Asianet Suvarna News Asianet Suvarna News

Karnataka Monsoon Session 2022: ಇಂದಿನಿಂದ ಮಳೆಗಾಲದ ಅಧಿವೇಶನ: ಕರಪ್ಷನ್‌ ಕದನಕ್ಕೆ ಕಾಂಗ್ರೆಸ್‌ ಸಿದ್ಧತೆ

40% ಕಮಿಷನ್‌ ಸೇರಿದಂತೆ ಭ್ರಷ್ಟಾಚಾರ ಆರೋಪಗಳ ಪ್ರಸ್ತಾಪಕ್ಕೆ ಕಾಂಗ್ರೆಸ್‌ ಸಿದ್ಧತೆ, ಸಿದ್ದು ಕಾಲದ ಅರ್ಕಾವತಿ, ಶಿಕ್ಷಕರ ನೇಮಕ ಅಕ್ರಮದ ಪ್ರತ್ಯಸ್ತ್ರಕ್ಕೆ ಬಿಜೆಪಿಯೂ ರೆಡಿ

Monsoon Session Will be Start September 12th in Karnataka grg
Author
First Published Sep 12, 2022, 4:30 AM IST

ಬೆಂಗಳೂರು(ಸೆ.12): ಮಳೆಗಾಲದ ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಹತ್ತು ದಿನಗಳ ಕಲಾಪದಲ್ಲಿ 40 ಪರ್ಸೆಂಟ್‌ ಕಮಿಷನ್‌ ಸೇರಿದಂತೆ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪಗಳನ್ನು ಮುಂದಿಟ್ಟುಕೊಂಡು ಮುಗಿಬೀಳಲು ವಿರೋಧ ಪಕ್ಷಗಳು ಸಜ್ಜಾಗಿವೆ. ಮತ್ತೊಂದೆಡೆ, ರಾಜ್ಯ ಸರ್ಕಾರವೂ ಕಾಂಗ್ರೆಸ್‌ ವಿರುದ್ಧ ಅರ್ಕಾವತಿ ರೀಡೂ ಹಾಗೂ 2014-15ರ ಶಿಕ್ಷಕರ ನೇಮಕಾತಿ ಅಕ್ರಮದ ಅಸ್ತ್ರ ಸಂದಿಸುವ ಮೂಲಕ ತಿರುಗೇಟು ನೀಡಲು ಸಿದ್ಧತೆ ನಡೆದಿದೆ.

ತನ್ಮೂಲಕ ಕಲಾಪದಲ್ಲಿ ಭ್ರಷ್ಟಾಚಾರವೇ ಪ್ರಮುಖ ಚರ್ಚಾ ವಿಷಯವಾಗಿ ಬದಲಾಗಲಿದೆ. 2023ರ ಚುನಾವಣೆ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ಅಧಿವೇಶನವನ್ನು ಗಂಭೀರವಾಗಿ ಪರಿಗಣಿಸಿದ್ದು, ಆಡಳಿತ ಹಾಗೂ ವಿರೋಧಪಕ್ಷಗಳು ಪರಸ್ಪರ ಅಕ್ರಮಗಳನ್ನು ಕೆದಕಿಕೊಳ್ಳುವ ಮೂಲಕ ಕಲಾಪವನ್ನು ಬಿಸಿಯೇರಿಸುವ ನಿರೀಕ್ಷೆಯಿದೆ.

