ಕೆಲವರಿಗೆ ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ಟಿಕೆಟ್‌ ತಪ್ಪಲಿದ್ದರೆ, ಇನ್ನು ಕೆಲವರಿಗೆ ಪಕ್ಷದ ಸಂಘಟನೆಯಲ್ಲಿನ ನಿಷ್ಕ್ರೀಯತೆ ಮತ್ತು ನಿರಾಸಕ್ತಿ ಕಾರಣಕ್ಕಾಗಿ ಟಿಕೆಟ್‌ ನೀಡದೇ ಇರುವ ಸಾಧ್ಯತೆ ಇದೆ. ಜತೆಗೆ ಕೆಲವರು ಸತತವಾಗಿ ಮೂರ್ನಾಲ್ಕು ಬಾರಿ ಗೆದ್ದಿರುವುದರಿಂದ ಆಡಳಿತ ವಿರೋಧಿ ಅಲೆ ಹೊಡೆತ ನೀಡಬಹುದು ಎಂಬ ಆತಂಕದಿಂದ ಅವರಿಗೆ ಟಿಕೆಟ್‌ ನೀಡಬಾರದು ಎಂಬ ಉದ್ದೇಶ. 

ಬೆಂಗಳೂರು(ಜೂ.02): ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬೆನ್ನಲ್ಲೇ ಬಿಜೆಪಿಯು ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದು, ಹಾಲಿ ಇರುವ 25 ಸಂಸದರ ಪೈಕಿ 12ಕ್ಕೂ ಹೆಚ್ಚು ಸಂಸದರಿಗೆ ಟಿಕೆಟ್‌ ತಪ್ಪುವ ಸಾಧ್ಯತೆಯಿದೆ. ಕೆಲವರಿಗೆ ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ಟಿಕೆಟ್‌ ತಪ್ಪಲಿದ್ದರೆ, ಇನ್ನು ಕೆಲವರಿಗೆ ಪಕ್ಷದ ಸಂಘಟನೆಯಲ್ಲಿನ ನಿಷ್ಕ್ರೀಯತೆ ಮತ್ತು ನಿರಾಸಕ್ತಿ ಕಾರಣಕ್ಕಾಗಿ ಟಿಕೆಟ್‌ ನೀಡದೇ ಇರುವ ಸಾಧ್ಯತೆ ಇದೆ. ಜತೆಗೆ ಕೆಲವರು ಸತತವಾಗಿ ಮೂರ್ನಾಲ್ಕು ಬಾರಿ ಗೆದ್ದಿರುವುದರಿಂದ ಆಡಳಿತ ವಿರೋಧಿ ಅಲೆ ಹೊಡೆತ ನೀಡಬಹುದು ಎಂಬ ಆತಂಕದಿಂದ ಅವರಿಗೆ ಟಿಕೆಟ್‌ ನೀಡಬಾರದು ಎಂಬ ಉದ್ದೇಶವಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಇದೇ ವೇಳೆ ಈ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪ್ರಬಲ ಪರ್ಯಾಯ ಅಭ್ಯರ್ಥಿಗಳಿಗಾಗಿ ಶೋಧವೂ ಆರಂಭಗೊಂಡಿದ್ದು, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಾಜಿ ಸಚಿವರ ಹೆಸರೂಗಳು ಪ್ರಮುಖವಾಗಿ ಪ್ರಸ್ತಾಪವಾಗುತ್ತಿವೆ. ಹಲವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿಯನ್ನೂ ತೋರಿದ್ದಾರೆ ಎನ್ನಲಾಗಿದೆ. ಆದರೂ ಕೆಲವು ಕ್ಷೇತ್ರಗಳಲ್ಲಿ ಈಗಿರುವ ಸಂಸದರನ್ನು ಹೊರತುಪಡಿಸಿ ಪ್ರಬಲ ಪರ್ಯಾಯ ಅಭ್ಯರ್ಥಿಗಳು ಸಿಗುವುದು ಬಿಜೆಪಿಗೆ ಅಷ್ಟು ಸುಲಭವಾಗಿಲ್ಲ.

