ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಎಲ್ಲಾ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸುಮಾರು 50 ಸಾವಿರ ಕೋಟಿ ರುಗಳಷ್ಟು ಹಣ ಪಾವತಿ ಬಾಕಿ ಇದೆ. ಕೆಲವು ಗುತ್ತಿಗೆದಾರರು 60 ಪರ್ಸೆಂಟ್ ಸರ್ಕಾರವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. 

ಶಿರಾ (ಜ.30): ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಎಲ್ಲಾ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸುಮಾರು 50 ಸಾವಿರ ಕೋಟಿ ರುಗಳಷ್ಟು ಹಣ ಪಾವತಿ ಬಾಕಿ ಇದೆ. ಕೆಲವು ಗುತ್ತಿಗೆದಾರರು 60 ಪರ್ಸೆಂಟ್ ಸರ್ಕಾರವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕಾರ್ಯಗಳನ್ನು ಕೈ ಬಿಟ್ಟಿದ್ದಾರೆ. ಬರೀ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. 

ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಸಾಲಗಾರರು ಹಣ ಕಟ್ಟಿಲ್ಲ ಎಂದು ಕೆಲವು ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅವರು ಗೌರವದಿಂದ ರಾಜೀನಾಮೆ ನೀಡಿ ಬೇರೆಯವರಾದರೂ ಉತ್ತಮ ಆಡಳಿತ ಮಾಡಲಿ ಎಂದರು. ಶಿರಾ ಮೂಲಕ ಹಾದು ರಾ.ಹೆ. 69ರ ಚತುಷ್ಪಥ ರಸ್ತೆಯ ಕಾಮಗಾರಿಗೆ 2023-24ರ ಬಜೆಟ್‌ನಲ್ಲಿ 1000 ಕೋಟಿ ಕ್ರಿಯಾ ಯೋಜನೆ ಅನುಮೋದನೆಯಾಗಿದೆ. ಶೀಘ್ರದಲ್ಲಿಯೇ ಪ್ರಥಮ ಹಂತವಾಗಿ ಶಿರಾದಿಂದ ಬಡವನಹಳ್ಳಿಯವರೆಗೆ 563 ಕೋಟಿ ಅಂದಾಜು ವೆಚ್ಚದಲ್ಲಿ ಸುಮಾರು 20 ಕಿ.ಮೀ. ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು. 

ವಿರಕ್ತಮಠದ ಆಸ್ತಿ ದಾಖಲೆಯಲ್ಲೂ ‘ವಕ್ಫ್‌’ ಹೆಸರು: ಸಂಸದ ಗೋವಿಂದ ಕಾರಜೋಳ ಹೇಳಿದ್ದೇನು?

ಶಿರಾದಿಂದ ಮಧುಗಿರಿ-ಬೈರೇನಹಳ್ಳಿವರೆಗೆ ಸುಮಾರು 52 ಕಿ.ಮೀ. ಚತುಷ್ಪಥ ರಸ್ತೆ ಕಾಮಗಾರಿಯ ಮೊದಲ ಹಂತವಾಗಿ ಶಿರಾದಿಂದ ಬಡವನಹಳ್ಳಿವರೆಗೆ ಸುಮಾರು 20 ಕಿ.ಮೀ.ಗೆ ಡಿಪಿಆರ್ ಈಗಾಗಲೇ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಕಳುಹಿಸಲಾಗಿದೆ. ಅದರ ಅನುಮೋದನೆಗೆ ಫೆ. 7ರಂದು ದೆಹಲಿಯಲ್ಲಿ ಸಭೆ ಇದೆ. ಎರಡನೇ ಹಂತ ಬಡವನಹಳ್ಳಿ-ಮಧುಗಿರಿ-ಬೈರೇನಹಳ್ಳಿಯ ರಸ್ತೆಯ 32 ಕಿ.ಮೀ ಚತುಷ್ಪಥ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರಕಾರದ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯಕ್ಕೆ ಫೆ. 15ರೊಳಗೆ ಅಂದಾಜು ಪಟ್ಟಿ ತಯಾರು ಮಾಡಿ ಕಳುಹಿಸಲು ಮುಖ್ಯ ಎಂಜಿನಿಯರ್ ತಯಾರಿ ಮಾಡಿಕೊಂಡಿದ್ದಾರೆ. 