ಭಾರತ್‌ ಜೋಡೊ: 19 ದಿನಗಳ ಕೇರಳ ಯಾತ್ರೆ ಆರಂಭ

ಕಾಂಗ್ರೆಸ್‌ ಪಕ್ಷವು ಕಳೆದ ಎರಡು ಅಧಿವೇಶನಗಳಿಂದ ನಿರ್ಲಕ್ಷಿಸಿದ್ದ 40 ಪರ್ಸೆಂಟ್‌ ಕಮಿಷನ್‌ ಅಸ್ತ್ರವನ್ನು ಪ್ರಮುಖವಾಗಿ ಬಳಸಲು ಸಜ್ಜಾಗಿದೆ. ಜತೆಗೆ ಇಬ್ಬರು ಪ್ರಮುಖ ಸಚಿವರ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಸದನದಲ್ಲೇ ದಾಖಲೆ ಬಿಡುಗಡೆ ಮಾಡಲು ಉದ್ದೇಶಿಸಿದೆ. ಇಬ್ಬರೂ ಸಚಿವರ ಮೇಲಿನ ಭ್ರಷ್ಟಾಚಾರ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವವರೆಗೂ ಸದನದಲ್ಲಿ ಹೋರಾಟ ನಡೆಸಲು ಮುಂದಾಗಿದೆ. ಈ ಮೂಲಕ ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗವಾಗಿ ತೆರೆದಿಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಜತೆಗೆ, ಅತಿವೃಷ್ಟಿನಿರ್ವಹಣೆಯಲ್ಲಿನ ವೈಫಲ್ಯ, ಬೆಂಗಳೂರಿನ ದುಸ್ಥಿತಿ, ಪಿಎಸ್‌ಐ ನೇಮಕಾತಿ ಅಕ್ರಮ, ಲೋಕೋಪಯೋಗಿ, ಆರೋಗ್ಯ ಮತ್ತು ತೋಟಗಾರಿಕೆ ಇಲಾಖೆಯಲ್ಲಿನ ಭ್ರಷ್ಟಾಚಾರ, ಪಠ್ಯ ಪುಸ್ತಕ ಪರಿಷ್ಕರಣೆ ವೇಳೆ ಸಂಭವಿಸಿದ ಯಡವಟ್ಟುಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ ಮಾಡಿಕೊಂಡಿದೆ.

ದಡೇಸುಗೂರ್‌ ವಿರುದ್ಧ ದಾಖಲೆ ಬಿಡುಗಡೆ?:

ಪಿಎಸ್‌ಐ ಅಕ್ರಮದಲ್ಲಿ ಲಂಚ ಪಡೆದಿರುವುದಾಗಿ ಒಪ್ಪಿಕೊಂಡಿರುವ ಬಿಜೆಪಿ ಶಾಸಕ ಬಸವರಾಜ್‌ ದಡೇಸುಗೂರ್‌ ಅವರ ಆಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ಸಿಗರು ಒತ್ತಾಯಿಸಲಿದ್ದಾರೆ. ಜತೆಗೆ ದಡೇಸುಗೂರ್‌ ಅವರಿಗೆ ಸಂಬಂಧಿಸಿದ ಮತ್ತೆರಡು ವಿಡಿಯೋಗಳು ಕಾಂಗ್ರೆಸ್‌ಗೆ ಲಭ್ಯವಾಗಿದ್ದು, ಅವುಗಳನ್ನೂ ಬಿಡುಗಡೆ ಮಾಡುವ ಮೂಲಕ ದಡೇಸುಗೂರ್‌ ಮೇಲೆ ಕ್ರಮಕ್ಕೆ ಆಗ್ರಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆ ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಮಂಗಳವಾರ ಸಂಜೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಿ, ಬುಧವಾರದಿಂದ ಸರ್ಕಾರದ ಹೆಡೆಮುರಿ ಕಟ್ಟಲು ಕಾಂಗ್ರೆಸ್‌ ಮುಂದಾಗಲಿದೆ.

ಜೆಡಿಎಸ್‌ ಸಹ ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ, ಬೆಂಗಳೂರು ನಾಗರಿಕರು, ರೈತರ ಸಮಸ್ಯೆ ಮುಂದಿಟ್ಟುಕೊಂಡು ಸರ್ಕಾರ ಹಾಗೂ ಕಾಂಗ್ರೆಸ್‌ ಎರಡರ ಮೇಲೂ ಮುಗಿಬೀಳುವ ಸಾಧ್ಯತೆಯಿದೆ.

