ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ 5 ವರ್ಷ ಸಿಎಂ ಅಂದಾಗಲೆಲ್ಲಾ ಅನುಮಾನ ಹೆಚ್ಚು ಆಗಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದ್ದಾರೆ.
ನವದೆಹಲಿ (ಜು.03): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ 5 ವರ್ಷ ಸಿಎಂ ಅಂದಾಗಲೆಲ್ಲಾ ಅನುಮಾನ ಹೆಚ್ಚು ಆಗಲಿದೆ. ಈ ಸರ್ಕಾರದಲ್ಲಿ 2 ವರ್ಷಕ್ಕೆ ಹಲವು ತಪ್ಪುಗಳು ಆಗಿದ್ದು, ಕಾಂಗ್ರೆಸ್ ಒಳಜಗಳ ನೋಡ್ತಾ ಇದ್ದರೇ 2026ಕ್ಕೆ ಮಧ್ಯಂತರ ಚುನಾವಣೆ ಬರಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿ, ಮೊನ್ನೆ ಸಿದ್ದರಾಮಯ್ಯ ನಾವು ಅಂದ್ರು (ನಾವು ಬಂಡೆ). ಇಂದು ನಾನು ಅಂತಿದ್ದಾರೆ. ಅವರು ಎಷ್ಟು ಬಾರಿ 5 ವರ್ಷ ನಾನೇ ಸಿಎಂ ಅನ್ನುತ್ತಾರೋ ಅಷ್ಟು ಸಂಶಯ ಹುಟ್ಟುತ್ತದೆ.
ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿರುವುದರಿಂದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡಲು ಆಗದೆ ರಾಜ್ಯದಲ್ಲಿ ಆಡಳಿತ ಕುಸಿದಿದ್ದು, ಭ್ರಷ್ಟಾಚಾರ ಹೆಚ್ಚಾಗಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು. ಅವರ ಪಕ್ಷದ ಶಾಸಕರೇ ನಾಯಕತ್ವ ಬದಲಾವಣೆ ಆಗಲಿದೆ ಎನ್ನುತ್ತಿದ್ದಾರೆ. ಇತ್ತ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಗರು ಶೀಘ್ರದಲ್ಲಿಯೇ ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಜನರು ನಿಮ್ಮನ್ನು (ಕಾಂಗ್ರೆಸ್) ಆಯ್ಕೆ ಮಾಡಿದ್ದು, ಇನ್ನೂ ಎರಡೂವರೆ ವರ್ಷ ಆದರೂ ಉತ್ತಮ ಆಡಳಿತ ನೀಡಿ. ಆಗದಿದ್ದರೆ ಮನೆಗೆ ಹೋಗಿ. ವಿಪಕ್ಷವಾಗಿರುವ ಬಿಜೆಪಿ ಎಲ್ಲವನ್ನೂ ಗಮನಿಸುತ್ತಿದೆ. 2 ವರ್ಷದ ಸರ್ಕಾರದಲ್ಲಿ ಹಲವು ಹಗರಣಗಳು ಆಗಿದ್ದು, ಸರ್ಕಾರ ಉಳಿಯೋದು ಕಷ್ಟವಾಗಿದೆ ಎಂದರು.
ರೈತಸ್ನೇಹಿ ಮಾರುಕಟ್ಟೆ ಸೃಷ್ಟಿಯಾಗಲಿ: ನಮ್ಮ ದೇಶದ ಎಲ್ಲ ಜನರಿಗೂ ಆಹಾರ ದೊರೆಯುತ್ತಿದೆ. ಆದರೆ ಆಹಾರ ಬೆಳೆಯುವ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಇದು ವಿಪರ್ಯಾಸವಾಗಿದ್ದು, ನಮ್ಮ ಕೃಷಿ ನೀತಿಯಲ್ಲಿ ಲೋಪದೋಷಗಳಿವೆ. ಅದಕ್ಕಾಗಿ ರೈತರ ಪರವಾಗಿರುವ ಮಾರುಕಟ್ಟೆ ಸೃಷ್ಟಿಯಾಗಬೇಕು ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹನುಮನಮಟ್ಟಿ ಗ್ರಾಮದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಮಹಾವಿದ್ಯಾಲಯದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮ್ಮ ಮೂಲ ಕಾಯಕ ಕೃಷಿ ನಮ್ಮ ದೇಶದ ಇತಿಹಾಸ ಕೃಷಿ, ಭವಿಷ್ಯವೂ ಕೃಷಿ. ನೀವು ಕೃಷಿಯ ವಿದ್ಯಾರ್ಥಿಗಳಾಗಿ ದೇಶದ ಭವಿಷ್ಯ ಕೃಷಿ ಅಂತ ನಿರೂಪಿಸಿ ತೋರಿಸಬೇಕಾಗಿದೆ.
ಕೃಷಿ ಕೂಡ ಲಾಭದಾಯಕವಾದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಕೃಷಿ ಕೇವಲ ಲಾಭವಷ್ಟೇ ಅಲ್ಲ, ಅದಕ್ಕಿಂತಲೂ ಹೆಚ್ಚು ಈ ದೇಶದ ನಾಗರಿಕರಿಗೆ ಆಹಾರ ಒದಗಿಸುವ ಜವಾಬ್ದಾರಿ ಇದೆ. ಬೇರೆ ಯಾವುದೇ ಕಂಪನಿ, ಸಂಸ್ಥೆಗೆ ಈ ಜವಾಬ್ದಾರಿ ಇಲ್ಲ ಎಂದರು. ನಮ್ಮ ದೇಶ ಸ್ವಾತಂತ್ರ‍್ಯ ಆದಾಗ 33 ಕೋಟಿ ಜನಸಂಖ್ಯೆ ಇತ್ತು ಈಗ 130 ಕೋಟಿಯಾಗಿದೆ. ಆಗ 33 ಕೋಟಿ ಜನರಿಗೆ ಆಹಾರ ಒದಗಿಸಲು ಸಾಧ್ಯವಾಗಿರಲಿಲ್ಲ. ವಿದೇಶಗಳಿಂದ ಆಹಾರ ಪದಾರ್ಥ ಆಮದು ಮಾಡಿಕೊಳ್ಳುತ್ತಿದ್ದೇವು. ಆಹಾರದ ಸುರಕ್ಷತೆ ಒಂದು ದೇಶಕ್ಕೆ ಇಲ್ಲ ಅಂದರೆ ಆ ದೇಶ ಸ್ವಾಭಿಮಾನಿ ದೇಶ ಆಗುವುದಿಲ್ಲ. ಯಾವ ದೇಶಕ್ಕೆ ಸ್ವಾಭಿಮಾನ ಇರುವುದಿಲ್ಲವೋ ಆ ದೇಶಕ್ಕೆ ಅಸ್ತಿತ್ವ ಕೂಡ ಇರುವುದಿಲ್ಲ. ಈ ದೇಶದ ಸ್ಥಾಭಿಮಾನ, ಸ್ವಾವಲಂಬನೆ, ಹಸಿರು ಕ್ರಾಂತಿ ಮಾಡಿರುವುದು ರೈತ. ಈಗ 133 ಕೋಟಿ ಜನರಿಗೆ ಆಹಾರ ಸಿಗುತ್ತಿದೆ ಎಂದರು.
