ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ನಾಯಕತ್ವದ ಬಗ್ಗೆ 2026ರಲ್ಲಿ ಮಾತನಾಡುವುದಾಗಿ ಹೇಳಿ ಕುತೂಹಲ ಮೂಡಿಸಿದ್ದಾರೆ. ಶಾಸಕ ಇಕ್ಬಾಲ್ ಹುಸೇನ್ ಅವರ ಸಿಎಂ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ .

ಬೆಂಗಳೂರು: ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಬೇಡಿ. ನನ್ನ ನೇತೃತ್ವದ ಬಗ್ಗೆ 2026ಕ್ಕೆ ಮಾತನಾಡುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕುತೂಹಲ ಮೂಡಿಸಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, 2026ರಲ್ಲಿ ಜನ ನಿಮ್ಮ ನೇತೃತ್ವ ನಿರೀಕ್ಷೆ ಮಾಡಬಹುದೇ ಎಂಬ ಪ್ರಶ್ನೆಗೆ, ಈ ಬಗ್ಗೆ 2026ರಲ್ಲೇ ಮಾತನಾಡುತ್ತೇನೆ ಎಂದರು.

ಆತನ ಮಾತನ್ನು ಗಣನೆಗೆ ತೆಗೆದುಕೊಳ್ಳಬೇಡಿ

ನಿಮ್ಮ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಜ.6 ಇಲ್ಲವೇ ಜ.9ಕ್ಕೆ ನೀವು ಮುಖ್ಯಮಂತ್ರಿ ಆಗುವುದಾಗಿ ಮತ್ತೆ ಹೇಳಿಕೆ ನೀಡಿದ್ದಾರಲ್ವಾ ಎಂದು ಕೇಳಿದಾಗ, ಆತನ ಮಾತನ್ನು ಗಣನೆಗೆ ತೆಗೆದುಕೊಳ್ಳಬೇಡಿ. ಕ್ಷೇತ್ರದಲ್ಲಿ ಹೊಡೆಯುತ್ತಾರೆ ಎಂದು ಆ ರೀತಿ ಹೇಳುತ್ತಾನೆ ಎಂದರು.

2026ರ ಹೊಸ ವರ್ಷದಲ್ಲಿ ಡಿ.ಕೆ.ಶಿವಕುಮಾರ್ ಅವರ ನಿರ್ಣಯಗಳೇನು ಎಂದು ಕೇಳಿದಾಗ, ಈ ವರ್ಷ ಉತ್ತಮ ಮಳೆಯಾದ ರೀತಿ ಮುಂದಿನ ವರ್ಷವೂ ಉತ್ತಮ ಮಳೆಯಾಗಿ, ಕೆರೆ ಕಟ್ಟೆಗಳು ತುಂಬಿ ರೈತರ ಬದುಕು ಹಸನಾಗಲಿ. ನಮ್ಮ ಗ್ಯಾರಂಟಿ ಯೋಜನೆಗಳು ಮುಂದುವರಿದು ಜನರಿಗೆ ಶಕ್ತಿ ತುಂಬಲಿದೆ. ಮುಂದಿನ ವರ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಒಟ್ಟಾರೆ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವುದು ನಮ್ಮ ಗುರಿ ಎಂದರು.

ಆ ಉತ್ತಮ ಆಡಳಿತ 2026ರಲ್ಲಿ ನಿಮ್ಮ ನೇತೃತ್ವದಲ್ಲಿ ಇರುತ್ತದೆಯೇ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಉತ್ತಮ ಆಡಳಿತ ಮುಂದುವರಿಯಲಿದೆ. ಮುಂದಿನ ಏಳೂವರೆ ವರ್ಷ ಈ ಆಡಳಿತ ಮುಂದುವರಿಯಲಿದೆ ಎಂದು ಹೇಳಿದರು. ಕೋಗಿಲು ಬಳಿಯ ಅಕ್ರಮ ಶೆಡ್‌ಗಳ ತೆರವು ವಿಚಾರವಾಗಿ ಮಾತನಾಡುವಾಗ, ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಕೇರಳ ಸಿಎಂ, ಕೇರಳ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇನೆಯೇ ಹೊರತು, ಕೇರಳಿಗರ ಬಗ್ಗೆ ನಾನು ಮಾತನಾಡಿಲ್ಲ ಎಂದು ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದೇನು?

