ಬಳಿಗಾರ್, ಬೆಂಬಲಿಗರ ಆಗಮನದಿಂದ ಬಿಜೆಪಿಗೆ ಆನೆಬಲ: ಬಿ.ಎಸ್.ಯಡಿಯೂರಪ್ಪ
ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಸಹಸ್ರಾರು ಮತಗಳನ್ನು ಪಡೆದು ಇದೀಗ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆ ಆಗುತ್ತಿರುವ ಎಚ್.ಟಿ. ಬಳಿಗಾರ್ ಹಾಗೂ ಅವರ ಅಪಾರ ಬೆಂಬಲಿಗರ ಆಗಮನದಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿಕಾರಿಪುರ (ನ.30): ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಸಹಸ್ರಾರು ಮತಗಳನ್ನು ಪಡೆದು ಇದೀಗ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆ ಆಗುತ್ತಿರುವ ಎಚ್.ಟಿ. ಬಳಿಗಾರ್ ಹಾಗೂ ಅವರ ಅಪಾರ ಬೆಂಬಲಿಗರ ಆಗಮನದಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ನಿರ್ದೇಶಕ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬಿಜೆಪಿಗೆ ಸೇರ್ಪಡೆಯಾದ ನಂತರದಲ್ಲಿ ಇದೇ ಪ್ರಥಮ ಬಾರಿಗೆ ಪಟ್ಟಣದ ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ಅಪಾರ ಬೆಂಬಲಿಗರ ಜತೆ ಧಾವಿಸಿದ ಎಚ್.ಟಿ. ಬಳಿಗಾರ್ ಅವರನ್ನು ವಿದ್ಯುಕ್ತವಾಗಿ ಸ್ವಾಗತಿಸಿ ಅವರು ಮಾತನಾಡಿದರು.
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವವರ ಬಗ್ಗೆ ತೀರ್ಮಾನ ಕೈಗೊಳ್ಳುವ ಪರಮೋಚ್ಚ ಕೇಂದ್ರೀಯ ಸಮಿತಿಗೆ ಸದಸ್ಯರಾಗಿ ಪ್ರಧಾನಿ ನರೇಂದ್ರ ಮೋದಿ ಆಯ್ಕೆಗೊಳಿಸಿ ಬಹುದೊಡ್ಡ ಗೌರವ ಸ್ಥಾನ ನೀಡಿದ್ದಾರೆ. ಅದಕ್ಕಿಂತ ದೊಡ್ಡ ಗೌರವ ಬೇಕಾಗಿಲ್ಲ. ಮುಂದಿನ ಲೋಕಸಭಾ ಚುನಾವಣೆಗೆ ಈಗಿನ ಬಿಜೆಪಿ ಸಂಸದರಿಗಿಂತ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಗೋ ರಕ್ಷಣೆಗಾಗಿ ಗೋಶಾಲೆ ಸ್ಥಾಪನೆ: ಸಚಿವ ಪ್ರಭು ಚವ್ಹಾಣ್
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಎಚ್.ಟಿ.ಬಳಿಗಾರ್ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ. ಬಸವಣ್ಣ ಹಾಕಿಕೊಟ್ಟದಾರಿಯಲ್ಲಿ ಸಾಗುತ್ತಿದ್ದಾರೆ. ತಾಲೂಕಿನ ನೀರಾವರಿ ಯೋಜನೆಗೆ ಅವರ ಚಿಂತನೆ ಶ್ರಮ ಒಳ್ಳೆಯದು. ನೀವಿರುವ ಜಾಗ ಸರಿಯಿಲ್ಲ, ಬಿಜೆಪಿಗೆ ಆಗಮಿಸಿ ಇನ್ನಷ್ಟುಜನಪರ ಕೆಲಸ ಮಾಡಿ ಎಂದು ಹೇಳಿದಾಗ ಸಂತೋಷದಿಂದ ಒಪ್ಪಿ ಪಕ್ಷಕ್ಕೆ ಬಂದಿದ್ದಾರೆ. ಅವರು