ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ನಡುವೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಸಂಸದ ಜಗದೀಶ್‌ ಶೆಟ್ಟರ್‌ ಹೇಳಿದರು.

ಬೆಳಗಾವಿ (ನ.29): ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ನಡುವೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಶೀಘ್ರವೇ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಲಿದೆ ಎಂದು ಸಂಸದ ಜಗದೀಶ್‌ ಶೆಟ್ಟರ್‌ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಕ್ಕೆಜೋಳ, ಹೆಸರು, ಉದ್ದು ಬೆಳೆ ಖರೀದಿ ಕೇಂದ್ರ ಆರಂಭ ಆಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ. ಭ್ರಷ್ಟಾಚಾರ ‌ಮೀತಿ ಮೀರಿದೆ. ಸಿದ್ದರಾಮಯ್ಯ ತಮ್ಮ ಆಡಳಿತದ ಬಿಗಿ ಕಳೆದುಕೊಂಡಿದ್ದಾರೆ.

ರಾಜ್ಯದ ಖಜಾನೆಯಲ್ಲಿ ಹಣ ಇಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿವೆ. ಸರ್ಕಾರ ಜೀವಂತ ವ್ಯವಸ್ಥೆಯಲ್ಲಿ ಇಲ್ಲ. ಸರ್ಕಾರ ಆವೃತ್ತ ನಿಧಿಯಲ್ಲಿ ಹಣವನ್ನು ಇಡಬೇಕಾಗುತ್ತದೆ. ಆದರೆ, ಸದ್ಯದ ಸ್ಥಿತಿ ನೋಡಿದರೆ ಆವೃತ್ತ ನಿಧಿಯಲ್ಲಿ ಹಣ ಇಲ್ಲವೇ? ಮೆಕ್ಕೆಜೋಳ, ಉದ್ದು ಹೆಸರು ಬೆಳೆಗೆ ಬೆಂಬಲ ಬೆಲೆ ನೀಡದಿರುವುದರಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಇದು ಸರ್ಕಾರದ ಬೇಜವಾಬ್ದಾರಿಯ ಪರಮಾವಧಿ ಆಗಿದೆ. ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಕೇಂದ್ರದ ಮೇಲೆ ಬೊಟ್ಟು ಮಾಡಿ ತೋರಿಸುವ ರಾಜ್ಯ ಸರ್ಕಾರಕ್ಕೆ ಬೆಲೆ ನಿಗದಿ ಅಧಿಕಾರ ಇಲ್ಲ ಎನ್ನುವ ಸಕ್ಕರೆ ಸಚಿವರು,

ಎಸ್‌ಎಪಿ ಕಾನೂನನ್ನು ಅರಿಯಬೇಕಿದೆ. ಎಫ್‌ಆರ್‌ಪಿ ನಿಗದಿಯನ್ನು ಕೇಂದ್ರ ಸರ್ಕಾರ ಮಾಡುತ್ತದೆ ನಿಜ. ಆದರೆ, ಎಸ್‌ಎಪಿಯನ್ನು ರಾಜ್ಯ ಸರ್ಕಾರ ಮಾಡಬೇಕು. ಈ ಕಾನೂನು ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲವೇ? ಸರ್ಕಾರ ಅಂಧಾದುಂದಿ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅ‍ವರು ಹೈಕಮಾಂಡ್‌ ತೀರ್ಮಾನ ಕೈಗೊಳ್ಳುತ್ತದೆ ಎಂದು ಅಸಹಾಯಕತೆಯ ಹೇಳಿಕೆ ಕೊಟ್ಟಿದ್ದಾರೆ. ಅಂದರೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಯಾರು? ಕೂಡಲೇ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಯೋಜನೆಗಳ ಕಾಮಗಾರಿ ವಿಳಂಬ

ಬೆಳಗಾವಿ- ಧಾರವಾಡ ಹೊಸ ರೈಲು ಯೋಜನೆಗೆ ದಿ.ಸುರೇಶ ಅಂಗಡಿ ₹927 ಕೋಟಿ ಅನುದಾನ ಮಂಜೂರು ಮಾಡಿಸಿದ್ದರು. ಭೂಸ್ಥಾದೀನ ಪ್ರಕ್ರಿಯೆ ಮುಗಿದಿದೆ. 406 ಎಕರೆ ಭೂಮಿ ಸ್ವಾಧೀನಕ್ಕಾಗಿ ₹129 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಬೇಕು. ಆದರೆ, ಈವರೆಗೆ ಒಂದು ರುಪಾಯಿ ಹಣ ಬಿಡುಗಡೆ ‌ಆಗಿಲ್ಲ. ಭೂಸ್ವಾಧೀನದ ಹಣ ಏರಿಕೆಯಾಗಲಿದೆ. ಮುಖ್ಯಮಂತ್ರಿ ಸಹಾಯಕತೆ ತೋರಿಸಿದ ಮೇಲೆ ಬಹಿರಂಗ ಪತ್ರ ಬರೆಯುತ್ತೇನೆ. ಈ ವಿಚಾರದಲ್ಲಿ ಸರ್ಕಾರ ಮೌನ ವಹಿಸಿದೆ. ಸ್ಮಾರ್ಟ್‌ಸಿಟಿ-2 ಗೆ ₹130 ಕೋಟಿ ಮಂಜೂರು ಆಗಿದೆ ಎಂದರು.

