ಸಿದ್ದರಾಮಯ್ಯ ಅವರನ್ನು ಮೊದಲಿನಿಂದ ನೋಡಿದ್ದೇನೆ, ಆದರೆ ಅವರು ಇಷ್ಟು ಅಸಹಾಯಕರಾಗಿ ಇರೋದನ್ನು ನೋಡೇ ಇರಲಿಲ್ಲ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಣಿಬೆನ್ನೂರು (ಜೂ.29): ಸಿದ್ದರಾಮಯ್ಯ ಅವರನ್ನು ಮೊದಲಿನಿಂದ ನೋಡಿದ್ದೇನೆ, ಆದರೆ ಅವರು ಇಷ್ಟು ಅಸಹಾಯಕರಾಗಿ ಇರೋದನ್ನು ನೋಡೇ ಇರಲಿಲ್ಲ ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾರಿಗೋಸ್ಕರ ರಾಜೀ ಆಗ್ತಿದಾರೋ ಗೊತ್ತಿಲ್ಲ. ಇದೇ ತರ ಮುಂದುವರಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ. ಹೊಸ ಸಿದ್ದರಾಮಯ್ಯನೇ ವೀಕ್ ಆಗಿದ್ದಾರೆ ಎಂದರು.
ಬೊಮ್ಮಾಯಿ ಇದ್ದಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು ಎಂಬ ಕಾಂಗ್ರೆಸ್ ನಾಯಕರ ಆರೋಪ ಕುರಿತು ಮಾತನಾಡಿ, ಅವರದೇ ಸರ್ಕಾರ ಇದೆಯಲ್ಲ, ಡಿಪಾರ್ಟಮೆಂಟ್‌ಗಳಿವೆ, ಕಂಪೇರ್ ಮಾಡಲಿ ಎಂದರು. ಯಾವುದೇ ಪಕ್ಷದ ಸರ್ಕಾರ ಇರಲಿ, ಆಡಳಿತಾವಧಿಯ ಕೊನೆ ವರ್ಷ ರಾಜಕೀಯವಾಗಿ ತೀವ್ರ ಚಟುವಟಿಕೆ ನಡೆಯುತ್ತವೆ. ಆದರೆ ಸರ್ಕಾರದ ದುರಾಡಳಿತ ಹಾಗೂ ಜನವಿರೋಧಿಯಾಗಿರುವ ಕಾರಣ ಈಗಲೇ ಅಸ್ಥಿರತೆ ಕಾಣುತ್ತಿದೆ. ಎರಡೇ ವರ್ಷಗಳಲ್ಲಿ ಅಸ್ಥಿರತೆ ಬಂದಿದೆ. ಈ ಗೊಂದಲದ ಫಲಶ್ರುತಿ 2026ರಲ್ಲಿ ಕರ್ನಾಟಕಕ್ಕೆ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದೆ. ಯಾವಾಗ ಚುನಾವಣೆ ಬಂದರೂ ಅದನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಲ್ಲಿ ನಮಗೆ ಯಾವುದೇ ಅಧಿಕಾರ ಇಲ್ಲ, ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು. ಹಾವೇರಿ ಜಿಲ್ಲೆಯಾದ್ಯಂತ ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರಾಟ ವಿಚಾರವಾಗಿ ಮಾತನಾಡಿ, ಹಾವೇರಿ ಜಿಲ್ಲೆ ಪೂರ್ತಿ ಕೃಷಿ ಇಲಾಖೆ ಸತ್ತಿದೆ. ಸರ್ಕಾರ ರೈತರನ್ನು ಕೈ ಬಿಟ್ಟಿದೆ. ಉಸ್ತುವಾರಿನೂ ಇಲ್ಲ, ಉಸಾಬರಿನೂ ಇಲ್ಲ. ರಾಣಿಬೆನ್ನೂರಿನಲ್ಲಿ ಕಳಪೆ ಬಿತ್ತನೆ ಬೀಜ ದೊಡ್ಡ ಪ್ರಮಾಣದಲ್ಲಿದೆ. ಹಾನಗಲ್‌ನಲ್ಲಿ ಡುಪ್ಲಿಕೇಟ್ ಡಿಎಪಿ ಸಿಗುತ್ತಿದೆ. ಗೊಬ್ಬರ ರೈತರಿಗೆ ಮುಟ್ಟುತ್ತಿಲ್ಲ. ಯೂರಿಯಾ ರೈತರಿಗೆ ಯಾಕೆ ಕೊಡ್ತಾ ಇಲ್ಲ ಎಂದು ಪ್ರಶ್ನಿಸಿದರು.