ಯಾವುದೇ ರೀತಿಯ ಕೆಲಸವನ್ನು ಕೈಗೊಂಡರೆ ಛಲ ಬಿಡದೇ ಕಾರ್ಯರೂಪಕ್ಕೆ ತರುವ ಮನೋಭಾವ ಉಳ್ಳವರು. ತಾಲೂಕಿನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅವರ ಸಲಹೆ ಸಹಕಾರ ಅಗತ್ಯವಾಗಿದೆ. ಹಾಗಾಗಿ ಅವರ ಗೌರವಕ್ಕೆ ಚ್ಯುತಿಬಾರದಂತೆ ನಡೆಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಬಿ.ವೈ. ವಿಜಯೇಂದ್ರ ಮಾತನಾಡಿ, ಬಿಎಸ್‌ವೈ ಚಿಂತನೆ ಹೋರಾಟ, ಅಧಿಕಾರ ಸಿಕ್ಕ ನಂತರ ಅಭಿವೃದ್ಧಿ, ಸರ್ವರಿಗೂ ಸಮಬಾಳು ಸಮಪಾಲು ಎನ್ನುವಂತೆ ನಡೆದುಕೊಂಡಿದ್ದಾರೆ.ನಾನು ಪಕ್ಷದ ಸಂಘಟನೆ ಮಾಡಿದ್ದೇನೆ. ಅತಂತ್ರ ವಿಧಾನಸಭೆ ಆಗಿದ್ದಾಗ ಅವರಿಗೆ ಅಧಿಕಾರ ಪಡೆಯುವ ರೀತಿಯಲ್ಲಿ ಕೆಲಸ, ಅದೇ ರೀತಿ ವಿವಿಧ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೇನೆ. ಶಿರಾ, ಕೆ.ಆರ್.ಪೇಟೆ ಗೆಲುವಿನ ಪರಿಣಾಮ ನಾನು ಹಳೇ ಮೈಸೂರು ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವ ಒತ್ತಡವಿತ್ತು. ಆದರೆ, ಇಲ್ಲಿನ ಕಾರ್ಯಕರ್ತರ ಮನವಿ ಮೇರೆಗೆ ಬಿಎಸ್‌ವೈ ನನ್ನ ಹೆಸರು ಘೋಷಿಸಿದ್ದಾರೆ. ಅದಕ್ಕೆ ಬದ್ಧನಾಗಿ ಕೆಲಸ ಮಾಡಲು ಆರಂಭಿಸಿದ್ದೇನೆ. ತಾಲೂಕಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು. ನಾನು ರಾಜಕಾರಣಕ್ಕೆ ಬರುತ್ತೇನೆ ಅಂದು ಕೊಂಡಿರಲಿಲ್ಲ. ತಂದೆ ಮಾಡಿದ ಅಭಿವೃದ್ಧಿ ರಥ ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಬಡವರ ಹಿಂದುಳಿದ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಎಚ್.ಟಿ.ಬಳಿಗಾರ್ ಮಾತನಾಡಿ, ಪ್ರಸ್ತುತ ರಾಜಕೀಯ ಬೆಳವಣಿಗೆ ಕಂಡು ಬಿಜೆಪಿಗೆ ಬಂದಿದ್ದೇನೆ. ಯಡಿಯೂರಪ್ಪ ಅವರು ರೋಚಕ ಹೋರಾಟದ ಮೂಲಕ ರಾಜಕೀಯಕ್ಕೆ ಬಂದಿದ್ದು, ಅವರು ಅನೇಕ ಬಾರಿ ವಿಧಾನಸಭೆಯಲ್ಲಿ ಗಂಭೀರ ಸಮಸ್ಯೆ ಚರ್ಚೆ ಮಾಡಿ, ಉತ್ತರ ಕೊಟ್ಟಿದ್ದಾರೆ. ಅನೇಕ ಕಲ್ಲುಮುಳ್ಳು ದಾರಿಯಲ್ಲಿ ಹಲವು ಸವಾಲನ್ನು ಎದುರಿಸಿ ನಿಂತಿದ್ದಾರೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ತಾಲೂಕಿಗೆ ರೈಲು ಸೇವೆ, ನೀರಾವರಿ ಯೋಜನೆ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಬಿಎಸ್‌ವೈ ಅವರನ್ನು ಕೇಂದ್ರದ ಸಂಸದೀಯ ಮಂಡಳಿಯ ಸಮಿತಿಯಲ್ಲಿ ಆಯ್ಕೆ ಮಾಡಿಕೊಂಡಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಗೆ ವಿಶ್ವವೇ ಗೌರವ ಕೊಡುತ್ತದೆ. ಅದು ಸಹ ಹೆಮ್ಮೆಯಾಗಿದೆ. ಈ ಹಿಂದಿನ ಪಕ್ಷದಲ್ಲೇ ಇದ್ದು ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಮಾಡುತ್ತ ಹೋದರೆ ತಾಲೂಕಿನಲ್ಲಿ ಸಾಧನೆ ಮಾಡುವುದು ಯಾವಾಗ? ಅದಕ್ಕಾಗಿ ಅವಕಾಶ ಸಿಕ್ಕಿದ್ದನ್ನು ಬಳಸಿಕೊಳ್ಳುತ್ತೇನೆ. ನಾನು ಇದ್ದ ಪಕ್ಷ ದಾರಿ ವಿಭಿನ್ನವಾದದ್ದು. ಆರಂಭದಲ್ಲಿ ಮುಜುಗರ ಎದುರಿಸಿದೆ. ಬೆಂಬಲಿಗರಿಗೆ ವಿಶ್ವಾಸ ಅವಕಾಶ ನೀಡಿ, ಅವರ ಬೇಡಿಕೆಗಳನ್ನು ಈಡೇರಿಸಲು, ರೈತರ ಕೂಲಿಕಾರ್ಮಿಕರ ಪರವಾದ ನೀತಿ ಎಂದಿಗೂ ಅನುಸರಿಸಲು ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ವಿಜಯೇಂದ್ರ ಅವರನ್ನು ಗೆಲ್ಲಿಸಿ ವಿಧಾನಸಭೆಯಲ್ಲಿ ಕೂರಿಸುವ ಕೆಲಸ ಆಗಬೇಕು. ಅದಕ್ಕೆ ಎಲ್ಲರೂ ಕೈಜೋಡಿಸಿ ಎಂದು ಸಭೆಯಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಡಡೆಗೊಂಡ ಹಲವರನ್ನು ಯಡಿಯೂರಪ್ಪನವರು ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ವೇದಿಕೆಯಲ್ಲಿ ಎಂಎಡಿಬಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣಪ್ಪ, ಎಂಸಿಎ ನಿರ್ದೇಶಕ ವಸಂತಗೌಡ, ಮುಖಂಡ ಟಿ.ಎಸ್. ಮೋಹನ್, ಚನ್ನವೀರಪ್ಪ, ರಾಮಾನಾಯ್ಕ, ರುದ್ರಪ್ಪಯ್ಯ ಸಹಿತ ಹಲವರು ಉಪಸ್ಥಿತರಿದ್ದರು.
ಉಪನಗರವಾಗಿ ನೆಲಮಂಗಲದ ಸಮಗ್ರ ಅಭಿವೃದ್ಧಿಗೆ ಕ್ರಮ: ಸಚಿವ ಸುಧಾಕರ್
ಬಳಿಗಾರ್‌ಗೆ ದೊಡ್ಡ ಜವಾಬ್ದಾರಿ ಭರವಸೆ: ಕಾಂಗ್ರೆಸ್ ಮುಳುಗುತ್ತಿರುವ ಹಡಗು. ದೇಶ ಹಾಗೂ ರಾಜ್ಯದಲ್ಲಿ ಹಲವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈಗಾಗಲೇ 80 ವರ್ಷವಾಗಿದ್ದು, ಮುಂದಿನ 10 ವರ್ಷ ಕಾಲ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ, ಪಕ್ಷ ಬಲಪಡಿಸುವ ಸಂಕಲ್ಪ ಹೊಂದಲಾಗಿದೆ. ಬರಲಿರುವ ಚುನಾವಣೆಯಲ್ಲಿ 140 ರಿಂದ 150 ಸ್ಥಾನಗಳಿಸಿ ಪುನಃ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇನೆ. ಮೂರ್ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಜತೆ ಮಾತನಾಡಿ ಬಳಿಗಾರ್ ಅವರಿಗೆ ಇಡೀ ರಾಜ್ಯದಲ್ಲಿ ಓಡಾಡುವ ಮೂಲಕ ಪಕ್ಷವನ್ನು ಬಲಪಡಿಸುವಂತಹ ಉತ್ತಮ ಸ್ಥಾನಮಾನದ ದೊಡ್ಡ ಜವಾಬ್ದಾರಿ ನೀಡುವುದಾಗಿ ಯಡಿಯೂರಪ್ಪ ಅವರು ಭರವಸೆ ನೀಡಿದರು.