ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದವರ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ
ರಾಮನಗರ ಕ್ಷೇತ್ರದಿಂದ ತಾತಾ, ಮಗ, ಸೊಸೆ ಅಧಿಕಾರ ಅನುಭವಿಸಿದ್ದಾಯಿತು. ಇದೀಗ ಮೊಮ್ಮಗ ಬಂದಿದ್ದಾನೆ. ಮಂಡ್ಯ ಕ್ಷೇತ್ರದ ಜನರು ಬೇಡವೆಂದು ಕಳುಹಿಸಿದ ವ್ಯಕ್ತಿಯನ್ನು ನೀವೇಕೆ ಇಟ್ಟುಕೊಳ್ಳುತ್ತೀರಾ.
ರಾಮನಗರ (ಫೆ.06): ರಾಮನಗರ ಕ್ಷೇತ್ರದಿಂದ ತಾತಾ, ಮಗ, ಸೊಸೆ ಅಧಿಕಾರ ಅನುಭವಿಸಿದ್ದಾಯಿತು. ಇದೀಗ ಮೊಮ್ಮಗ ಬಂದಿದ್ದಾನೆ. ಮಂಡ್ಯ ಕ್ಷೇತ್ರದ ಜನರು ಬೇಡವೆಂದು ಕಳುಹಿಸಿದ ವ್ಯಕ್ತಿಯನ್ನು ನೀವೇಕೆ ಇಟ್ಟುಕೊಳ್ಳುತ್ತೀರಾ. ಮಂಡ್ಯದವರ ತೀರ್ಮಾನವನ್ನು ರಾಮನಗರ ಜನರು ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸುವಂತೆ ಸಂಸದ ಡಿ.ಕೆ.ಸುರೇಶ್ ಪರೋಕ್ಷವಾಗಿ ಕರೆನೀಡಿದರು. ತಾಲೂಕಿನ ತುಂಬೇನಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಹೊಸ ಪರ್ವ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಮಗನನ್ನು ನಿಲ್ಲಿಸುತ್ತಿದ್ದಾರೆ.
ಆ ಪಕ್ಷದಲ್ಲಿ ಬೇರೆ ಕಾರ್ಯಕರ್ತರು ಇರಲಿಲ್ಲವೇ. ಅವರಿಗೇಕೆ ಅವಕಾಶ ನೀಡಲಿಲ್ಲ. ಈ ಬಗ್ಗೆ ಸಾರ್ವಜನಿಕವಾಗಿಯೂ ಚರ್ಚೆ ಆಗಬೇಕು ಎಂದರು. ಮಂಡ್ಯ ಸಂಸದೆ ಸುಮಲತಾ ಒಕ್ಕಲಿಗರಲ್ಲ. ಆ ಕ್ಷೇತ್ರದ ಜನರು ಬುದ್ಧಿವಂತಿಕೆ ಮೆರೆದರು. ಅದೇ ರೀತಿ ರಾಮನಗರ ಕ್ಷೇತ್ರದ ಜನರು ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಿ, ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಾಮಥ್ಯರ್ವಿರುವ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರಿಗೆ ಅವಕಾಶ ನೀಡಿ ಬುದ್ಧಿವಂತಿಕೆ ಪ್ರದರ್ಶನ ಮಾಡಬೇಕಿದೆ. ಅವರು ತಮ್ಮ ತವರು ಜಿಲ್ಲೆಗೆ ಹೋಗಿ ಏನು ಬೇಕಾದರು ಮಾಡಿಕೊಳ್ಳಲಿ ಎಂದು ಹೇಳಿದರು.
ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ: ಸಂಸದ ಡಿ.ಕೆ.ಸುರೇಶ್
ಆ ಕುಟುಂಬದವರ ಕೊಡುಗೆ ಏನು: ಕೊರೋನಾ ಸಂಕಷ್ಟಕಾಲದಲ್ಲಿ ಸ್ಥಳೀಯ ಶಾಸಕರು ಕೊರೋನಾ ಬರುತ್ತದೆ ಅಂತ ಮನೆಯಲ್ಲಿ ಬೀಗ ಹಾಕಿಕೊಂಡು ಕುಳಿತಿದ್ದರು. ಆದರೆ, ಇಕ್ಬಾಲ್ ಹುಸೇನ್ ರವರು ತಮ್ಮ ಪ್ರಾಣದ ಹಂಗನ್ನು ತೊರೆದು ಸಂಕಷ್ಟದಲ್ಲಿದ್ದ ಜನರಿಗೆ ಕೈಲಾದ ಸೇವೆ ಮಾಡಿದರು. ಇದನ್ನು ಜನರು ಮರೆಯಬಾರದು ಎಂದು ತಿಳಿಸಿದರು. ರಾಮನಗರ ಕ್ಷೇತ್ರಕ್ಕೆ ಒಮ್ಮೆ ಪ್ರಧಾನಿ ಹಾಗೂ ನಾಲ್ಕು ಬಾರಿ ಮುಖ್ಯಮಂತ್ರಿಯನ್ನು ಕೊಡುಗೆ ನೀಡಿದ ಕೀರ್ತಿ ಇದೆ. ಇಷ್ಟಾದರು ರಾಮನಗರ ಕ್ಷೇತ್ರದ ಜನರು ನೆಮ್ಮದಿಯ ಜೀವನ ನಡೆಸಲು ಬೇಕಾದ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ.
ರಸ್ತೆ, ಚರಂಡಿ, ಕುಡಿವ ನೀರು, ಸೂರಿಲ್ಲದವರಿಗೆ ಮನೆ, ನಿವೇಶನ, ಯುವಕರಿಗೆ ಉದ್ಯೋಗದಂತಹ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಧಾನಿ, ಮುಖ್ಯಮಂತ್ರಿಯಂತಹ ಉನ್ನತ ಹುದ್ದೆ ಸಿಕ್ಕಿದಾಗಲೂ ಜನರ ಕಷ್ಟನೀಗಿಸಿ ರಾಮನಗರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಾಧ್ಯವಾಗಲಿಲ್ಲ ಏಕೆ. ಆಡಳಿತದಲ್ಲಿದ್ದಾಗ ಮಾಡಲಾಗದನ್ನು ಮುಂದೆ ಹೇಗೆ ಸಾಧ್ಯವಾಗುತ್ತದೆ. ಒಂದೇ ಪಕ್ಷ, ಒಂದೇ ಕುಟುಂಬವನ್ನು ಇನ್ನೇಷ್ಟುದಿನ ನಂಬಿ ಮೋಸ ಹೋಗುತ್ತೀರಾ ಎಂದು ಪ್ರಶ್ನಿಸಿ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದವರ ವಿರುದ್ಧ ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಮನಗರ ಅಭಿವೃದ್ಧಿಯಲ್ಲಿ 25-30ವರ್ಷಗಳಷ್ಟುಹಿಂದಕ್ಕೆ ಹೋಗಿದೆ. ತಾಲೂಕು ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಕನಕಪುರ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ರಾಮನಗರದಲ್ಲಿ ಏಕೆ ಆಗಿಲ್ಲವೆಂದು ಜನರು ತುಲನೆ ಮಾಡುತ್ತಿದ್ದಾರೆ.
ಹೊಸ ನಾಯಕತ್ವಕ್ಕೆ ಶಕ್ತಿ ತುಂಬಿ: ಕ್ಷೇತ್ರವನ್ನು ಒಂದು ಕುಟುಂಬದವರ ಕೈಗೆ ನೀಡುವ ಪದ್ಧತಿಗೆ ತಿಲಾಂಜಲಿ ಹಾಡಲು ಯುವಕರು ಸಂಕಲ್ಪ ಮಾಡಿ ಒಳ್ಳೆಯ ನಿರ್ಧಾರ ಮಾಡಿದ್ದಾರೆ. ಯುವಕರಿಗೆ ಬೆನ್ನೆಲುಬಾಗಿ ನಿಲ್ಲುವ ಡಿ.ಕೆ.ಶಿವಕುಮಾರ್ ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ. ಆ ಹೊಸ ನಾಯಕತ್ವಕ್ಕೆ ಇಕ್ಬಾಲ್ ಅವರನ್ನು ಬೆಂಬಲಿಸುವ ಮೂಲಕ ಶಕ್ತಿ ತುಂಬುವ ಕೆಲಸವನ್ನು ಜನರು ಮಾಡಬೇಕು ಎಂದು ಮನವಿ ಮಾಡಿದರು. ಯುವಕರಿಗೆ ಉದ್ಯೋಗ ಸೇರಿದಂತೆ ಎಲ್ಲ ವರ್ಗದ ಜನರ ಕಲ್ಯಾಣ ಕಾರ್ಯಕ್ರಮ ರೂಪಿಸಬೇಕಿದೆ.
ಹೀಗಾಗಿಯೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ , ಮನೆ ಯಾಜಮಾನಿಗೆ 2 ಸಾವಿರ , ಬಡವರಿಗೆ 10 ಕೆಜಿ ಅಕ್ಕಿ ಸೇರಿದಂತೆ ಇನ್ನೂ ಅನೇಕ ಘೋಷಣೆಗಳನ್ನು ಕಾಂಗ್ರೆಸ್ ಮಾಡಲಿದೆ. ಅದೆಲ್ಲವನ್ನು ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಅನುಷ್ಠಾನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಅಗತ್ಯ ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಿರಲಿಲ್ಲ. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಎಲ್ಲದರ ಮೇಲೂ ತೆರಿಗೆ ಹೇರಿಕೆ ಮಾಡುತ್ತಿದೆ. ತೆರಿಗೆ ಕಟ್ಟಿಊಟ ಮಾಡುವ ಸ್ಥಿತಿ ಬಂದಿದೆ. ಆದ್ದರಿಂದ ಕರ್ನಾಟಕವನ್ನು ಅತ್ಯುತ್ತಮ ರಾಜ್ಯವನ್ನಾಗಿ ನಿರ್ಮಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಸುರೇಶ್ ಮನವಿ ಮಾಡಿದರು.
ಎಚ್‌ಡಿಕೆ ಮೊದಲು ತಮ್ಮ ಮನೆ ಬೆಂಕಿ ಆರಿಸಿಕೊಳ್ಳಲಿ: ಸಂಸದ ಮುನಿಸ್ವಾಮಿ
ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯ ಪುನೀತ್ ಕುಮಾರ್, ಜೆಡಿಎಸ್ ಮುಖಂಡ ರವಿ ಶಂಕರ್ , ಡೇರಿ ಅಧ್ಯಕ್ಷ ಸೀಬಕಟ್ಟೆ ರಾಮಕೃಷ್ಣ, ಚಂದ್ರಶೇಖರ್, ತುಂಬೇನಹಳ್ಳಿ ಮಹದೇವ, ಹನುಮಂತೇಗೌಡನದೊಡ್ಡಿ ಶಶಿಕುಮಾರ್, ಮಲ್ಲೇಗೌಡ, ಚಂದ್ರಪ್ಪ, ಪ್ರದೀಪ್, ಗೋವಿಂದಯ್ಯ ಮತ್ತಿತರರು ಕಾಂಗ್ರೆಸ್ ಸೇರ್ಪೆಡೆಯಾದರು. ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಶಾಸಕ ಕೆ.ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚೇತನ್ ಕುಮಾರ್, ವಿ.ಎಚ್ .ರಾಜು, ಮಾಜಿ ಅಧ್ಯಕ್ಷ ಜಯರಾಮಯ್ಯ, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಪುಟ್ಟರಾಜು, ಮಹಿಳಾ ಘಟಕ ಅಧ್ಯಕ್ಷೆ ದೀಪಾ ಮುನಿರಾಜು, ಮುಖಂಡರಾದ ಉಮಾಶಂಕರ್, ಅಪ್ಪಾಜಣ್ಣ, ಜಗಣ್ಣ, ಗ್ರಾಪಂ ಅಧ್ಯಕ್ಷೆ ಸರೋಜಮ್ಮ, ಉಪಾಧ್ಯಕ್ಷ ಗೋಪಾಲ್, ಮಾಜಿ ಉಪಾಧ್ಯಕ್ಷ ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.