ಇಲ್ಲಿ ಸ್ವಲ್ಪ ಸಮಸ್ಯೆಗಳಿಗೆ ಮೂರು ಕಡೆ ರೈಲ್ವೆ ಕ್ರಾಸಿಂಗ್ ಇದೆ ಅದರ ಪರಿಶೀಲನೆ ನಡೆಯುತ್ತಿದೆ. ಇದರ ಬಗ್ಗೆ ನಿತಿನ್ ಗಡ್ಕರಿ ಅವರಿಗೆ ಮಾಹಿತಿ ಕಳುಹಿಸಲು ಸೂಚನೆ ಕೊಟ್ಟಿದ್ದಾರೆ ಎಂದ ಅವರು ಮತ್ತೊಂದು ರಾಷ್ಟ್ರೀಯ ಹೆದ್ದಾರಿ 544ಇ ಆಂಧ್ರಪ್ರದೇಶದ ಕೋಡಿಕೊಂಡ ಲೇಪಾಕ್ಷಿ, ಮಡಕಶಿರಾ, ರೊಳ್ಳೆ 103 ಕಿ.ಮಿ. ದ್ವಿಪಥ ರಸ್ತೆ ಅಭಿವೃದ್ಧಿಪಡಿಸಿದ್ದು, ಆಂಧ್ರ ಗಡಿಯಿಂದ ಶಿರಾವರೆಗೆ 13 ಕಿ.ಮೀ. ದ್ವಿಪಥ ರಸ್ತೆ ಅಭಿವೃದ್ಧಿಪಡಿಸಲು ಈಗಾಗಲೇ 166 ಕೋಟಿ ರೂ. ಅಂದಾಜು ಅನುಮೋದನೆಯಾಗಿದೆ. ಆದರೆ ಭೂಸ್ವಾಧೀನ ವಿಳಂಬದಿಸಿದ ನಿಗದಿತ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇಲ್ಲಿ ರೈತರು ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಆದರೆ ಮದಲೂರು ರೈತರು ದರ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಅವರ ಬೇಡಿಕೆಯಂತೆ ಸರಕಾರದ ದರದಂತೆ ನೀಡಬೇಕು. 

ನೀರಾವರಿ ಹುದ್ದೆ ಅಕ್ರಮ ತನಿಖೆಗೆ ಆದೇಶಿಸಿದ್ದೇ ಬಿಜೆಪಿ: ಸಂಸದ ಕಾರಜೋಳ

ಜಿಲ್ಲಾಧಿಕಾರಿಗಳು ರೈತರೊಂದಿಗೆ ಚರ್ಚಿಸಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಹಿಂದುಳಿದ ವರ್ಗಗಳ ಬಿಜೆಪಿ ಅಧ್ಯಕ್ಷ ಮಾಗೋಡು ಪ್ರತಾಪ್, ನಗರ ಬಿಜೆಪಿ ಅಧ್ಯಕ್ಷ ಗಿರಿಧರ್, ಗ್ರಾಮಾಂತರ ಅಧ್ಯಕ್ಷ ಈರಣ್ಣ ಪಟೇಲ್, ಜೆಡಿಎಸ್ ಮುಖಂಡ ಆರ್.ಉಗ್ರೇಶ್, ನಗರಸಭೆ ಸದಸ್ಯರಾದ ಆರ್.ರಾಮು, ಉಮಾ ವಿಜಯರಾಜ್, ಮಾಜಿ ಸದಸ್ಯ ಆರ್.ರಾಘವೇಂದ್ರ, ಸಂತೇಪೇಟೆ ನಟರಾಜ್ ಸೇರಿದಂತೆ ಹಲವರು ಹಾಜರಿದ್ದರು.