ಘನತ್ಯಾಜ್ಯ ವಿಲೇವಾರಿಗೆ ಕೇಂದ್ರದಿಂದ ಹಣ ಬಿಡುಗಡೆ. ಹಣ ಉಪಯೋಗ ಮಾಡಿಲ್ಲ, ವಾಪಸ್ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅಮೃತ-2 ಯೋಜನೆಯಲ್ಲಿ 7 ಕೆರೆ, 7 ಉದ್ಯಾನ ಅಭಿವೃದ್ಧಿಗೆ ₹ 40 ಕೋಟಿ ಬಿಡುಗಡೆ ಆಗಿದೆ. ಈ ಹಣವನ್ನು ಉಪಯೋಗ ಮಾಡುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನವೇ ಹರಿಸುತ್ತಿಲ್ಲ ಎಂದು ಹೇಳಿದರು. ಸವದತ್ತಿ ಯಲ್ಲಮ್ಮ ದೇವಾಲಯ ಅಭಿವೃದ್ಧಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ₹ 118ಕೋಟಿ ಕೇಂದ್ರ ಸರ್ಕಾರದಿಂದ ಬಂದಿದೆ. ₹ 300ಕೋಟಿ ರಾಜ್ಯ ಸರ್ಕಾರ ಹಣ ಘೋಷಣೆ ಮಾಡಿದೆ. ಈವರೆಗೆ ಒಂದು ರುಪಾಯಿಯನ್ನು ಬಿಡುಗಡೆ ಮಾಡಿಲ್ಲ. ಈ ಎಲ್ಲಾ ವಿಚಾರ ಮುಂದಿಟ್ಟು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯುವೆ.

ಪ್ರವಾಸೋದ್ಯಮ, ಮುಜರಾಯಿ ಇಲಾಖೆ ಫೈಟ್ ನಡೆಯುತ್ತಿದೆ. ಸಿಎಂ, ಡಿಸಿಎಂ ಅಷ್ಟೇ ಇಲಾಖೆಯಲ್ಲಿಯೂ ಫೈಟ್ ನಡೆಯುತ್ತಿದೆ. ಒಂದು ಪೈಸಾದಷ್ಟು ಟೆಂಡರ್ ಕೆಲಸ ಆಗಿಲ್ಲ. ಸರ್ಕಾರ ಜೀವಂತ ಹೆಣವಾಗಿರುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಖಂಡ ಕರ್ನಾಟಕ ಏಕೀಕರಣದ ಕುರಿತು ಬಹಿರಂಗ ಚರ್ಚೆಯಾಗಬೇಕಿದೆ. ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು. ಆಡಳಿತ ಜನತೆಯ ಬಳಿ ಹೋಗಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ, ಸಂಜಯ ಪಾಟೀಲ, ಅನಿಲ ಬೆನಕೆ, ಹಣಮಂತ ಕೊಂಗಾಲಿ, ರಮೇಶ ದೇಶಪಾಂಡೆ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಕಳೆದ ಒಂದು ವಾರದಿಂದ ರಾಜಕೀಯ ‌ಸ್ಟಂಟ್ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ನೀ ಕೊಡೆ, ನಾ ಬಿಡೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಈಗ ನೇರಾನೇರ ಫೈಟ್ ಆರಂಭವಾಗಿದೆ. ಟ್ವೀಟರ್ ಮೂಲಕವೂ ಫೈಟ್ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಹೋದಲ್ಲಿ ಡಿ.ಕೆ.ಶಿವಕುಮಾರ ಬರುತ್ತಿಲ್ಲ. ಡಿ.ಕೆ.ಶಿವಕುಮಾರ ಬಂದಲ್ಲಿ ಸಿಎಂ ಸಿದ್ದರಾಮಯ್ಯ ಹೋಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ.
-ಜಗದೀಶ ಶೆಟ್ಟರ್‌, ಸಂಸದ