ಕಾಂಗ್ರೆಸ್‌ನ ಗ್ಯಾರಂಟಿಗೆ ಬಿಜೆಪಿ ಯೋಜನೆ ಹಣ ಕಡಿತ ಬೇಡ: ಮಾಜಿ ಸಿಎಂ ಬೊಮ್ಮಾಯಿ

ತುಮಕೂರು ಕ್ಷೇತ್ರದ ಸಂಸದ ಜಿ.ಎಸ್‌.ಬಸವರಾಜು, ಚಾಮರಾಜನಗರ ಕ್ಷೇತ್ರದ ವಿ.ಶ್ರೀನಿವಾಸ್‌ ಪ್ರಸಾದ್‌, ಚಿಕ್ಕಬಳ್ಳಾಪುರ ಕ್ಷೇತ್ರದ ಬಿ.ಎನ್‌.ಬಚ್ಚೇಗೌಡ, ಉತ್ತರ ಕನ್ನಡ ಕ್ಷೇತ್ರದ ಅನಂತಕುಮಾರ್‌ ಹೆಗಡೆ, ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ.ಸದಾನಂದಗೌಡ, ವಿಜಯಪುರ ಕ್ಷೇತ್ರದ ರಮೇಶ್‌ ಜಿಗಜಿಣಗಿ, ಕೊಪ್ಪಳ ಕ್ಷೇತ್ರದ ಕರಡಿ ಸಂಗಣ್ಣ, ಬಳ್ಳಾರಿ ಕ್ಷೇತ್ರದ ವೈ.ದೇವೇಂದ್ರಪ್ಪ, ಬೆಳಗಾವಿ ಕ್ಷೇತ್ರದ ಮಂಗಳಾ ಅಂಗಡಿ, ದಕ್ಷಿಣ ಕನ್ನಡ ಕ್ಷೇತ್ರದ ನಳಿನ್‌ಕುಮಾರ್‌ ಕಟೀಲ್‌, ಬಾಗಲಕೋಟೆ ಕ್ಷೇತ್ರದ ಪಿ.ಸಿ.ಗದ್ದಿಗೌಡರ್‌, ಹಾವೇರಿ ಕ್ಷೇತ್ರದ ಶಿವಕುಮಾರ್‌ ಉದಾಸಿ ಹಾಗೂ ದಾವಣಗೆರೆ ಕ್ಷೇತ್ರದ ಜಿ.ಎಂ.ಸಿದ್ದೇಶ್ವರ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ತಪ್ಪಬಹುದು ಎಂಬ ಮಾತು ಬಿಜೆಪಿ ಪಾಳೆಯದಿಂದಲೇ ಕೇಳಿಬರುತ್ತಿದೆ.

ಈ ಪೈಕಿ ಬಸವರಾಜು, ಶ್ರೀನಿವಾಸ್‌ ಪ್ರಸಾದ್‌ ಮತ್ತು ಬಚ್ಚೇಗೌಡರಿಗೆ ವಯಸ್ಸಿನ ಕಾರಣದಿಂದ ಟಿಕೆಟ್‌ ನಿರಾಕರಿಸಲಾಗುತ್ತಿದೆ. ಶ್ರೀನಿವಾಸ್‌ ಪ್ರಸಾದ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ವಯಂ ಘೋಷಣೆ ಮಾಡಿದ್ದಾರೆ. ಅನಂತಕುಮಾರ್‌ ಹೆಗಡೆ ಕೂಡ ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಮುಖ್ಯಮಂತ್ರಿಯೂ ಆಗಿರುವ ಸದಾನಂದಗೌಡ ಅವರು ಎಲ್ಲ ಸ್ಥಾನಮಾನ ಅನುಭವಿಸಿರುವುದರಿಂದ ಟಿಕೆಟ್‌ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ರಮೇಶ್‌ ಜಿಗಜಿಣಗಿ, ದೇವೇಂದ್ರಪ್ಪ, ಪಿ.ಸಿ.ಗದ್ದಿಗೌಡರ್‌ ಅವರು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿಲ್ಲ ಎಂಬ ಆರೋಪವಿದೆ. ಕರಡಿ ಸಂಗಣ್ಣ ಅವರು ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲೂ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್‌ ಪಡೆಯಲು ಪಕ್ಷದ ನಾಯಕತ್ವಕ್ಕೆ ಪರೋಕ್ಷವಾಗಿ ಬೆದರಿಕೆ ತಂತ್ರ ಅನುಸರಿಸಿದರು ಎಂಬ ಕಾರಣಕ್ಕೆ ಅವರಿಗೆ ವಿರೋಧ ವ್ಯಕ್ತವಾಗಿದೆ.

