ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್-ಬಿಜೆಪಿ ಮೈತ್ರಿ: ಕಾಂಗ್ರೆಸ್‌ಗೆ ತೊಂದರೆ ಇಲ್ಲವೆಂದ ಸಂಸದ ಸುರೇಶ್
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಇಲ್ಲ. ‘ಇಂಡಿಯಾ’ ಒಕ್ಕೂಟ ದೇಶದಲ್ಲಿ ಒಗ್ಗಟ್ಟಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್‌ಗೆ ಅಸ್ತಿತ್ವ ಕಳೆದುಕೊಳ್ಳುವ ಭಯ ಕಾಡುತ್ತಿದೆ. ಹಾಗಾಗಿ ಅಸ್ತಿತ್ವ ಉಳಿಸಿಕೊಳ್ಳಲು ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಚನ್ನಪಟ್ಟಣ (ಸೆ.10): ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಇಲ್ಲ. ‘ಇಂಡಿಯಾ’ ಒಕ್ಕೂಟ ದೇಶದಲ್ಲಿ ಒಗ್ಗಟ್ಟಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್‌ಗೆ ಅಸ್ತಿತ್ವ ಕಳೆದುಕೊಳ್ಳುವ ಭಯ ಕಾಡುತ್ತಿದೆ. ಹಾಗಾಗಿ ಅಸ್ತಿತ್ವ ಉಳಿಸಿಕೊಳ್ಳಲು ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ತಾಲೂಕಿನ ಮಾಕಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅದು ಆ ಪಕ್ಷಗಳ ವೈಯಕ್ತಿಕ ವಿಚಾರ. ಅವರು ಏನೇ ತೀರ್ಮಾನ ಮಾಡಿ ಮೈತ್ರಿ ಮಾಡಿಕೊಂಡರೂ ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಸಿದ್ಧಾಂತದ ಮೇಲೆ ಹೋರಾಟ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಜಾತ್ಯತೀತ ತತ್ವದ ಮೇಲೆ ಆಡಳಿತ ಮಾಡುತ್ತಿದೆ. ಯಾರು ಹೊಂದಾಣಿಕೆ ಮಾಡಿಕೊಂಡರೂ ನಮ್ಮ ಸಿದ್ಧಾಂತದ ಮೇಲೆ ನಾವು ಹೋರಾಟ ಮಾಡುತ್ತೇವೆ. ನಮ್ಮ ಒಕ್ಕೂಟ ವ್ಯವಸ್ಥೆ ಬಲಪಡಿಸಲು ಹೋರಾಡುತ್ತೇವೆ. ನಮಗೆ ಮತದಾರರ ಮೇಲೆ ವಿಶ್ವಾಸ ಇದೆ. ನಮ್ಮ ಕೆಲಸ ನೋಡಿ ಜನ ಮತ ನೀಡುತ್ತಾರೆ. ಕೆಲಸ ಮಾಡಿದರೆ ಜನ ಗೆಲ್ಲಿಸುತ್ತಾರೆ. ಇವರ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿರುವ ಪಕ್ಷ. ಹಾಗಾಗಿ ಅವರ ಮೈತ್ರಿ ವಿಚಾರಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.
5 ಭರವಸೆಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದ ಕಾಂಗ್ರೆಸ್: ಸಂಸದ ಸುರೇಶ್
ಟಾರ್ಗೆಟ್ ಮಾಡಲಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಾರ್ಗೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಧಾರಾಳವಾಗಿ ಮಾಡಲಿ ಟಾರ್ಗೆಟ್ ಮಾಡಲಿ, ಯಾರು ಬೇಡ ಅನ್ನುತ್ತಾರೆ. ಬಿಜೆಪಿ ಅವರೂ ಟಾರ್ಗೆಟ್ ಮಾಡಲಿ, ಜೆಡಿಎಸ್‌ನವರೂ ಮಾಡಲಿ. ಎಲ್ಲವನ್ನೂ ಜನ ನೋಡುತ್ತಿದ್ದಾರೆ. ಅವರೇ ಅಂತಿಮ ತೀರ್ಮಾನ ಮಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಯೋಗೇಶ್ವರ್ ವಿರುದ್ಧ ವಾಗ್ದಾಳಿ: ರಾಮನಗರದ ಮೆಡಿಕಲ್ ಕಾಲೇಜನ್ನು ವೈಯಕ್ತಿಕ ಲಾಭಕ್ಕೆ ಸ್ಥಳಾಂತರ ಮಾಡಲಾಗಿದೆ ಎಂಬ ಯೋಗೇಶ್ವರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಅವನಿಗೆ ಮಾಡೋದಕ್ಕೆ ಬೇರೆ ಏನೂ ಕೆಲಸ ಇಲ್ಲ. ಅದಕ್ಕೆ ಹೀಗೆ ಮಾತನಾಡುತ್ತಿದ್ದಾನೆ. ಅವನು ಬಿಡದಿಯಲ್ಲಿ ರಿಯಲ್ ಎಸ್ಟೇಟ್ ಹೆಸರಲ್ಲಿ ಜನರಿಗೆ ಟೋಪಿ ಹಾಕಿದ್ದಾನೆ. ಮೆಗಾಸಿಟಿ ಮಾಡುತ್ತೇನೆ ಅಂತ ಟೋಪಿ ಹಾಕಿದ್ದಾನೆ. ಅದನ್ನ ಮರೆತು ಹೋಗಿದ್ದಾನಾ ಕೇಳಿ ಎಂದು ಯೋಗೇಶ್ವರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದರು.
ಮೆಡಿಕಲ್ ಕಾಲೇಜು ಸ್ಥಳಾಂತರ ಹಿಂದೆ ಡಿಕೆ ಬ್ರದರ್ಸ್‌ಗೆ ಲಾಭದ ಉದ್ದೇಶ: ಸಿ.ಪಿ.ಯೋಗೇಶ್ವರ್
ರಿಯಲ್ ಎಸ್ಟೇಟ್ ದಂಧೆ ಮಾಡಬೇಕಾದ ಅನಿವಾರ್ಯತೆ ನಮಗಿಲ್ಲ. ಮೆಡಿಕಲ್ ಕಾಲೇಜು ಕನಕಪುರದಲ್ಲೂ ಆಗುತ್ತೆ, ರಾಮನಗರದಲ್ಲೂ ಆಗುತ್ತೆ. ಇವರೆಲ್ಲ ಕೆಲಸ ಇಲ್ಲ ಅಂತ ಬಂದು ಹೀಗೆ ಗೊಂದಲ ಮಾಡುತ್ತಿದ್ದಾರೆ. ಇಬ್ಬರನ್ನೂ ಜನ ಉಗಿದು ಆಚೆ ಇಟ್ಟಿದ್ದಾರೆ. 20 ವರ್ಷದಿಂದ ಮಾಡದಿದ್ದವರು ಈಗ ಬಂದ್ ಮಾಡ್ತೀವಿ, ಹೋರಾಟ ಮಾಡ್ತೀವಿ ಅಂತ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್ ಇತರರು ಹಾಜರಿದ್ದರು.