ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ: ಸಂಸದ ಡಿ.ಕೆ.ಸುರೇಶ್
ಜೆಡಿಎಸ್‌ನದು ಪಂಚರತ್ನ ಯಾತ್ರೆಯೋ ಅಥವಾ ಪಂಚೆರತ್ನ ಯಾತ್ರೆಯೋ ತಿಳಿಯುತ್ತಿಲ್ಲ. ಕಾಂಗ್ರೆಸ್‌ನ ಭರವಸೆಗಳು ಜನಪರವಾಗಿದ್ದು, ಮುಂಬರುವ ವಿಧಾಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಕುದೂರು (ಫೆ.06): ಜೆಡಿಎಸ್‌ನದು ಪಂಚರತ್ನ ಯಾತ್ರೆಯೋ ಅಥವಾ ಪಂಚೆರತ್ನ ಯಾತ್ರೆಯೋ ತಿಳಿಯುತ್ತಿಲ್ಲ. ಕಾಂಗ್ರೆಸ್‌ನ ಭರವಸೆಗಳು ಜನಪರವಾಗಿದ್ದು, ಮುಂಬರುವ ವಿಧಾಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಭೈರವನದುರ್ಗದ ತಪ್ಪಲಿನಲ್ಲಿ ಏರ್ಪಡಿಸಿದ್ದ ಕುದೂರು ಕಾಂಗ್ರೆಸ್ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿಯವರು ಕಮೀಷನ್ ಹೊಂದಾಣಿಕೆ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದಾರೆ. ಇವರಿಬ್ಬರು ಕಮೀಷನ್ ವಿಷಯದಲ್ಲಿ ಅಣ್ಣತಮ್ಮಂದಿರಿದ್ದಂತೆ.
ಜೆಡಿಎಸ್‌ನವರು ಮಾಗಡಿ ಅಭಿವೃದ್ಧಿಗೆ ಶ್ರಮಿಸಿದೆವು ಎನ್ನುತ್ತಾರೆ, ಉಸ್ತುವಾರಿ ಸಚಿವರು ನಾನು ಮಾಡಿದೆ ಎನ್ನುತ್ತಾರೆ. ಇಂತಹ ದ್ವಂದ್ವದ ಹೇಳಿಕೆ ಕೊಡುವಲ್ಲಿ ಈ ಎರಡೂ ಪಕ್ಷದವರು ಎತ್ತಿದ ಕೈ ಎಂದು ಹೇಳಿದರು. ವಿಧಾನಪರಿಷತ್ತಿನ ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿ, ಹೇಮಾವತಿ ನದಿ ನೀರನ್ನು ಮಾಗಡಿ ತಾಲೂಕಿನ ಕೆರೆಗಳಿಗೆ ಹರಿಸಬೇಕು ಎಂಬುದು ನನ್ನ ದೊಡ್ಡ ಕನಸು ಮತ್ತು ಅದರ ಹಿಂದೆ ನನ್ನ ಪರಿಶ್ರಮ ಎದ್ದು ಕಾಣುತ್ತದೆ. ಆದರೆ, ಈಗ ಮಾಗಡಿ ಶಾಸಕ ಎ.ಮಂಜುನಾಥ್ ಹೇಮಾವತಿ ಯೋಜನೆ ನಾನೇ ತಂದಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ.
ವಾಮಮಾರ್ಗದಲ್ಲಿ ಚುನಾವಣೆ ಗೆದ್ದ ಎಚ್‌ಡಿಕೆ: ಸಿ.ಪಿ.ಯೋಗೇಶ್ವರ್
ಈ ವಿಚಾರದ ಕುರಿತು ಸಾರ್ವಜನಿಕವಾಗಿ ಚರ್ಚೆಗೆ ಬಂದು ಎಲ್ಲರೆದುರು ಸತ್ಯ ಹೇಳಲಿ ಎಂದು ಸವಾಲು ಹಾಕಿದರು. ನಾನು ಯಾವುದೇ ಸಭೆಗೆ ಹೋದರು ಅದೇ ಸಭೆಗೆ ಮಂಜುನಾಥ್ ಹಾಜರಾಗಿದ್ದರೆ ನನ್ನ ಕಾಲು ಮುಟ್ಟಿನಮಸ್ಕರಿಸಿ ಜನರಿಗೆ ಹೊಸ ಸಂದೇಶ ಕೊಡುವ ಪ್ರಯತ್ನ ಮಾಡುತ್ತಾರೆ. ಇದರಿಂದ ನನಗೂ ಮುಜುಗರವಾಗುತ್ತದೆ. ನನ್ನನ್ನು ಗುರು ಎಂದು ಸಂಬೋದಿಸುತ್ತಾರೆ, ಹಾಗಿದ್ದರೆ, ಗುರು ಶ್ರಮಿಸಿದ ಹೇಮಾವತಿ ಯೋಜನೆಗೆ ತಮ್ಮ ಹೆಸರು ಹಾಕಿಕೊಂಡು ಹೋಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಎಸ್‌ಡಿಪಿ, ಪಿಎಫ್‌ಐಗೆ ಬೆಂಬಲ ಕೊಟ್ಟ ಕಾಂಗ್ರೆಸ್: ಸಿ.ಟಿ.ರವಿ ಆರೋಪ
ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಜೆಡಿಎಸ್‌ಗೆ ಹಾಕುವ ಪ್ರತಿ ಮತವೂ ಬಿಜೆಪಿಯನ್ನು ಅಧಿಕಾರಕ್ಕೆ ಹತ್ತಿರ ತರುತ್ತದೆ. ನಾವೆಲ್ಲ ಒಟ್ಟಾಗಿ ಈ ಚುನಾವಣೆ ಎದುರಿಸಿ ಕಾಂಗ್ರೆಸ್ ಪಕ್ಷವವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಕೈಗಾರಿಕೆಯ ಹೆಸರಿನಲ್ಲಿ ರೈತರ ಬದುಕಿಗೆ ಕನ್ನ ಹಾಕುವವರಿಗೆ ಈ ಚುನಾವಣೆ ಸರಿಯಾದ ಪಾಠ ಕಲಿಸಲಿದೆ ಎಂದು ಹೇಳಿದರು. ಜಿ.ಪಂ.ಮಾಜಿ ಆಧ್ಯಕ್ಷ ಎಚ್.ಎನ್.ಅಶೋಕ್, ತಾ.ಪಂ. ಮಾಜಿ ಅಧ್ಯಕ್ಷ ಸುರೇಶ್, ನಾರಾಯಣಪ್ಪ, ಮಾಡಬಾಳ್ ಜಯರಾಂ, ಜಿಲ್ಲಾ ಮಹಿಳಾ ಅಧ್ಯಕ್ಷೆ ದೀಪ ಮುನಿರಾಜ್, ಕುದೂರು ಗ್ರಾ.ಪಂ. ಅಧ್ಯಕ್ಷೆ ಭಾಗ್ಯಮ್ಮಚಿಕ್ಕರಾಜು, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕ ರಾಜಣ್ಣ, ಹನುಮಂತರಾಯಪ್ಪ, ನಾಗೇಶ್, ಪ್ರಕಾಶ್, ಶಶಾಂಕ್ ಇದ್ದರು.