ಗ್ರಾಮಾಭಿವೃದ್ಧಿಯಾಗದೇ ದೇಶಾಭಿವೃದ್ಧಿ ಸಾಧ್ಯವಿಲ್ಲ: ಗ್ರಾಮಗಳ ಅಭಿವೃದ್ಧಿ ಆಗದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕೃಷಿ ಅಭಿವೃದ್ಧಿ ಆದರೆ ಆಹಾರದ ಸುರಕ್ಷತೆ ಆಗುತ್ತದೆ. ಆಹಾರದ ಸುರಕ್ಷತೆ ಯಾವ ದೇಶಕ್ಕಿದೆಯೋ ಅದು ಸ್ವಾವಲಂಬನೆಯ ದೇಶವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ನಿರ್ಮಿಸಲಾಗುತ್ತಿರುವ ಗ್ರಾಮದೇವಿ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು. ಗ್ರಾಮ ದೇವಿಯ ಸಮುದಾಯ ಭವನ ನಿರ್ಮಾಣ ಮಾಡುವುದು ಒಂದು ನಿಮಿತ್ತ ಮಾತ್ರ, ಆದರೆ, ಎಲ್ಲರೂ ಒಟ್ಟಾಗಿ ಸೇರಿ ಮಾಡುತ್ತಿರುವುದು ನಮ್ಮ ಗ್ರಾಮೀಣ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತೋರಿಸುತ್ತದೆ ಎಂದರು. ಅಭಿವೃದ್ಧಿಯ ಸುತ್ತ ಜನ ಓಡಾಡಬಾರದು, ಜನರ ಸುತ್ತ ಅಭಿವೃದ್ಧಿ ಆಗಬೇಕು. ಎಲ್ಲಿ ಜನ ವಾಸವಾಗಿದ್ದಾರೊ ಅಲ್ಲಿ ಅಭಿವೃದ್ಧಿ ಆಗಬೇಕು. ಡಿಸಿ ಕಚೇರಿ ಸುತ್ತ ಅಭಿವೃದ್ಧಿ ಆಗುವುದಲ್ಲ. ಭಾರತ ಗ್ರಾಮಗಳಿಂದ ಕೂಡಿದ ದೇಶ, ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯ, ರಾಮರಾಜ್ಯದ ಬಗ್ಗೆ ಮಾತನಾಡಿದ್ದಾರೆ.
ಆದರೆ, ಎಲ್ಲೋ ಒಂದು ಕಡೆ ನಾವು ಮರೆತಂತೆ ಕಾಣಿಸುತ್ತದೆ. ಕೃಷಿ ಅಭಿವೃದ್ಧಿ ಆದರೆ ಆಹಾರದ ಸುರಕ್ಷತೆ ಆಗುತ್ತದೆ. ದೇಶವನ್ನು ಸ್ವಾವಲಂಬನೆಯ ಸ್ವಾಭಿಮಾನಿ ದೇಶ ಮಾಡಿರುವುದು ರೈತ. ಕೃಷಿ ಅಭಿವೃದ್ಧಿ ಆಗಿದೆ. ಆದರೆ, ರೈತ ಅಭಿವೃದ್ಧಿ ಆಗಿಲ್ಲ. ಎಲ್ಲರಿಗೂ ಆಹಾರದ ಭದ್ರತೆ ಇದೆ. ಆದರೆ, ಆಹಾರ ಬೆಳೆದಿರುವ ರೈತನ ಪರಿಸ್ಥಿತಿ ಸೋಚನೀಯವಾಗಿದೆ. ರೈತರಮನೆಯಲ್ಲಿ ಯಾರಿಗಾದರೂ ಆರೋಗ್ಯ ತಪ್ಪಿದರೆ, ಮದುವೆ ಮಾಡಿದರೆ ಸಾಲ ಹೆಚ್ಚಾಗುತ್ತದೆ. ಅದಕ್ಕೆ ನಾನು ಬ್ಯಾಂಕರ್ಸ್ ಮೀಟಿಂಗ್‌ನಲ್ಲಿ ಹೇಳಿದ್ದೇನೆ. ಅತಿ ಹೆಚ್ಚು ಬಂಡವಾಳ ಹೂಡಿಕೆ ಆಗುವುದು ಕೃಷಿ ವಲಯದಲ್ಲಿ, ಕೃಷಿ ಆದಾಯ ಹೆಚ್ಚಾಗಿ ರೈತನ ಆರ್ಥಿಕ ಸ್ಥಿತಿ ಸುಧಾರಣೆ ಆದಾಗ ಅವನ ಕೈಯಲ್ಲಿ ದುಡ್ಡಿದ್ದರೆ ಹೆಚ್ಚು ಖರ್ಚು ಮಾಡುತ್ತಾನೆ. ಸರ್ಕಾರಕ್ಕೆ ಅದಾಯ ಹೆಚ್ಚಾಗುತ್ತದೆ ಎಂದರು.
