ್ಡಿ, ನಾನೆಂದೂ ನಿದ್ರೆ ಮಾತ್ರೆ ತೆಗೆದುಕೊಂಡಿಲ್ಲ. ಮಲಗಿದ ಎರಡನೇ ನಿಮಿಷಕ್ಕೆ ನಿದ್ರೆಗೆ ಜಾರುತ್ತೇನೆ. ನನಗೆ ಕನಸುಗಳು ಸಹ ಬೀಳುವುದಿಲ್ಲ. ಆಗಾಗ್ಗೆ ಬಳ್ಳಾರಿಯ ಅಭಿವೃದ್ಧಿ ಕನಸು ಬೀಳುತ್ತವೆಯೇ ಹೊರತು, ಕೆಟ್ಟಕನಸು ಬೀಳಲು ಸಾಧ್ಯವೇ ಇಲ್ಲ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು. ನಿದ್ರೆ ವಿಚಾರದಲ್ಲಿ ನನ್ನಂತಹ ಸುಖವಂತ ಯಾರೂ ಇಲ್ಲ. ನಾನೆಂದೂ ನಿದ್ರೆಯಿಲ್ಲದೆ ಒದ್ದಾಡಿಲ್ಲ ಎಂದರು.
ಶಾಸಕ ರೆಡ್ಡಿ ಎದುರೇ ನಾನೂ ಪ್ರಬಲ ಆಕಾಂಕ್ಷಿ ಎಂದ ರಾಮಲಿಂಗಪ್ಪ
ಸುದ್ದಿಗೋಷ್ಠಿಯಲ್ಲಿದ್ದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ ನಾನು ಸಹ ನಗರ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ರಾಹುಲ್ ಗಾಂಧಿಗೆ ಮಾನಸಿಕ ತೊಂದರೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಸುದ್ದಿಗೋಷ್ಠಿಯಲ್ಲಿ ಶಾಸಕರ ಪಕ್ಕದಲ್ಲಿಯೇ ಕುಳಿತು ತಮ್ಮ ಇಂಗಿತ ಹೊರ ಹಾಕಿದ ಕೆ.ಎ. ರಾಮಲಿಂಗಪ್ಪ, ಶಾಸಕ ಸೋಮಶೇಖರ ರೆಡ್ಡಿ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಈ ಹಿಂದೆ ಹೇಳಿರುವೆ. ಈಗಲೂ ಹೇಳುತ್ತಿರುವೆ. ನಾನು ಸಹ ಟಿಕೆಟ್ ಕೇಳಿರುವೆ. ಯಾರಿಗೆ ಸಿಕ್ಕರೂ ಬಿಜೆಪಿ ಪರ ಕೆಲಸ ಮಾಡುವೆ ಎಂದರು.
ಇದೇ ವೇಳೆ ತನ್ನನ್ನು ಬುಡಾ ಅಧ್ಯಕ್ಷ ಸ್ಥಾನದಿಂದ 24 ತಾಸಿನೊಳಗೆ ತೆರವುಗೊಳಿಸಿದ ಘಟನೆಯನ್ನು ಮೆಲುಕು ಹಾಕಿದ ರಾಮಲಿಂಗಪ್ಪ ಅವರು ಶಾಸಕ ಸೋಮಶೇಖರ ರೆಡ್ಡಿಯವರೇ ನನ್ನನ್ನು ತೆಗೆದು ಬೇರೆಯವರರನ್ನು ಅಧ್ಯಕ್ಷರನ್ನಾಗಿಸಿದರು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸೋಮಶೇಖರ ರೆಡ್ಡಿ, ನನ್ನ ಸಹೋದರ ಜನಾರ್ದನ ರೆಡ್ಡಿ ಸೂಚನೆಯಂತೆ ಹಾಗೆ ಮಾಡಬೇಕಾಯಿತು ಎಂದು ಹೇಳಿದರು.