ಜಲಸಂಪನ್ಮೂಲ ಇಲಾಖೆಯಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ತನಿಖೆಗೆ ವಹಿಸಲಾಗಿತ್ತು ಎಂದು ಮಾಜಿ ಸಚಿವ ಹಾಗೂ ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ. 

ಬೆಂಗಳೂರು (ಸೆ.03): ಜಲಸಂಪನ್ಮೂಲ ಇಲಾಖೆಯಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ತನಿಖೆಗೆ ವಹಿಸಲಾಗಿತ್ತು ಎಂದು ಮಾಜಿ ಸಚಿವ ಹಾಗೂ ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಜಲಸಂಪನ್ಮೂಲ ಖಾತೆ ಸಚಿವನಾಗಿದ್ದ ವೇಳೆ ಎಲ್ಲ ಸರ್ಕಾರದ ಇಲಾಖೆಗಳ ಎಸ್‌ಸಿ-ಎಸ್‌ಟಿ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಸಂಬಂಧ ಸೂಚನೆ ನೀಡಲಾಗಿತ್ತು. 

ಆ ಸಂದರ್ಭದಲ್ಲಿ ನಮ್ಮ ಇಲಾಖೆಯ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ (ಡಬ್ಲ್ಯು ಆರ್‌ಡಿಓ) ಮುಖ್ಯ ಎಂಜಿನಿಯರ್ ಅವರು ಅರ್ಜಿ ಕರೆದು 182 ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾದ ತಾತ್ಕಾಲಿಕ ಅರ್ಹರ ಪಟ್ಟಿಯಲ್ಲಿ ನಕಲಿ ಅಂಕಪಟ್ಟಿ, ನಕಲಿ ಜಾತಿ ಪ್ರಮಾಣಪತ್ರಗಳನ್ನು ನೀಡಿದವರ ಬಗ್ಗೆ ಮುಖ್ಯ ಎಂಜಿನಿಯರ್‌ ಅವರು ಸರ್ಕಾರದ ಗಮನಕ್ಕೆ ತಂದರು. ಆಗ ನಮ್ಮ ಇಲಾಖೆ ವತಿಯಿಂದ ದೂರು ನೀಡಿ ತನಿಖೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು ಎಂದು ವಿವರಿಸಿದ್ದಾರೆ.

ದರ್ಶನ್‌ಗೆ ಕೊಡ್ತೀರಿ, ನಮಗೇಕೆ ಕೊಡಲ್ಲ: ಶಿವಮೊಗ್ಗ ಜೈಲಲ್ಲೂ ಬೀಡಿ ಕೇಳಿ ಕೈದಿಗಳ ಪ್ರತಿಭಟನೆ

ಸಿಸಿಬಿಯವರು ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಇದರಲ್ಲಿ ವಿನಾಕಾರಣ ನಾನು ಜಲಸಂಪನ್ಮೂಲ ಖಾತೆ ಸಚಿವ ಆಗಿದ್ದ ವೇಳೆ ಭಾರಿ ಅವ್ಯವಹಾರವಾಗಿತ್ತು ಎನ್ನುವ ರೀತಿಯಲ್ಲಿ ಬಿಂಬಿಸುವುದು ಸರಿಯಲ್ಲ. ಅಕ್ರಮದ ಸುಳಿವು ಸಿಗುತ್ತಿದ್ದಂತೆಯೇ ತನಿಖೆಗೆ ಆದೇಶ ನೀಡಿದ್ದೇವೆ. ಆ ತನಿಖೆ ಮುಂದುವರೆದು ಈಗ 48 ಮಂದಿ ಬಂಧನಕ್ಕೊಳಗಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.