ಸರ್ಕಾರಕ್ಕೂ ‘ಭ್ರಷ್ಟಾಚಾರ ಅಸ್ತ್ರ’:

ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಮೂಲಕವೇ ಎದುರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಮೊದಲ ದಿನದ ಕಲಾಪವು ಸಂತಾಪ ನಿರ್ಣಯಕ್ಕೆ ಸೀಮಿತವಾಗಲಿದ್ದು, ಮಂಗಳವಾರದಿಂದ ಪ್ರತಿಪಕ್ಷಗಳಿಂದ ತೂರಿ ಬರಬಹುದಾದ ವಾಗ್ಬಾಣಗಳನ್ನು ಎದುರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟ ಸದಸ್ಯರೂ ಸಜ್ಜಾಗಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ 2015ರ ಅರ್ಕಾವತಿ ರೀಡೂ ಪ್ರಕರಣವನ್ನು ಕೆದಕುವ ಮೂಲಕ ತಿರುಗೇಟು ನೀಡಲು ಸಿದ್ಧತೆ ನಡೆಸಿದ್ದಾರೆ. ಅರ್ಕಾವತಿ ರೀಡೂ ಸಂಬಂಧ ವಿಚಾರಣೆಗೆ ಕಾಂಗ್ರೆಸ್‌ ಸರ್ಕಾರವೇ ನ್ಯಾ.ಕೆಂಪಣ್ಣ ಆಯೋಗ ರಚಿಸಿತ್ತು. ಈ ಆಯೋಗ 2017ರ ಆ.23ರಂದು ಸರ್ಕಾರಕ್ಕೆ 4 ಸಂಪುಟಗಳಲ್ಲಿ 9 ಸಾವಿರ ಪುಟಗಳ ಅಂತಿಮ ವರದಿ ಸಲ್ಲಿಸಿತ್ತು. ಆದರೆ 5 ವರ್ಷವಾದರೂ ಶಾಸನಸಭೆಯಲ್ಲಿ ವರದಿ ಮಂಡನೆಯಾಗಲಿಲ್ಲ. ಇದೀಗ ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಸರ್ಕಾರ ಮುಂದಾಗಲಿದೆ. ಜತೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿದ್ದ ವಿದ್ಯುತ್‌ ಖರೀದಿ ಒಪ್ಪಂದಗಳ ಬಗ್ಗೆಯೂ ಪ್ರಸ್ತಾಪಿಸುವ ಮೂಲಕ ತಿರುಗೇಟು ನೀಡಲಿದೆ ಎಂದು ತಿಳಿದು ಬಂದಿದೆ.

ಮತಾಂತರ ನಿಷೇಧ ಮಸೂದೆ ಮಂಡನೆ?:

ಇನ್ನು ಹಿಂದಿನ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಗೆ ವಿಧಾನ ಪರಿಷತ್‌ನ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪರಿಷತ್‌ನಲ್ಲೂ ಬಿಜೆಪಿಗೆ ಬಹುಮತ ಇರುವುದರಿಂದ ಮಸೂದೆ ಮಂಡಿಸಿ, ಒಪ್ಪಿಗೆ ಪಡೆಯಲು ಪ್ರಯತ್ನಿಸುವ ಸಾಧ್ಯತೆ ಇದೆ.

