ಪ್ರಿಯಾಂಕ್ ಖರ್ಗೆ ಹೇಳಿಕೆಯಿಂದ ಲಿಂಗಾಯಿತ ಸಮಾಜಕ್ಕೆ ಅಪಮಾನ: ಸಂಸದ ಜಾಧವ್
ಸ್ಪೆಷಲ್ ಬೇಬಿ ಆಫ್ ಕರ್ನಾಟಕ ಹಾಗೂ ಡಾಲರ್ಸ್ ಕಾಲೋನಿ ಸಚಿವರು ಪ್ರಿಯಾಂಕ್ ಖರ್ಗೆ ಹೇಳಿಕೆಯ ಧಾಟಿ ನೋಡಿದ್ರೆ ಅದು ಕಾನೂನು ವ್ಯವಸ್ಥೆ ಬಗ್ಗೆ ಮಾತನಾಡಿರುವ ಹಾಗೆ ಕಂಡಿಲ್ಲ ಬದಲಾಗಿ ಅದು ಅಧಿಕಾರದ ಮದ ಹಾಗೂ ಧಮ್ಕಿ ಹಾಕುವ ಇರಾದೆ ಕಂಡಿದೆ ಎಂದು ಸಂಸದ ಡಾ.ಉಮೇಶ ಜಾಧವ ಟೀಕಿಸಿದ್ದಾರೆ.
ಕಲಬುರಗಿ (ಮೇ.24): ಸ್ಪೆಷಲ್ ಬೇಬಿ ಆಫ್ ಕರ್ನಾಟಕ ಹಾಗೂ ಡಾಲರ್ಸ್ ಕಾಲೋನಿ ಸಚಿವರು ಪ್ರಿಯಾಂಕ್ ಖರ್ಗೆ ಹೇಳಿಕೆಯ ಧಾಟಿ ನೋಡಿದ್ರೆ ಅದು ಕಾನೂನು ವ್ಯವಸ್ಥೆ ಬಗ್ಗೆ ಮಾತನಾಡಿರುವ ಹಾಗೆ ಕಂಡಿಲ್ಲ ಬದಲಾಗಿ ಅದು ಅಧಿಕಾರದ ಮದ ಹಾಗೂ ಧಮ್ಕಿ ಹಾಕುವ ಇರಾದೆ ಕಂಡಿದೆ ಎಂದು ಸಂಸದ ಡಾ ಉಮೇಶ ಜಾಧವ ಟೀಕಿಸಿದ್ದಾರೆ. ಹೇಳಿಕೆ ನೀಡಿರುವ ಅವರು, ನಮ್ಮದು ಆಳುವ ಸರ್ಕಾರ ಅಲ್ಲ ಆಲಿಸುವ ಸರ್ಕಾರ ಅಂತ ಸ್ಪೆಷಲ್ ಬೇಬಿ ಹೇಳಿಕೆ ನೀಡಿ ದೊಡ್ಡದಾಗಿ ಬೀಗಿದ್ದು, ಆದರೆ ಇದು ಧಮ್ಕಿ ಹಾಕುವ ಸರ್ಕಾರ ಅಂತ ಕೇಳಲು ಇಷ್ಟಪಡುತ್ತೇನೆ ಎಂದು ಡಾ ಜಾಧವ ಲೇವಡಿ ಮಾಡಿದ್ದಾರೆ.
ಸ್ವಾಮೀಜಿಗಳ ಬಗ್ಗೆ ತಾವು ಉಪಯೋಗಿಸಿರುವ ಭಾಷೆ ನೋಡಿದ್ರೆ ಇದು ನಿಜಕ್ಕೂ ಖಂಡನೀಯ, ಏಕೆಂದರೆ ಒಬ್ಬ ಸುಸಂಸ್ಕೃತ ವ್ಯಕ್ತಿ ಅಥವಾ ಒಬ್ಬ ಸಚಿವನ ಬಾಯಿಂದ ಬಳಸುವ ಭಾಷೆಯಲ್ಲ. ಒಬ್ಬರು ಸ್ವಾಮೀಜಿಗೆ ನಾಯಿ, ರೌಡಿ, ಅವನು, ಇವನು ಎಂದು ಅವಮಾನಿಸುವ ಪದ ಬಳಸಿ ಶ್ರೇಷ್ಠ ಸ್ಥಾನಕ್ಕೆ ಹಾಗೂ ಸ್ವಾಮೀಜಿಯವರಿಗೆ ನಿಂದಿಸಿದ ಪರಿ ನೋಡಿದರೆ ಸ್ವಾಮೀಜಿಯವರಿಂದ ನಿಮಗೆ ಎಷ್ಟು ಭಯವಿದೆ ಎಂಬುವುದು ಸ್ಪಷ್ಟವಾಗುತ್ತದೆ. ಅದಕ್ಕಾಗಿ ತಾವು ವೈಯಕ್ತಿಕ ನಿಂದನೆಗೆ ಇಳಿದು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದೀರಿ ಎಂದು ಜಾಧವ ಟೀಕಿಸಿದ್ದಾರೆ.