ಶಿವಕುಮಾರ್‌ ಉದಾಸಿ ಅವರೂ ಪಕ್ಷದ ನಾಯಕರ ಬಳಿ ತಾವು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಮಾತನ್ನು ಹೇಳಿದ್ದು, ಸದ್ಯ ತಟಸ್ಥರಾಗಿದ್ದಾರೆ ಎನ್ನಲಾಗಿದೆ. ಮಂಗಳಾ ಅಂಗಡಿ ಅವರು ಉಪಚುನಾವಣೆಯಲ್ಲಿ ಪತಿ ಸುರೇಶ್‌ ಅಂಗಡಿ ಅವರ ಅನುಕಂಪದ ಅಲೆಯ ನಡುವೆಯೂ ಗೆಲ್ಲಲು ಪ್ರಯಾಸಪಡಬೇಕಾಯಿತು. ಜತೆಗೆ ಅವರ ಬೀಗರಾದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಈಗ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್‌ಕುಮಾರ್‌ ಕಟೀಲ್‌ ಅವರು ಸತತ ಮೂರು ಬಾರಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ವಿರೋಧಿ ಅಲೆ ಬೀಸುತ್ತಿರುವುದರಿಂದ ಈ ಬಾರಿ ಗೆಲ್ಲುವುದು ಕಷ್ಟಎನ್ನಲಾಗುತ್ತಿದೆ. ಸಿದ್ದೇಶ್ವರ ಅವರೂ ನಾಲ್ಕು ಬಾರಿ ಆಯ್ಕೆಯಾಗಿರುವುದರಿಂದ ಮತ್ತು ವಯಸ್ಸಿನ ಕಾರಣದಿಂದ ಹೊಸಬರಿಗೆ ಅವಕಾಶ ಕೊಡಬೇಕು ಎಂಬ ವಾದ ಪ್ರಸ್ತಾಪವಾಗಿದೆ.

ಸೋತ ಮಾಜಿ ಸಚಿವರ ಹೆಸರು ಪ್ರಸ್ತಾಪ:

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಹಲವು ಮಾಜಿ ಸಚಿವರ ಹೆಸರುಗಳು ಮುಂಬರುವ ಲೋಕಸಭಾ ಚುನಾವಣೆಗೆ ಪ್ರಸ್ತಾಪವಾಗಿವೆ.

ಅತಿಯಾದ ಆತ್ಮವಿಶ್ವಾಸ ಬಿಜೆಪಿ ಸೋಲಿಗೆ ಕಾರಣ: ಮಾಜಿ ಸಚಿವ ಬಿ.ಶ್ರೀರಾಮುಲು

ವಿಜಯಪುರ ಕ್ಷೇತ್ರದಿಂದ ಗೋವಿಂದ ಕಾರಜೋಳ ಅಥವಾ ಅರವಿಂದ್‌ ಲಿಂಬಾವಳಿ, ತುಮಕೂರು ಕ್ಷೇತ್ರದಿಂದ ವಿ.ಸೋಮಣ್ಣ, ಬೆಂಗಳೂರು ಉತ್ತರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಿಂದ ಡಾ.ಕೆ.ಸುಧಾಕರ್‌, ಹಾವೇರಿ ಕ್ಷೇತ್ರದಿಂದ ಬಿ.ಸಿ.ಪಾಟೀಲ್‌, ಬಳ್ಳಾರಿ ಕ್ಷೇತ್ರದಿಂದ ಬಿ.ಶ್ರೀರಾಮುಲು, ಉತ್ತರ ಕನ್ನಡ ಕ್ಷೇತ್ರದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಪ್ಪಳ ಕ್ಷೇತ್ರದಿಂದ ಆನಂದ್‌ ಸಿಂಗ್‌ ಹಾಗೂ ಬಾಗಲಕೋಟೆ ಕ್ಷೇತ್ರದಿಂದ ಮುರುಗೇಶ್‌ ನಿರಾಣಿ ಅವರ ಹೆಸರುಗಳು ಪ್ರಸ್ತಾಪವಾಗಿದ್ದು, ಈ ಪೈಕಿ ಕೆಲವರು ಆಸಕ್ತಿಯನ್ನೂ ತೋರಿದ್ದಾರೆ ಎನ್ನಲಾಗಿದೆ.

