ವಿವಿಧ ಜನಾಂಗಗಳನ್ನು ವಿಭಜಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ, ಅವರ ಮಾತಿನ ದಾಟಿ ನಿಜಕ್ಕೂ ಘನತೆವೆತ್ತ ಮುಖ್ಯಮಂತ್ರಿ ಸ್ಥಾನಕ್ಕೆ ತರವಲ್ಲ. ಆ ಸ್ಥಾನಕ್ಕೆ ಗೌರವ ತರುವಂತದ್ದಾಗಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಕೊಳ್ಳೇಗಾಲ (ಅ.30): ಜಾತಿ ಸಮೀಕ್ಷೆ ಹೆಸರಿನಲ್ಲಿ ವಿವಿಧ ಜನಾಂಗಗಳನ್ನು ವಿಭಜಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ, ಅವರ ಮಾತಿನ ದಾಟಿ ನಿಜಕ್ಕೂ ಘನತೆವೆತ್ತ ಮುಖ್ಯಮಂತ್ರಿ ಸ್ಥಾನಕ್ಕೆ ತರವಲ್ಲ. ಆ ಸ್ಥಾನಕ್ಕೆ ಗೌರವ ತರುವಂತದ್ದಾಗಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸ್ಥಾನದಲ್ಲಿರುವರು ಎಲ್ಲರೊಂದಿಗೆ ಗೌರವಯುತವಾಗಿ ವರ್ತಿಸಬೇಕು. ಒಬ್ಬ ಲೋಕಸಭಾ ಸದಸ್ಯರೊಂದಿಗೆ ಲಘುವಾಗಿ ಮಾತನಾಡುವುದು ಸಮಂಜಸವಲ್ಲ. ಸಿದ್ದರಾಮಯ್ಯ ಅವರ ಶೈಲಿಯಲ್ಲಿ ಮಾತನಾಡುವುದು ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯವಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ಹೆಚ್ಚಾಗಿದೆ ಎಂದರು.
ನನ್ನ ಆದೇಶವನ್ನು ಕಾಂಗ್ರೆಸ್ಸಿಗರು ಸರಿಯಾಗಿ ಓದಿಕೊಳ್ಳಲಿ
ನಾನು ಸಿಎಂ ಆಗಿದ್ದ ಅವಧಿಯಲ್ಲಿ 2013ರಲ್ಲಿ ಒಂದು ಕಾರ್ಯಕ್ರಮಕ್ಕೆ ಜಾಗ ಕೇಳಿದಾಗ, ಶಿಕ್ಷಣ ಇಲಾಖೆ ಜಾಗೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲವೆಂದು ಹೇಳಲಾಗಿತ್ತು. ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದುಕೊಳ್ಳಬೇಕೆಂದು ಬಿಜೆಪಿ ಸರ್ಕಾರ ಆರ್‌ಎಸ್‌ಎಸ್ ಕುರಿತಾಗಿ ಆದೇಶಿಸಿತ್ತು. ಅದನ್ನೇ ನಾವು ಮುಂದುವರಿಸಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿರುವುದು ಸುಳ್ಳು ಎಂದುಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಪತ್ರದಲ್ಲೇನಿದೆ? ಎನ್ನುವುದನ್ನು ಪ್ರಿಯಾಂಕ ಖರ್ಗೆ ಅವರು ಮೊದಲು ನೋಡಲಿ. ಅವರಿಗೆ ಧೈರ್ಯವಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆ ನಿಷೇಧಿಸಲಿ ನೋಡೋಣ ಎಂದು ಸವಾಲು ಹಾಕಿದರು. ಚಿತ್ತಾಪುರದಲ್ಲಿ ಪಥಸಂಚಲನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಪಥಸಂಚಲನದಲ್ಲಿ ಸಾವಿರಾರು ಯುವಕರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಆದ್ದರಿಂದ ಚಿತ್ತಾಪುರದಲ್ಲಿ ಅದನ್ನು ತಡೆಯುವ ಪ್ರಯತ್ನ ಮಾಡಿದರು. ಧ್ವಜಗಳನ್ನು ಕಿತ್ತು ಹಾಕಿದರು. ಆದರೆ, ಹೈಕೋರ್ಟ್ ಪಥಸಂಚಲನಕ್ಕೆ ಅವಕಾಶ ನೀಡಿದೆ.
ಒಂದು ವೇಳೆ ಕಾನೂನುಬಾಹಿರ ಆಗಿದ್ದರೆ ಅನುಮತಿ ಸಿಗುತ್ತಿರಲಿಲ್ಲ. ಪ್ರಿಯಾಂಕ್ ಖರ್ಗೆ ಅಹಂಕಾರದಿಂದ ಅಶಾಂತಿ ಆಗುತ್ತಿದೆ. ಹಿಂದೂ ಸಮಾಜ, ಲಿಂಗಾಯತ ಸಮಾಜ ಒಡೆಯುವುದೇ ಸಿದ್ದರಾಮಯ್ಯನವರ ಉದ್ದೇಶ. ಜತೆಗೆ ಅಲ್ಪಸಂಖ್ಯಾತರ ತುಷ್ಟೀಕರಣವೂ ಅವರ ಕರ್ತವ್ಯವಾಗಿದ್ದು, ಇದರಿಂದಾಗಿ ಸಮಾಜ ಹಾಳಾಗುತ್ತಿದೆ. ಮುಖ್ಯಮಂತ್ರಿ ಆದಿಯಾಗಿ ರಾಜ್ಯ ಸರ್ಕಾರ ಆರ್‌ಎಸ್‌ಎಸ್ ಎದುರು ಹಾಕಿಕೊಂಡವರು ಭಸ್ಮ ಆಗಲಿದ್ದಾರೆ. ದೀಪ ಆರುವಾಗ ಜೋರಾಗಿ ಉರಿಯುತ್ತದೆ ಎಂಬಂತೆ ಸಿದ್ದರಾಮಯ್ಯ ಸರ್ಕಾರದ ಅಂತಿಮ ಕ್ಷಣ ಬಂದಿದೆ ಎಂದು ಶಾಪ ಹಾಕಿದರು.
