ಬೆಂಗಳೂರು, (ಮಾ.19): ರಾಜರಾಜೇಶ್ವರಿ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ನಕಲಿ ವೋಟರ್ ಐಡಿ ಕಾರ್ಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಾಳೆ ಅಂದ್ರೆ ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಲಿದೆ.

ಸದ್ಯ ಕಲಬುರಗಿಯಲ್ಲಿರೋ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಮಧ್ಯಾಹ್ನ 1 ಗಂಟೆಗೆ ಕಲಬುರಗಿಯ ವಿಭಾಗೀಯ ಪೀಠದಿಂದಲೇ ವಿಡಿಯೋ ಕಾನ್ಫಿರೆನ್ಸ್ ಮೂಲಕ ತೀರ್ಪು ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಮುನಿರತ್ನ ಗೆಲುವು ಅಕ್ರಮವಾ ? ಸಕ್ರಮವಾ? ಎನ್ನುವುದು ಶುಕ್ರವಾರ ತಿಳಿಯಲಿದೆ. ಇದರಿಂದ ಮುನಿರತ್ನಗೆ ಟೆನ್ಷನ್ ಶುರುವಾಗಿದೆ. 

ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಆಯ್ಕೆಯನ್ನ ಅಸಿಂಧುಗೊಳಿಸಲು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಮೆಟ್ಟಿಲೇರಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಸುದೀರ್ಘವಾಗಿ ಪರ-ವಿರೋಧ ವಾದವನ್ನ ಅವಲೋಕಿಸಿದ್ದು, ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪು ನೀಡಲಿದೆ.

ನಕಲಿ ಐಡಿ ಕೇಸ್: ಮುನಿರತ್ನ ಬಿಡಂಗಿಲ್ಲ, ಮುನಿರಾಜು ಒಪ್ಪಂಗಿಲ್ಲ!

2018ರಲ್ಲಿ ವಿಧಾಸಭೆ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ಅವರು  29 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಅವರನ್ನ ಮಣಿಸಿದ್ದರು. ಆದ್ರೆ, ಮುನಿರಾಜುಗೌಡ ಅವರು ಚುನಾವಣಾ ಅಕ್ರಮದಿಂದ ಮುನಿರತ್ನ ಗೆದ್ದಿದ್ದಾರೆ‌. ನನ್ನನ್ನೇ ಶಾಸಕ ಎಂದು ಘೋಷಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿರುವ ಮುನಿರತ್ನ
ಹೌದು..2018ರ ಮೇನಲ್ಲಿ ನಡೆದ ವಿಧಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಮುನಿರತ್ನ ಅವರು ಬದಲಾದ ರಾಜೀಯ ವಿದ್ಯಾಮಾನಗಳಿಂದ ಬಿಜೆಪಿ ಸೇರಿದ್ದಾರೆ. ಬಳಿಕ ಕೆಲ ನಾಯಕರಿಂದ ಮುನಿರಾಜುಗೌಡ ಅವರನ್ನ ಮನವೋಲಿಸಿ ಕೇಸ್ ವಾಪಸ್ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೂ ಅದ್ಯಾವುದಕ್ಕೂ ಮುನಿರಾಜುಗೌಡ ಬಗ್ಗಿಲ್ಲ.

2018ರ ಮೇನಲ್ಲಿ ನಡೆದ ವಿಧಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್ ಮತ್ತು ಬಿಜೆಪಿ ಸ್ಪಷ್ಟ ಬಹುಮತ ಬಂದಿರಲಿಲ್ಲ. ಇದರಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿಕೊಂಡು ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದರು.

ಸಂತೋಷ್‌ ಭೇಟಿಯಾಗಿ ಕೇಸು ಹಿಂಪಡೆಸಲು ಮುನಿರತ್ನ ಯತ್ನ!

ಇದಾದ ಕೆಲ ತಿಂಗಳ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಕೆಲ ಶಾಸಕರು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನ ವಾಪಸ್ ಪಡೆದು 17 ಜನರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲಿಸಿದ್ದರು. ಈ 17 ಶಾಸಕರಲ್ಲಿ ಮುನಿರತ್ನ ಸಹ ಇದ್ದರು.

 ಆದರೆ ಅಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಮುನಿರತ್ನ ಸೇರಿಂತೆ 17 ಜನರನ್ನ ಶಾಸಕತ್ವ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ನೀಡಿದ್ದರು. ಸ್ಪೀಕರ್ ಅವರ ಈ ತೀರ್ಮಾನವನ್ನ ಪ್ರಶ್ನಿಸಿ 17 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅನರ್ಹ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ, ಇವರೆಲ್ಲ ಅನರ್ಹರು. ಆದ್ರೆ, ಉಪಚುನಾವಣೆಗೆ ನಿಲ್ಲಬಹುದು ಎಂದು ತೀರ್ಪು ನೀಡಿತ್ತು. 

ಮತ್ತೊಂದೆಡೆ ಮುನಿರತ್ನ ಹಾಗೂ ಮಸ್ಕಿ ಕ್ಷೇತ್ರದ ಗೆಲುವು ಕೋರ್ಟ್‌ನಲ್ಲಿ ಇದ್ದ ಕಾರಣ, ಚುನಾವಣೆ ಆಯೋಗ ಈ ಎರಡು ಕ್ಷೇತ್ರಗಳನ್ನ ಹೊರತುಪಡಿಸಿ ಇನ್ನುಳಿದ 15 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆ ಮಾಡಿತ್ತು.

ಒಟ್ಟಿನಲ್ಲಿ 2 ವರ್ಷಗಳ ಕಾನೂನು ಹೋರಾಟ ಶುಕ್ರವಾರ ಕೊನೆಯಾಗಲಿದ್ದು, ತೀರ್ಪು ಯಾರ ಪರವಾಗಿ ಬರಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.