ಕೋಗಿಲು ಲೇಔಟ್ ಬಳಿ ಅಕ್ರಮ ಶೆಡ್‌ಗಳ ತೆರವು ಪ್ರಕರದಲ್ಲಿ ಮೂಗು ತೂರಿಸಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ಹಾಗೂ ಕೇರಳ ಸರ್ಕಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಜಮೀರ್ ಅಹಮದ್ ಖಾನ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಬೆಂಗಳೂರು : ಕೋಗಿಲು ಲೇಔಟ್ ಬಳಿ ಅಕ್ರಮ ಶೆಡ್‌ಗಳ ತೆರವು ಪ್ರಕರದಲ್ಲಿ ಮೂಗು ತೂರಿಸಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ ಹಾಗೂ ಕೇರಳ ಸರ್ಕಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಜಮೀರ್ ಅಹಮದ್ ಖಾನ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಪ್ರತ್ಯೇಕ ಸ್ಥಳಗಳಲ್ಲಿ ಮಾತನಾಡಿ, ಭಾರತೀಯ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಪಾಕಿಸ್ತಾನ ಮೊದಲು ತನ್ನಲ್ಲಿರುವ ಅತೀವ ಬಡತನದ ಬಗ್ಗೆ ನೋಡಿಕೊಳ್ಳಲಿ. ಪಾಕಿಸ್ತಾನದ ಟೀಕೆಗೆ ಕೇಂದ್ರ ವಿದೇಶಾಂಗ ಸಚಿವಾಲಯ ಸೂಕ್ತ ಉತ್ತರ ಕೊಡಲಿ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಕೇರಳ ಸರ್ಕಾರಕ್ಕೂ ತಿರುಗೇಟು ನೀಡಿರುವ ಸಚಿವರು, ಕೇರಳ ಸರ್ಕಾರಕ್ಕೆ ಕರ್ನಾಟಕದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಕೊಟ್ಟವರು ಯಾರು? ನಾವು ಅವರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿದರೆ ಸುಮ್ಮನಿರುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಪಾಕಿಸ್ತಾನಕ್ಕೂ ಈ ವಿಷಯಕ್ಕೂ ಏನು ಸಂಬಂಧ? ನಮ್ಮ ದೇಶದ, ರಾಜ್ಯದ ವಿವರ ಮಾತನಾಡಲು ಅವರ‍್ಯಾರು? ಪಾಕಿಸ್ತಾನದವರು ಮೊದಲು ಅವರ ದೇಶದ ಮುಸ್ಲಿಮರ ಸ್ಥಿತಿಗತಿ ನೋಡಿಕೊಳ್ಳಲಿ. ಅಲ್ಲಿ ತಾಂಡವವಾಡುತ್ತಿರುವ ಬಡತನ ನೀಗಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ರಾಜಕೀಯಕ್ಕೆ ಬಂದಿದ್ದಾರೆ:
ಕೇರಳ ಸರ್ಕಾರದ ಹಸ್ತಕ್ಷೇಪ ಕುರಿತು, ಅವರು ಬಂದು ಇಲ್ಲಿ ಏನು ಮಾಡಿದ್ರು? ಏನಾದರೂ ಘೋಷಣೆ ಮಾಡಿದ್ದಾರಾ? ಅವರ ಪಕ್ಷ, ಸರ್ಕಾರ ಏನಾದರೂ ನಿರಾಶ್ರಿತರಿಗೆ ಮನೆ ಕಟ್ಟಿಕೊಡುವುದಾಗಿ ಘೋಷಿಸಿದ್ದಾರಾ? ಮುಂದಿನ ವರ್ಷ ಕೇರಳದಲ್ಲಿ ಚುನಾವಣೆ ಇದೆ. ಇದಕ್ಕಾಗಿ ರಾಜಕೀಯ ಮಾಡೋಕೆ ಇಲ್ಲಿಗೆ ಬಂದಿರೋದು ಅಷ್ಟೆ. ಉತ್ತರ ಪ್ರದೇಶದಲ್ಲೂ ಬುಲ್ಡೋಜ್ ಮಾಡಿದ್ದರು. ಯಾಕೆ ಅಲ್ಲಿಗೆ ಹೋಗಲಿಲ್ಲ? ಎಂದರು.
ಸಚಿವರೇ ಸೂಕ್ತ ಪ್ರತ್ಯುತ್ತರ ನೀಡಲಿದ್ದಾರೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಪಾಕಿಸ್ತಾನ ವಿದೇಶಾಂಗ ಸಚಿವರ ಟೀಕೆಗೆ, ನಮ್ಮ ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವರೇ ಸೂಕ್ತ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಹೇಳಿದರು. ಅಲ್ಲದೆ, ಒತ್ತುವರಿದಾರರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು, ರೋಹಿಂಗ್ಯಾಗಳು ಇದ್ದಾರೆಯೇ ಎಂದು ಪರಿಶೀಲಿಸಿ ಕೇಂದ್ರಕ್ಕೆ ವರದಿ ನೀಡುವುದಾಗಿ ಹೇಳಿದ್ದಾರೆ.
ಇದೇ ವೇಳೆ ಕೇರಳ ರಾಜ್ಯ ಸರ್ಕಾರದ ಹಸ್ತಕ್ಷೇಪಕ್ಕೆ ತಿರುಗೇಟು ನೀಡಿದ ಅವರು, ಕರ್ನಾಟಕ ಸರ್ಕಾರ ಮಾಡಿರುವ ಒತ್ತುವರಿ ತೆರವು ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಅವರು ಮೂಗು ತೂರಿಸಿರುವುದು ಸರಿಯಲ್ಲ. ಕೇರಳ ರಾಜ್ಯದ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಿದರೆ ಅವರು ಸುಮ್ಮನಿರುತ್ತಾರಾ? ಎಂದು ಪ್ರಶ್ನಿಸಿದರು.


