Asianet Suvarna News Asianet Suvarna News

ತಪ್ಪೊಪ್ಪಿಕೊಂಡ ಸಿಎಂ ಸಿದ್ದರಾಮಯ್ಯ ಹುದ್ದೆ ಬಿಡಲಿ: ಬಿ.ವೈ.ವಿಜಯೇಂದ್ರ

ನಿವೇಶನಗಳನ್ನು ವಾಪಸ್ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ತಪ್ಪು ಮಾಡಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. 

Muda Case Confessed CM Siddaramaiah should step down Says BY Vijayendra gvd
Author
First Published Oct 2, 2024, 6:36 AM IST | Last Updated Oct 2, 2024, 6:36 AM IST

ಬೆಂಗಳೂರು (ಅ.02): ನಿವೇಶನಗಳನ್ನು ವಾಪಸ್ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ತಪ್ಪು ಮಾಡಿದ್ದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಇನ್ನಾದರೂ ತಮ್ಮ ಭಂಡತನ ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡುವ ಮೊದಲು ರಾಜ್ಯಪಾಲರ ಕ್ಷಮೆ ಯಾಚಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಹಾಗೂ ಜನಪ್ರತಿನಿಧಿಗಳ ಕೋರ್ಟಿನ ಆದೇಶದ ಬಳಿಕ ನಿನ್ನೆ ಇ.ಡಿ. ಪ್ರಕರಣ ದಾಖಲಾಗಿದೆ. 

ಈಗ ರಾಜಕೀಯ ಸಹಾನುಭೂತಿ ಪಡೆಯಲು, ಅಧಿಕಾರಕ್ಕಾಗಿ ತೊಡೆ ತಟ್ಟುವ ಸ್ವಪಕ್ಷೀಯರನ್ನು ಸುಮ್ಮನಾಗಿಸಲು ನಿವೇಶನ ಹಿಂತಿರುಗಿಸುವ ಈ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಹಿಂದೆ 2011ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ವಿರುದ್ಧ ಆರೋಪ ಬಂದಿತ್ತು. ಆಗ, ತಪ್ಪು ಮಾಡದಿದ್ದರೆ ಯಾಕೆ ನಿವೇಶನ ವಾಪಸ್‌ ಮಾಡಿದ್ದಾರೆ ಎಂಬುದಾಗಿ ಇದೇ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದರು. ಈಗ ಅವರು ತಪ್ಪು ಮಾಡಿದ್ದಕ್ಕಾಗಿ ನಿವೇಶನಗಳನ್ನು ವಾಪಸ್ ಮಾಡಿದಂತಾಗಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ ಸರಿಯಾಗಿದೆ: ಸಚಿವರು

ಹಿಂದಿನ ಅವಧಿಯಲ್ಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ಆರೋಪ ಬಂದಾಗ ಲೋಕಾಯುಕ್ತಕ್ಕೆ ಬೀಗ ಹಾಕಿ ಎಸಿಬಿ ಸ್ಥಾಪಿಸಿದ್ದರು. ಆರೋಪಗಳನ್ನು ಮುಚ್ಚಿ ಹಾಕಲು ಎಸಿಬಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರು. ಕೆಂಪಣ್ಣ ಆಯೋಗ ಸ್ಥಾಪಿಸಿ ತಮ್ಮ ವಿರುದ್ಧ ಗುರುತರ ಆರೋಪಗಳನ್ನು ವರದಿಯಲ್ಲಿ ಉಲ್ಲೇಖಿಸಿದ್ದರೂ ಸಿದ್ದರಾಮಯ್ಯ ಅವರು ಕಣ್ಮುಚ್ಚಿ ಕುಳಿತಿದ್ದರು ಎಂದು ವಿಜಯೇಂದ್ರ ಟೀಕಿಸಿದರು.

ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ಹೇಳಿ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರವು 187 ಕೋಟಿಯ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ ಮಾಡಿದೆ. ಮುಡಾ ಹಗರಣದಲ್ಲಿ ಅಕ್ರಮವಾಗಿ ಮುಖ್ಯಮಂತ್ರಿಗಳ ಪತ್ನಿ ಪಾರ್ವತಿ ಅವರಿಗೆ 14 ನಿವೇಶನ ನೀಡಿದ್ದು ಒಂದು ಕಡೆ ಇದ್ದರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ಮುಡಾದಲ್ಲಿ ಸಾವಿರಾರು ಕೋಟಿ ರು. ಬೆಲೆ ಬಾಳುವ ಐದು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅವರಿಗೆ ಬೇಕಾದ ಪುಡಾರಿಗಳು, ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

Muda Case: ಸಿಎಂ ಸಿದ್ದರಾಮಯ್ಯ ಪತ್ನಿ ಹಿಂದಿರುಗಿಸಿದ 14 ಸೈಟ್‌ ಖಾತೆ ರದ್ದು

14 ನಿವೇಶನಗಳನ್ನು ವಾಪಸ್ ಮಾಡುವ ಸಂದರ್ಭ ಬರಲಿದೆ ಎಂಬುದಾಗಿ ನಾನು ಹಿಂದೆ ಹೇಳಿದ್ದೆ. ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರು ಅವರಾಗಿಯೇ ಈ ಪತ್ರ ಬರೆದರೇ ಅಥವಾ ಬಲವಂತವಾಗಿ ಬರೆದರೋ ನಮಗೆ ಗೊತ್ತಿಲ್ಲ. ಆದರೆ, ತಾವು ತಪ್ಪೇ ಮಾಡಿಲ್ಲ, ಯಾವುದಕ್ಕೂ ಜಗ್ಗುವುದಿಲ್ಲ ಬಗ್ಗುವುದಿಲ್ಲ. ಇದೆಲ್ಲ ರಾಜಕೀಯ ಪ್ರೇರಿತ ಎಂದು ಆರ್ಭಟಿಸುತ್ತಿದ್ದ ಮುಖ್ಯಮಂತ್ರಿಗಳು ನಾನ್ಯಾಕೆ ನಿವೇಶನ ವಾಪಸ್ ಕೊಡಲಿ ಎಂದಿದ್ದರು ಎಂದು ನೆನಪಿಸಿದರು.

Latest Videos
Follow Us:
Download App:
  • android
  • ios