ಕಾಂಗ್ರೆಸ್ ಸೋಲಿಸುವುದೇ ನನ್ನ ಗುರಿ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ
ಬರಗಾಲದ ಪರಿಸ್ಥಿತಿಯಲ್ಲೂ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಮರೆತು, ಅಧಿಕಾರದ ದರ್ಪ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರವನ್ನು ಲೋಕಸಭಾ ಚುನಾವಣೆಯಲ್ಲಿ ನೀಡಲಾಗುವುದು. ಕಾಂಗ್ರೆಸ್ ಸರ್ಕಾರ ಬಂದು 6 ತಿಂಗಳಾಗಿದೆ. ಹಗಲು ದರೋಡೆ, ಭ್ರಷ್ಟಾಚಾರ ಮೇರೆ ಮೀರಿದೆ ಎಂದು ಟೀಕಾಪ್ರಹಾರ ನಡೆಸಿದ ಬಿ.ವೈ.ವಿಜಯೇಂದ್ರ

ಬೆಂಗಳೂರು(ನ.16): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡುವುದು ಹಾಗೂ ಬಿಜೆಪಿಗೆ 28 ಸ್ಥಾನ ಗೆಲ್ಲಿಸಿಕೊಡುವುದು ನನ್ನ ಗುರಿ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಘೋಷಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಅವರು, ಬರಗಾಲದ ಪರಿಸ್ಥಿತಿಯಲ್ಲೂ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸುವುದನ್ನು ಮರೆತು, ಅಧಿಕಾರದ ದರ್ಪ, ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರವನ್ನು ಲೋಕಸಭಾ ಚುನಾವಣೆಯಲ್ಲಿ ನೀಡಲಾಗುವುದು. ಕಾಂಗ್ರೆಸ್ ಸರ್ಕಾರ ಬಂದು 6 ತಿಂಗಳಾಗಿದೆ. ಹಗಲು ದರೋಡೆ, ಭ್ರಷ್ಟಾಚಾರ ಮೇರೆ ಮೀರಿದೆ ಎಂದು ಟೀಕಾಪ್ರಹಾರ ನಡೆಸಿದರು.
ಸ್ವಸಾಮರ್ಥ್ಯದಿಂದ ವಿಜಯೇಂಗೆ ರಾಜ್ಯಾಧ್ಯಕ್ಷ ಹುದ್ದೆ: ಜೆ.ಪಿ.ನಡ್ಡಾ
ನಾವೆಲ್ಲರೂ ಜಾತಿ ಮನೋಭಾವ ಬಿಟ್ಟು ಬಿಜೆಪಿ ಕಾರ್ಯಕರ್ತ ಎಂದು ಮನದಲ್ಲಿ ಇಟ್ಟುಕೊಂಡರೆ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಲು ಸಾಧ್ಯ. ದೀಪಾವಳಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪಕ್ಷದ ಸಂಘಟಕ ಬಿ.ಎಲ್.ಸಂತೋಷ್ ಅವರು ಪಕ್ಷದ ರಾಜ್ಯಾಧ್ಯಕ್ಷ ಜವಾಬ್ದಾರಿ ನೀಡಿದ್ದು, ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ಲಕ್ಷಾಂತರ ಕಾರ್ಯಕರ್ತರ ಆಶಯಗಳನ್ನು ಉಳಿಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ರಾಜ್ಯ ಬಿಜೆಪಿಯ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದು, ಪಕ್ಷ ಮುಖಂಡರು, ಸಂಘ ಪರಿವಾರದ ಮುಖಂಡರು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಘೋಷಣೆ ಮಾಡಿದ ಬಳಿಕ ರಾಜ್ಯದ ಎಲ್ಲಾ ಹಿರಿಯರ ಜತೆ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಎಲ್ಲ ಮುಖಂಡರು ಸಹಕಾರ ನೀಡುವ ಅಶ್ವಾಸನೆ ನೀಡಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ಒಂದು ದಿನವೂ ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ನಮ್ಮ ಗುರಿ. ಅದಕ್ಕಾಗಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲುವುದೊಂದೇ ನಮ್ಮ ಮುಂದಿನ ಗುರಿಯಾಗಿದೆ ಎಂದು ಹೇಳಿದರು.