ಹಿಂದೂ ಧರ್ಮಕ್ಕೆ ಬಿಜೆಪಿ, ಶ್ರೀರಾಮ ಸೇನೆಯಂತ ಕ್ರಿಮಿನಲ್ ಸಂಘಟನೆಯ ಅವಶ್ಯಕತೆ ಇಲ್ಲ: ಸಚಿವ ಪ್ರಿಯಾಂಕ್
ನಿಮ್ಮ ಪಕ್ಕ ಚೇಲಾ ಎಂದು ಗುರುತಿಸಿಕೊಂಡಿರುವ ಯಳಸಂಗಿ ವಕೀಲರು ನೀಡಿದ ಹೇಳಿಕೆ ನಾವು ದಲಿತರು ಮತ್ತು ಮುಸಲ್ಮಾನರು ಕೂಡಿದರೆ ಈ ಲಿಂಗಾಯತ ಸಮಾಜಕ್ಕೆ ನಿರ್ನಾಮ ಮತ್ತು ಅವರನ್ನು ನಮ್ಮ ಕಾಲಿಗೆರಗುವ ಹಾಗೆ ಮಾಡುತ್ತೇವೆ ಎಂದು ಹೇಳಿದಾಗ ಅದನ್ನು ಏಕೆ ಖಂಡಿಸಲಿಲ್ಲ? ಅವಾಗ ಎಲ್ಲಿ ಹೋಗಿತ್ತು ನಿಮ್ಮ ಸಾಮಾಜಿಕ ಚಿಂತನೆ? ಎಂದು ಪ್ರಶ್ನೆ ಮಾಡಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಗ ಮೊಟ್ಟಮೊದಲು ಅವರ ರಕ್ಷಣೆಗೆ ಬಂದಿದ್ದೆ ನೀವು, ಎಫ್ ಎಸ್ ಎಲ್ ವರದಿ ಬಂದಮೇಲೆ ಇದು ಖಚಿತವಾಗಿದೆ ಅಂದು ವಿಧಾನಸೌಧದಲ್ಲಿ ಕೂಗಿದ್ದು ಪಾಕಿಸ್ತಾನ ಜಿಂದಾಬಾದ್ ಅಂತ. ಇವಾಗ ಏನಂತಿರ ಇದಕ್ಕೆ?
ಒಬ್ಬ ಸಂಸದನಾಗಿ ಯಾರಿಗೆ ಹೇಗೆ ಗೌರವ ಕೊಡಬೇಕೆಂದು ನಾನು ನಿಮ್ಮಿಂದ ಕಲಿಯಬೇಕಾಗಿಲ್ಲ, ಆಂದೋಲ ಶ್ರೀಗಳು ಒಬ್ಬ ಸಾಮಾಜಿಕ ಕಾರ್ಯಕರ್ತರು ಹಾಗೂ ವೀರಶೈವ ಲಿಂಗಾಯತ ಧರ್ಮದ ಗುರುಗಳಾಗಿದ್ದಾರೆ. ಅವರಿಗೆ ನಾನು ಗೌರವ ಕೊಡುವುದರಲ್ಲಿ ಯಾವುದೇ ತಪ್ಪೇನಿಲ್ಲ. ಅವರ ಮೇಲೆ ಹಾಕಿರುವ ಎಲ್ಲಾ ಕೇಸಗಳು ರಾಜಕೀಯ ಪ್ರೇರಿತವಾಗಿದೆ. ಅದು ನೀವು ಖುದ್ದಾಗಿ ಒಪ್ಪಿಕೊಂಡಿದ್ದೀರಿ, ಅದಕ್ಕೆ ಅವರು ಕಾನೂನಾತ್ಮಕ ಹೋರಾಟ ನಡೆಸಿದ್ದಾರೆ ಮತ್ತು ಅವರು ಅದರಲ್ಲಿ ಜಯಗಳಿಸುತ್ತಾರೆ ಎಂದು ನಂಬಿಕೆ ಇದೆ ಎಂದಿದ್ದಾರೆ.