ಭಾರತ್‌ ಜೋಡೋ ಬದಲು ಕಾಂಗ್ರೆಸ್‌ ಜೋಡೋ ಮಾಡಿ: ಕೆ.ವಿರೂಪಾಕ್ಷಪ್ಪ

ಇದಲ್ಲದೆ, ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರ ರಚನೆ, 72 ಗಂಟೆಗಳಲ್ಲಿ ಭೂ ಪರಿವರ್ತನೆ ನೀಡಲು ಅಗತ್ಯವಿರುವ ಭೂ ಕಂದಾಯ ತಿದ್ದುಪಡಿ ವಿಧೇಯಕ, ಡೀಮ್‌್ಡ ಅರಣ್ಯ ಒತ್ತುವರಿ ಮಾಡಿರುವ ಚಿಕ್ಕಮಗಳೂರು ಮತ್ತಿತರ ಭಾಗದ ಬೆಳೆಗಾರರಿಗೆ ನಿರ್ದಿಷ್ಟಅವಧಿಗೆ ಭೂಮಿಯನ್ನು ಗುತ್ತಿಗೆ ನೀಡಲು ಅಗತ್ಯವಿರುವ ಕಂದಾಯ ಕಾಯಿದೆ ತಿದ್ದುಪಡಿ ವಿಧೇಯಕ, ಉದ್ಯೋಗ ನೀತಿ ಸೇರಿದಂತೆ ಹಲವು ವಿಧೇಯಕಗಳು ಮಂಡನೆಯಾಗುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಪ್ಲಾನ್‌

- ರಾಜ್ಯ ಸರ್ಕಾರದ ಮೇಲೆ ಗುತ್ತಿಗೆದಾರರು ಮಾಡಿರುವ 40% ಕಮಿಷನ್‌ ಆರೋಪ ಪ್ರಸ್ತಾಪ
- ಇಬ್ಬರು ಪ್ರಮುಖ ಸಚಿವರ ಇಲಾಖೆಯಲ್ಲಿನ ಭ್ರಷ್ಟಾಚಾರದ ಆರೋಪ ಮುಂದಿಟ್ಟು ಹೋರಾಟ
- ಅತಿವೃಷ್ಟಿನಿರ್ವಹಣೆಯಲ್ಲಿನ ವೈಫಲ್ಯ, ಬೆಂಗಳೂರಿನ ದುಸ್ಥಿತಿ ಬಗ್ಗೆಯೂ ವಾಗ್ದಾಳಿ ಸಾಧ್ಯತೆ
- ಪಿಎಸ್‌ಐ ನೇಮಕಾತಿ ಅಕ್ರಮ, ಲೋಕೋಪಯೋಗಿ, ತೋಟಗಾರಿಕೆ ಇಲಾಖೆ ಅಕ್ರಮ ಪ್ರಸ್ತಾಪ
- ಪಠ್ಯ ಪುಸ್ತಕ ಪರಿಷ್ಕರಣೆ ಎಡವಟ್ಟು, ಶಾಸಕ ದಡೇಸುಗೂರ್‌ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿವ ಸಂಭವ

ಬಿಜೆಪಿ ಪ್ಲಾನ್‌

- ಸಿದ್ದರಾಮಯ್ಯ ಸರ್ಕಾರದಲ್ಲಿ 2015ರಲ್ಲಿ ನಡೆದ ಅರ್ಕಾವತಿ ಲೇಔಟ್‌ ರೀಡೂ ಪ್ರಕರಣ ಪ್ರಸ್ತಾಪ
- ನ್ಯಾ.ಕೆಂಪಣ್ಣ ಆಯೋಗ 2017ರಲ್ಲಿ ಸಲ್ಲಿಸಿದ ಅಂತಿಮ ವರದಿಯನ್ನು ಅಸ್ತ್ರವಾಗಿಸಿಕೊಂಡು ವಾಗ್ದಾಳಿ?
- ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ವಿದ್ಯುತ್‌ ಖರೀದಿ ಒಪ್ಪಂದದ ಅಕ್ರಮಗಳ ಪ್ರಸ್ತಾಪ
- ಸೋಲಾರ್‌ ಘಟಕಗಳಿಂದ ವಿದ್ಯುತ್‌ ಖರೀದಿಸಲು ಮಾಡಿಕೊಂಡ ಒಪ್ಪಂದಗಳಲ್ಲಿ ಭಾರಿ ಗೋಲ್‌ಮಾಲ್‌
- 2014-15ರ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ಕಾಂಗ್ರೆಸ್‌ ವಿರುದ್ಧ ಕಿಡಿ
 

Follow Us:
Download App:
  • android
  • ios