ಸಂತೋಷ್‌ ಭೇಟಿಯಾಗಿ ಕೇಸು ಹಿಂಪಡೆಸಲು ಮುನಿರತ್ನ ಯತ್ನ!

ಸಂತೋಷ್‌ ಭೇಟಿಯಾಗಿ ಕೇಸು ಹಿಂಪಡೆಸಲು ಮುನಿರತ್ನ ಯತ್ನ| - ಆರ್‌ಆರ್‌ ನಗರದ ಚುನಾವಣಾ ಅಕ್ರಮ ಕೇಸ್‌

Under pressure to withdraw case Disqualified MLA Of Rajarajeshwari Nagar Munirathna Meets BL Santosh

ಬೆಂಗಳೂರು[ಡಿ.17]: ತಮ್ಮ ಸಹಪಾಠಿಗಳಾಗಿರುವವರ ಪೈಕಿ ಬಹುತೇಕರು ‘ಅರ್ಹ’ ಶಾಸಕರಾಗಿ ಚುನಾಯಿತರಾದ ಬೆನ್ನಲ್ಲೇ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಮುನಿರತ್ನ ಅವರು ತಮ್ಮ ವಿರುದ್ಧದ ಪ್ರಕರಣ ವಾಪಸ್‌ ಪಡೆಸುವ ಸಲುವಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ.

ಉಪಚುನಾವಣೆಯ ಫಲಿತಾಂಶದ ಮರುದಿನವೇ ನೂತನ ಶಾಸಕರೊಂದಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವ ಬಿಜೆಪಿಯ ಪರಾಜಿತ ಅಭ್ಯರ್ಥಿ ಪಿ.ಮುನಿರಾಜುಗೌಡ ಅವರನ್ನು ಮನವೊಲಿಸುವಂತೆ ಒತ್ತಾಯ ಮಾಡಿದ್ದರು.

ಇದೀಗ ಸೋಮವಾರ ಬಿಜೆಪಿ ಕಚೇರಿಗೆ ತೆರಳಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ಮುನಿರಾಜುಗೌಡ ಅವರು ದಾಖಲಿಸಿರುವ ಪ್ರಕರಣ ವಾಪಸ್‌ ಪಡೆಯುವಂತೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ.

ಆದರೆ, ಸಂತೋಷ್‌ ಅವರು ಈ ಬಗ್ಗೆ ಮುನಿರತ್ನ ಅವರೊಂದಿಗೆ ಹೆಚ್ಚು ಮಾತನಾಡಲು ಬಯಸಲಿಲ್ಲ. ನೀವು ಮುಖ್ಯಮಂತ್ರಿಗಳನ್ನು ಮತ್ತು ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸುವುದು ಉತ್ತಮ. ನಾನೂ ಪ್ರಯತ್ನ ಮಾಡುವೆ ಎಂದು ಹೇಳಿದರು ಎನ್ನಲಾಗಿದೆ. ಸಂತೋಷ್‌ ಅವರನ್ನು ಭೇಟಿ ಮಾಡಿ ಪಕ್ಷದ ಕಚೇರಿಯಿಂದ ಹೊರಬಂದ ಬಳಿಕ ಮುನಿರತ್ನ ಅವರು ಬೇಸರದಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಒಟ್ಟು ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳ ಪೈಕಿ ಈಗ ಉಪಚುನಾವಣೆ ನಡೆಯದೇ ಬಾಕಿ ಉಳಿದಿರುವುದು ಎರಡೇ ಕ್ಷೇತ್ರಗಳು. ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ. ಈ ಪೈಕಿ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣ ವಾಪಸ್‌ ಪಡೆಯಲು ಬಿಜೆಪಿ ಪರಾಜಿತ ಅಭ್ಯರ್ಥಿ ಬಸವನಗೌಡ ತುರುವಿಹಾಳ ಅವರು ಸಮ್ಮತಿಸಿ ಕ್ರಮ ಕೈಗೊಂಡಿದ್ದಾರೆ. ಇದೀಗ ರಾಜರಾಜೇಶ್ವರಿ ನಗರ ಕ್ಷೇತ್ರ ಮಾತ್ರ ಏಕಾಂಗಿಯಾಗಿ ಉಳಿಯುವ ಆತಂಕ ಮುನಿರತ್ನ ಅವರಲ್ಲಿ ಕಾಣಿಸಿಕೊಂಡಿದೆ.

Latest Videos
Follow Us:
Download App:
  • android
  • ios