ಇದೇ ಮೇ 4 ಮತ್ತು 5 ರಂದು ನಡೆದ ಅರ್ಜುನಪ್ಪ ಮಡಿವಾಳ್ ಮೇಲೆ ನಡೆದಿರುವ ವಿವಸ್ತ್ರ ಘಟನೆ ಮತ್ತು ಅಮಾನವೀಯ ದೌರ್ಜನ್ಯ ಪ್ರಕರಣ ಅದು ಸಣ್ಣ ಘಟನೆ ಅಂತೀರಾ? ನಿಮಗೆ ಜನಸಾಮಾನ್ಯರ ಜೀವಕ್ಕೆ ಅಷ್ಟು ಕೂಡ ಬೆಲೆ ಇಲ್ಲ ಎಂದು ಭಾವಿಸುತ್ತೀರಾ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಯಾವುದೇ ಒಂದು ಘಟನೆ ನಡೆದಾಗ ಪೊಲೀಸ್ ಇಲಾಖೆ ಅದನ್ನು ಪೊಲೀಸ್ ಬ್ಲಾಗ ವೆಬ್ಸೈಟ್ ಹಾಗೂ ಪೊಲೀಸರಿಂದ ಮಾಧ್ಯಮ ಗ್ರೂಪ್ ಗಳಿಗೆ ಎಫ್‌ಐಆರ್ ಪ್ರತಿ ಹಾಕುವ ವಾಡಿಕೆ/ ಪದ್ಧತಿ ಇದೆ.
ಆದರೆ ಈ ಘಟನೆಯ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಮಾಧ್ಯಮವಾಗಲಿ ತಮ್ಮ ಬ್ಲಾಗ್ ವೆಬ್ಸೈಟ್ ನಲ್ಲಿ ಏಕೆ ಹಾಕಿಕೊಂಡಿಲ್ಲ? ಈ ಘಟನೆಯಲ್ಲಿ ಯಾಕೆ ಪೊಲೀಸ್ ಇಲಾಖೆ ನಿಮ್ಮ ಕೈ ಗೊಂಬೆತರ ವರ್ತಿಸಿದ್ದಾರೆ? ಎಂದು ಜಾಧವ ಪ್ರಶ್ನಿಸಿದ್ದಾರೆ. ಕೋಟನೂರ್ ಘಟನೆಯಲ್ಲಿ ಪ್ರಮುಖ ಆರೋಪಿಗಳು ದಿನೇಶ್ ದೊಡ್ಡಮನಿ ಹಾಗೂ ಶ್ರೀನಿವಾಸ್ ದೊಡ್ಮನಿಯವರನ್ನು ಪೊಲೀಸ್ ಇಲಾಖೆ ಇಲ್ಲಿಯವರೆಗೆ ಏಕೆ ಬಂಧಿಸಲಿಲ್ಲ? ಅವರ ಮೇಲೆ ನೇರ ಆರೋಪ ಹೊರಿಸಿದ್ದರೂ ಅವರಿಗೆ ಸಂರಕ್ಷಣೆ ನೀಡುತ್ತಿರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಪ್ರಜ್ವಲ್ ರೇವಣ್ಣಗೆ ಮಾನಸಿಕ ರೋಗ ಇತ್ತಾ?: ಸಚಿವ ಪ್ರಿಯಾಂಕ್ ಖರ್ಗೆ
ಮತ್ತು ಈ ಎರಡು ಘಟನೆಯಲ್ಲಿ ಇಲ್ಲಿಯವರೆಗೆ ಬಂಧಿತರಾದ ಆರೋಪಿಗಳು ಹೆಸರು ಪೋಲೀಸ್ ಇಲಾಖೆ ಏಕೆ ಬಹಿರಂಗ ಪಡಿಸಿಲ್ಲ? ಸಾಮಾನ್ಯವಾಗಿ ಯಾವುದೇ ಒಂದು ಘಟನೆಯಲ್ಲಿ ಆರೋಪಿಗಳಿಗೆ ಬಂಧಿಸಿದ ಮೇಲೆ ಅವರ ಹೆಸರನ್ನು ಬಹಿರಂಗಪಡಿಸುವ ಪೊಲೀಸ್ ಇಲಾಖೆ ಇದರಲ್ಲಿ ಯಾಕೆ ಮೌನ ವಹಿಸಿದೆ? ಎಂದು ಪ್ರಶ್ನಿಸಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿ ಮೊದಲ ದಿನ ಪೊಲೀಸ್ ಇಲಾಖೆ ಜೊತೆ ತಾವು ರಾಜಾರೋಷವಾಗಿ ಬೆದರಿಸಿ ಕಲ್ಬುರ್ಗಿ ಜಿಲ್ಲೆಯಲ್ಲಿ ಅಕ್ರಮ ಅವ್ಯವಹಾರ ದೌರ್ಜನ್ಯ ತಡೆಯಲು ಕಟಿಬದ್ಧನಾಗಿದ್ದೇನೆ ಎಂದು ಎದೆತಟ್ಟಿ ಹೇಳಿದ ನೀವು 10 ತಿಂಗಳಲ್ಲಿ ನಡೆದ ಘಟನೆಗಳು ನಿಮ್ಮ ನಿಜ ಬಣ್ಣ ಬಯಲಾಗಿಸಿದೆ ಎಂದು ಹೇಳಿದ್ದಾರೆ.