ಈ ಹಿಂದೆ 20 ಕ್ಷೇತ್ರ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾಗ ಅವರ ಹೇಳಿಕೆಯನ್ನು ಹಾಸ್ಯ ಮಾಡಿದ್ದರು. ಆದರೆ ಅದನ್ನು ಯಡಿಯೂರಪ್ಪ ಸಾಧಿಸಿ ತೋರಿಸಿದರು. ಈಗ ಲೋಕಸಭಾ ಚುನಾವಣೆಗೆ ಹಗಲು-ರಾತ್ರಿ ಶ್ರಮ ಹಾಕಬೇಕಿದೆ. ರಾಜ್ಯಾಧ್ಯಕ್ಷ ಜವಾಬ್ದಾರಿ ಕೊಡಲಾಗಿದೆ ಎಂದರೆ ಆ ಸ್ಥಾನದ ಮಹತ್ವ ಮತ್ತು ಗೌರವ ನನಗೆ ಗೊತ್ತಿದೆ. ಯಡಿಯೂರಪ್ಪನವರ ಹೋರಾಟವನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ ಪಕ್ಷದ ಯಾರೂ ತಲೆತಗ್ಗಿಸಿಕೊಂಡು ಹೋಗಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ವಿಜಯೇಂದ್ರ ಕೇವಲ ಯಡಿಯೂರಪ್ಪ ಬಣಕ್ಕೆ ಮಾತ್ರ ಅಧ್ಯಕ್ಷರು, ಕಾಂಗ್ರೆಸ್ ಟಾಂಗ್!
ಆಪರೇಷನ್ ಕಮಲ ಮಾಡುವುದಿಲ್ಲ, ಭಯ ಬೇಡ: ಬಿವೈವಿ
ಬೆಂಗಳೂರು: ಬಿಜೆಪಿಯು ಇತರೆ ಪಕ್ಷದವರನ್ನು ಸೆಳೆದು ಆಪರೇಷನ್ ಕಮಲ ಮಾಡಲಿದೆ ಎಂಬ ಆತಂಕ ಕಾಂಗ್ರೆಸ್‌ನಲ್ಲಿದ್ದು, ಅಂತಹ ಭಯ ಬೇಡ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರೇ ಅನುದಾನ ಇಲ್ಲದೇ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಕಾಂಗ್ರೆಸ್ ಸರ್ಕಾರಕ್ಕೆ ಅವರ ಪಕ್ಷದ ಶಾಸಕರೇ ಪಾಠ ಕಲಿಸುತ್ತಾರೆ ಎಂದರು.
ಆ ಜಾತಿ, ಈ ಜಾತಿ ಎಂಬ ಮನೋಭಾವನೆ ಬಿಟ್ಟು ನಾನು ಬಿಜೆಪಿ ಕಾರ್ಯಕರ್ತ ಅಂತಾ ಕೆಲಸ ಮಾಡಿದರೆ ನಿಶ್ಚಿತವಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ನಿಶ್ಚಿತ. ಚುನಾವಣೆ ಗೆದ್ದ ಬಳಿಕ ನಾನು ಯಾವುದೇ ಸಮುದಾಯಕ್ಕೆ ಸೇರಿದವನಲ್ಲ. ಕೇವಲ ಬಿಜೆಪಿ ಕಾರ್ಯಕರ್ತ ಎಂದು ಹೇಳಿದ ಅವರು, ನಾನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ನಿರೀಕ್ಷೆ ಮಾಡಿರಲಿಲ್ಲ. ಯಾರೂ ಸಹ ಬೇಸರದಲ್ಲಿ ಇಲ್ಲ. ಅದರ ಬಗ್ಗೆ ಚಿಂತೆ ಪಡಬೇಕಾಗಿಲ್ಲ. ಎಲ್ಲಾ ಹಿರಿಯರು, ಸಂಘ ಪರಿವಾರದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಬಡವರು, ರೈತರ ಪರ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.