ಕಾಂಗ್ರೆಸ್ ಪಕ್ಷ ಮನೆಯೊಂದು ನಾಲ್ಕು ಬಾಗಿಲು ಆಗಿದೆ: ಸಂಸದ ಮುನಿಸ್ವಾಮಿ
ಯರಗೋಳ್ ಡ್ಯಾಂ ಯೋಜನೆಗೆ ಅನುಮೋದನೆ ಮತ್ತು ಅನುದಾನ ನೀಡಿದ್ದು ಜೆಡಿಎಸ್ ಮತ್ತು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ. ಆದರೆ ಈಗಿನ ಶಾಸಕರು ಎಲ್ಲವನ್ನೂ ತಾವೇ ಮಾಡಿರುವಂತೆ ಹೇಳಿಕೊಳ್ಳುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಪರೋಕ್ಷವಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿಯವರನ್ನು ಕುಟುಕಿದರು.
ಕೋಲಾರ (ಅ.30): ಯರಗೋಳ್ ಡ್ಯಾಂ ಯೋಜನೆಗೆ ಅನುಮೋದನೆ ಮತ್ತು ಅನುದಾನ ನೀಡಿದ್ದು ಜೆಡಿಎಸ್ ಮತ್ತು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ. ಆದರೆ ಈಗಿನ ಶಾಸಕರು ಎಲ್ಲವನ್ನೂ ತಾವೇ ಮಾಡಿರುವಂತೆ ಹೇಳಿಕೊಳ್ಳುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಪರೋಕ್ಷವಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿಯವರನ್ನು ಕುಟುಕಿದರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯರಗೋಳ್ ಡ್ಯಾಂ ಯಾರ ಕೊಡುಗೆ ಎಂಬುದು ಇಡೀ ಜಿಲ್ಲೆಯ ಜನತೆಗೆ ತಿಳಿದ ವಿಚಾರ. 2007ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಯೋಜನೆ ಜಾರಿ ಮಾಡಲಾಯಿತು. ಇದನ್ನು ನೆನಪಿಟ್ಟುಕೊಂಡು ನವೆಂಬರ್ ೧೦ರಂದು ಆಯೋಜಿಸಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ಇಬ್ಬರೂ ಮಾಜಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಬೇಕಿತ್ತು ಎಂದು ಮುನಿಸ್ವಾಮಿ ಅಭಿಪ್ರಾಯಪಟ್ಟರು.
ಕೊಟ್ಟ ಮಾತಿನಂತೆ ನಡೆದುಕೊಂಡಾಗ ಮಾತ್ರ ಜಿಲ್ಲೆ ಅಭಿವೃದ್ಧಿ: ಶಾಸಕ ಶಿವಲಿಂಗೇಗೌಡ
ವೆಂಕಟಮುನಿಯಪ್ಪ ಆಸಕ್ತಿ ಕಾರಣ: ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಗಿನ ಬಂಗಾರಪೇಟೆ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ಆಸಕ್ತಿ ವಹಿಸಿ ಯೋಜನೆ ಮಂಜೂರು ಮಾಡಿಸಿದರು. ಇದನ್ನೆಲ್ಲ ಮರೆತು ಈಗಿನ ಶಾಸಕರು ಎಲ್ಲವನ್ನೂ ನಾನೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಆದರೂ ಡ್ಯಾಂ ಅನ್ನು ಉದ್ಘಾಟನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 10 ರಂದು ಆಗಮಿಸುತ್ತಿದ್ದಾರೆ. ಅವರನ್ನು ಜಿಲ್ಲೆಗೆ ಸ್ವಾಗತಿಸುವೆ. ಅದೇ ರೀತಿ ಜಿಲ್ಲೆಗೆ ಶುದ್ಧ ಕುಡಿಯುವ ನೀರಿನ ದೊರಕಿಸಿದ ಕುಮಾರಸ್ವಾಮಿ ಮತ್ತು ಯಡಿಯೂರಪ್ಪರನ್ನು ಅಭಿನಂದಿಸುತ್ತೇನೆ ಎಂದು ಮುನಿಸ್ವಾಮಿ ನುಡಿದರು.
ಹುಲಿ ಉಗುರು ವಿವಾದ: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಸುರ್ಜೇವಾಲ ಹಣ ವಸೂಲಿ ಮಾಡಿಕೊಡುವ ಟಾಸ್ಕ್ ನೀಡಿದ್ದಾರೆ. ಅದನ್ನು ಪಾಲಿಸಲು ಸರ್ಕಾರ ಗುತ್ತಿಗೆದಾರರಿಂದ ಶೇ. 50ರಷ್ಟು ಕಮಿಷನ್ ವಸೂಲಿ ಮಾಡುತ್ತಿದೆ. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರ ಮನೆಯಲ್ಲಿ 42 ಕೋಟಿ ರು. ಹಣ ಪತ್ತೆಯಾದ ಹಗರಣ ಮರೆಮಾಚಲು ಹುಲಿ ಉಗುರಿನ ಪೆಂಡೆಂಟ್ ವಿಚಾರವನ್ನು ರಾಜ್ಯ ಸರ್ಕಾರ ಮುನ್ನೆಲೆಗೆ ತಂದಿದೆ ಎಂದು ಮುನಿಸ್ವಾಮಿ ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮನೆಯೊಂದು ನಾಲ್ಕು ಬಾಗಿಲು ಆಗಿದೆ: ಬೆಳಗಾವಿ ಸತೀಶ್ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಾಲ್ಕು ಟೀಂಗಳು ಸೃಷ್ಟಿಯಾಗಿದೆ. ಹಾಗಾಗಿ ಮನೆಯೊಂದು ನಾಲ್ಕು ಬಾಗಿಲಿನ ದುಸ್ಥಿತಿ ಆ ಪಕ್ಷದ್ದು ಎಂದು ಲೇವಡಿ ಮಾಡಿದರು.
ಸನಾತನ ಧರ್ಮವು ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ: ಸಂಸದ ಬಚ್ಚೇಗೌಡ
ಕಾಂಗ್ರೆಸ್‌ಗೆ ಉಳಿಗಾಲವಿಲ್ಲ: ಅವರವರಲ್ಲೇ ಕಿತ್ತಾಟ ಉಂಟಾಗಿ ಗುಂಪುಗಾರಿಕೆ ಸೃಷ್ಟಿಯಾಗಿದೆ. ವಿವಿಧ ಬಣಗಳ ಶಾಸಕರು ಸಾಮೂಹಿಕವಾಗಿ ಪಕ್ಷಾಂತರ ಮಾಡುತ್ತಾರೆ ಎಂಬ ಗೊಂದಲದಲ್ಲಿ ಅವರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಮತ್ತು ಆ ಪಕ್ಷಕ್ಕೆ ಉಳಿಗಾಲವೂ ಇಲ್ಲ ಎಂದು ಮುನಿಸ್ವಾಮಿ ಕಾಲೆಳೆದರು.