ಈ ಸಂಸದರಿಗೆ ಟಿಕೆಟ್‌ ಸಿಗೋದು ಅನುಮಾನ

1.ತುಮಕೂರು - ಜಿ.ಎಸ್‌.ಬಸವರಾಜು
2.ಚಾಮರಾಜನಗರ (ಎಸ್‌ಸಿ)- ವಿ.ಶ್ರೀನಿವಾಸ್‌ ಪ್ರಸಾದ್‌
3.ಚಿಕ್ಕಬಳ್ಳಾಪುರ - ಬಿ.ಎನ್‌.ಬಚ್ಚೇಗೌಡ
4.ಉತ್ತರ ಕನ್ನಡ - ಅನಂತಕುಮಾರ್‌ ಹೆಗಡೆ
5.ಬೆಂಗಳೂರು ಉತ್ತರ - ಡಿ.ವಿ.ಸದಾನಂದಗೌಡ
6.ವಿಜಯಪುರ (ಎಸ್‌ಸಿ)- ರಮೇಶ್‌ ಜಿಗಜಿಣಗಿ
7.ಕೊಪ್ಪಳ - ಕರಡಿ ಸಂಗಣ್ಣ
8.ಬಳ್ಳಾರಿ (ಎಸ್‌ಟಿ) - ವೈ.ದೇವೇಂದ್ರಪ್ಪ
9.ಬೆಳಗಾವಿ - ಮಂಗಳಾ ಅಂಗಡಿ
10.ದಕ್ಷಿಣ ಕನ್ನಡ - ನಳಿನ್‌ಕುಮಾರ್‌ ಕಟೀಲ್‌
11.ಬಾಗಲಕೋಟೆ - ಪಿ.ಸಿ.ಗದ್ದಿಗೌಡರ್‌
12.ಹಾವೇರಿ - ಶಿವಕುಮಾರ್‌ ಉದಾಸಿ
13.ದಾವಣಗೆರೆ - ಜಿ.ಎಂ.ಸಿದ್ದೇಶ್ವರ

ಕ್ಷೇತ್ರಗಳು ಮತ್ತು ಸ್ಪರ್ಧೆಗೆ ಪ್ರಸ್ತಾಪವಾದ ಮಾಜಿ ಸಚಿವರು

1.ವಿಜಯಪುರ- ಗೋವಿಂದ ಕಾರಜೋಳ/ ಅರವಿಂದ್‌ ಲಿಂಬಾವಳಿ
2.ತುಮಕೂರು- ವಿ.ಸೋಮಣ್ಣ
3.ಬೆಂಗಳೂರು ಉತ್ತರ- ಡಾ.ಕೆ.ಸುಧಾಕರ್‌
4.ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್‌
5.ಹಾವೇರಿ- ಬಿ.ಸಿ.ಪಾಟೀಲ್‌
6.ಬಳ್ಳಾರಿ- ಬಿ.ಶ್ರೀರಾಮುಲು
7.ಉತ್ತರ ಕನ್ನಡ- ವಿಶ್ವೇಶ್ವರ ಹೆಗಡೆ ಕಾಗೇರಿ
8.ಕೊಪ್ಪಳ- ಆನಂದ್‌ ಸಿಂಗ್‌
9.ಬಾಗಲಕೋಟೆ- ಮುರುಗೇಶ್‌ ನಿರಾಣಿ