ಅಧಿಕಾರ ಇದ್ದಾಗ ಕಾಂಗ್ರೆಸ್ ಭೂಮಿಹಕ್ಕು ಏಕೆ ಕೊಡಲಿಲ್ಲ?: ಸಂಸದ ರಾಘವೇಂದ್ರ
ಅಧಿಕಾರ ಕೈಯಲ್ಲಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡದ ಪುಣ್ಯಾತ್ಮರು ಈಗ ಅವರ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರಿಹಾಯ್ದರು.
ಶಿವಮೊಗ್ಗ (ಡಿ.01): ಅಧಿಕಾರ ಕೈಯಲ್ಲಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡದ ಪುಣ್ಯಾತ್ಮರು ಈಗ ಅವರ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರಿಹಾಯ್ದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 60 ವರ್ಷದಿಂದ ಶರವಾತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇದೆ. ಕಾಂಗ್ರೆಸ್ ಹಲವು ವರ್ಷದಿಂದ ಅಧಿಕಾರ ಮಾಡಿದೆ. ಅವರಿಗೆ ಸಂತ್ರಸ್ತರ ಬಗ್ಗೆ ಕಾಳಜಿ ಇದ್ದಿದ್ದರೆ ಯಾವತ್ತೋ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ, ರಾಜಕಾರಣ ಕಾರಣಕ್ಕೆ ಸಮಸ್ಯೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡು ಇವತ್ತು ಪಾದಯಾತ್ರೆ ಮೂಲಕ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ಶರಾವತಿ ಯೋಜನೆಯಾಗಿದ್ದು 1965ರಲ್ಲಿ, ಅರಣ್ಯ ಕಾಯ್ದೆ ಬಂದಿದ್ದು 1980ರಲ್ಲಿ. ಈ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲಿತ್ತು. ಅರಣ್ಯ ಹಕ್ಕು ಕಾಯ್ದೆ ಬರುವ ಮುನ್ನ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್‌ಗೆ ಅವಕಾಶ ಇತ್ತು. ಯಾಕೆ ಮಾಡಲಿಲ್ಲ? 1980ರ ನಂತರ ಕಾಂಗ್ರೆಸ್ ಸರ್ಕಾರ ಇತ್ತು. 2013ರ ನಂತರ ಸಿದ್ದರಾಯಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಹಿರಿಯರು ಕಂದಾಯ, ಅರಣ್ಯ ಇಲಾಖೆ ಸಚಿವರಾಗಿದ್ದರು. ಆಗಲೂ ಯಾಕೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ರೈತರ ಹೆಸರಿನಲ್ಲಿ ಹೋರಾಟ ಮಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ ಎಂದು ಕುಟುಕಿದರು. 2018 ರಲ್ಲಿ ನಿವೃತ್ತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಿತಿ ರಚಿಸಿದರು. ಅದರ ವರದಿಯ ನಂತರವೂ ಸರಿಯಾಗಿ ಗಮನಹರಿಸಲಿಲ್ಲ.
ಬಳಿಗಾರ್, ಬೆಂಬಲಿಗರ ಆಗಮನದಿಂದ ಬಿಜೆಪಿಗೆ ಆನೆಬಲ: ಬಿ.ಎಸ್.ಯಡಿಯೂರಪ್ಪ
ಸರ್ಕಾರದ ಆದೇಶವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಾದ ಜವಾಬ್ದಾರಿ ಇತ್ತು. ಅದನ್ನೂ ಮಾಡಲಿಲ್ಲ. ಇಂತಹ ಹಲವು ತಪ್ಪುಗಳಿಂದ ಹೈಕೋರ್ಚ್ ಈಗ ಸಂತ್ರಸ್ತರ ವಿರುದ್ಧವಾಗಿ ತೀರ್ಪು ನೀಡಿದೆ. ಇದಕ್ಕೆಲ್ಲಾ ಹೊಣೆ ಕಾಂಗ್ರೆಸ್. ಕಾಂಗ್ರೆಸ್‌ನ ಪಾಪದ ಕೂಸು ಇದು ಎಂದರು. ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯದೇ ಸಂತ್ರಸ್ತರಿಗೆ ಹಕ್ಕುಪತ್ರ ನೀಡಿದ್ದಾರೆ. ಕಾಂಗ್ರೆಸ್ ಮಾಡಿದ ಈ ತಪ್ಪನ್ನು ಕೋರ್ಚ್ ಎತ್ತಿಹಿಡಿದಿದೆ. ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಬಿಜೆಪಿ ಸರ್ಕಾರ ಪ್ರಯತ್ನ ಮಾಡುತ್ತಿದೆ. ಇನ್ನು ಎಷ್ಟುವರ್ಷ ಅಂತ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇಟ್ಟುಕೊಂಡು ಅಧಿಕಾರ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ ಇದ್ದರು.
‘ಬಿಜೆಪಿಗೆ ಧಮ್ಮಿರೋದಕ್ಕೆ ಅಧಿಕಾರದಲ್ಲಿರೋದು’: ಕಾಂಗ್ರೆಸ್‌ನ ಕೆಲವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಗ್ಗೆ ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಧಮ್ಮಿರೋದಕ್ಕೆ ಇವತ್ತು ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದು. ಧಮ್ಮು ಇರೋದಕ್ಕೆ ಮೋದಿ 2 ಲಕ್ಷ ಕೋಟಿ ರಸಬಗೊಬ್ಬರ ಸಬ್ಸಿಡಿ ಹಣ ಮನ್ನಾ ಮಾಡಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರು ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದಾರೆ. ಕೃಷಿ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ನಮ್ಮ ಸರ್ಕಾರ ನೆರವು ನೀಡುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು. ದೇಶದಲ್ಲಿ 16 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ರಾಜಕಾರಣಕ್ಕಾಗಿ ಏನೇನೋ ಮಾತನಾಡುವ ಕಾಂಗ್ರೆಸ್‌ನವರು ಕೈಲಾಗದವರು ಮೈ ಪರಚಿಕೊಂಡಂತೆ ಮಾಡುತ್ತಿದ್ದಾರೆ. ಇನ್ನಾದರೂ ಬಿಜೆಪಿ ನಾಯಕರ ಕುರಿತು ಕಾಂಗ್ರೆಸ್ ನಾಯಕರು ಹಗುರವಾಗಿ ಮಾತನಾಉವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ತಲಾ 10 ಕೆ.ಜಿ ಉಚಿತ ಅಕ್ಕಿ: ಸಿದ್ದರಾಮಯ್ಯ
ಬುಡಕಟ್ಟು ಜನಾಂಗಕ್ಕೆ ಇರುವ ಅರಣ್ಯ ಹಕ್ಕು ಕಾಯ್ದೆಯನ್ನು ಸಾಮಾನ್ಯ ವರ್ಗದ ಜನರಿಗೂ ತರಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ
-ಬಿ.ವೈ.ರಾಘವೇಂದ್ರ, ಸಂಸದ