ಡಿ.ಕೆ.ಶಿವಕುಮಾರ್‌ ಅವರು ಜನವರಿಯಲ್ಲಿ ಸಿಎಂ ಆಗುತ್ತಾರೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್‌ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಭಗವಂತನ ಆಶೀರ್ವಾದದಿಂದ ಜ.6 ಅಥವಾ ಜ.9ಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು 200 ಪರ್ಸೆಂಟ್ ಕನ್ಫರ್ಮ್ ಎಂದು ಪುನರುಚ್ಚರಿಸಿದರು.

ಡಿಕೆಶಿ ಸಿಎಂ ಆಗುವುದು ಖಚಿತ: ಜನಾರ್ದನ ರೆಡ್ಡಿ

ಡಿಸಿಎಂ ಡಿಕೆಶಿ ಅವರು ಸಿಎಂ ಆಗುವುದು ಖಚಿತ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎಂದು ಶಾಸಕ ಗಾಲಿ ಜನಾರ್ದನ ರಡ್ಡಿ ಹೇಳಿದ್ದಾರೆ. ತಾಲೂಕಿನ ಮುನಿರಾಬಾದನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಂಡೂರ ಉಪಚುನಾವಣೆಯಿಂದ ಈವರೆಗೂ ಇದೇ ಮಾತನ್ನೇ ಹೇಳುತ್ತಿದ್ದೇನೆ. ಸಿದ್ದು-ಡಿಕೆ ನಡುವೆ 50:50 ಅಧಿಕಾರ ಹಂಚಿಕೆಯಾಗಿದೆ. ಸಂಕ್ರಮಣ ನಂತರ ಒಳ್ಳೆ ದಿನ, ಒಳ್ಳೆ ಮುಹೂರ್ತ ನೋಡಿಕೊಂಡು ತೀರ್ಮಾನ ಮಾಡಬಹುದು. ನಮಗೂ ಕೆಲವು ಅವರ ಆಂತರಿಕ ವಿಚಾರ ಗೊತ್ತಾಗುತ್ತವೆ ಎಂದರು.

ಉಚ್ಚಾಟಿತ ಶಾಸಕ ಯತ್ನಾಳರನ್ನು ಹೊಗಳಿದ ನಿರಾಣಿ

ರಬಕವಿ-ಬನಹಟ್ಟಿ: ರಾಜಕಾರಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುವುದು ಸಹಜ. ಆದರೆ, ನಮ್ಮಲ್ಲಿನ ಏಕತೆ ಮುಖ್ಯ. ನಾವಿಬ್ಬರೂ ಒಂದೇ ಜಿಲ್ಲೆಯವರು. ನಾವೆಲ್ಲ ಯಾವಾಗಲೂ ಒಂದೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಮುರುಗೇಶ ನಿರಾಣಿ ಅವರು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಪರ ಬ್ಯಾಟಿಂಗ್‌ ಬೀಸಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. 

ಯತ್ನಾಳ ಒಬ್ಬ ಆಲ್‌ರೌಂಡರ್‌ ಆಗಿದ್ದಾರೆ. ಆದರೆ, ನೀವು ಎಲ್ಲ ಬಾಲ್‌ಗಳಿಗೆ ಸಿಕ್ಸ್ ಬಾರಿಸಬೇಡಿ. ಒಳ್ಳೆಯ ಬಾಲ್ ಬಂದಾಗ ಮಾತ್ರ ಸಿಕ್ಸ್‌ ಹೊಡೀರಿ. ಹೀಗೆ, ಆಡಿದರೆ ನೀವು ಮ್ಯಾನ್ ಆಫ್ ದಿ ಸಿರೀಸ್ ಆಗ್ತಿರಿ ಎಂದು ಹೊಗಳಿರುವುದು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಂಡಿದ್ದರು.